ಬೆಂಗಳೂರು ಅ.17: ಏಳು ವರ್ಷದ ಬಾಲಕಿಯ ಹೃದಯ ಕಸಿ ಮಾಡಲು ನಗರದ ಶೇಷಾದ್ರಿಪುರಂನಿಂದ 14 ಕಿಮೀ ದೂರದಲ್ಲಿರುವ ಆರ್ಆರ್ನಗರದ (RR Nagar) ಸ್ಪರ್ಶ ಆಸ್ಪತ್ರೆಗೆ ಬರೀ 13 ನಿಮಿಷ 17 ಸೆಕೆಂಡುಗಳಲ್ಲಿ ಹೃದಯವನ್ನು (Heart) ಸಾಗಿಸಲಾಗಿದೆ. ಹೃದಯವನ್ನು ರವಾನಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಯಾವುದೇ ರಸ್ತೆ ಅಡಚಣೆ ಉಂಟಾಗದಂತೆ ಹಸಿರು ಕಾರಿಡಾರ್ ನಿರ್ಮಿಸಿ ಸಹಾಯ ಮಾಡಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸರ ಸಹಾಯ ಮೇರೆಗೆ ಅತಿ ವೇಗವಾಗಿ ಹೃದಯವನ್ನು ರವಾನಿಸಲಾಯಿತು. ಮತ್ತು ಸಂಚಾರ ಪೊಲೀಸರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಆಸ್ಪತ್ರೆ ಬಿಡುಗಡೆ ಮಾಡಿರುವ ವರದಿ ಪ್ರಕಾರ ಏಳು ವರ್ಷದ ಬಾಲಕಿ ಕಾರ್ಡಿಯೊಮಿಯೋಪತಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಳು. ಇದು ಹಿಗ್ಗಿದ ಹೃದಯ ಸ್ನಾಯುವಿನ ಕಾಯಿಲೆಯ ಒಂದು ವಿಧವಾಗಿದ್ದು, ಹೃದಯದ ಕೋಣೆಗಳು ತೆಳುವಾಗಿರುತ್ತದೆ, ಹಿಗ್ಗುತ್ತದೆ ಮತ್ತು ದೊಡ್ಡದಾಗಿ ಬೆಳೆಯುತ್ತದೆ. ಇದರಿಂದ ಹೃದಯ ವೈಫಲ್ಯವಾಗುವ ಸಾಧ್ಯತೆಯೂ ಇದೆ. ಇದೇ ಕಾರಣಕ್ಕೆ ಹೃದಯ ಕಸಿ ಮಾಡಲಾಗಿದೆ.
ಇದನ್ನೂ ಓದಿ: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ; 9 ಜನರ ಬಾಳಿಗೆ ಬೆಳಕು
ಅದೇ ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿ ಅಕ್ಕ ಕೂಡ 2019 ರಲ್ಲಿ ನಿಧನರಾದರು. ಕಿರಿ ಮಗಳು ಕೂಡ ಇದೇ ಕಾಯಿಲೆಯಿಂದ ಬಳಲುತ್ತಿದ್ದು, ಹೇಗಾದರು ಮಾಡಿ ಮಗಳನ್ನು ಉಳಿಸಿಕೊಳ್ಳಬೇಕು ಬಾಲಿಕಗೆ ಚಿಕಿತ್ಸೆ ಕೊಡಸಿದ್ದಾರೆ. ಆದರೂ ಬಾಲಕಿಯ ಆರೋಗ್ಯ ಹದಗೆಟ್ಟಿದೆ. ಆಗ ವೈದ್ಯರು ಹೃದಯ ಕಸಿ ಮಾಡಬೇಕು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ನವೆಂಬರ್‌ನಲ್ಲಿ ಹೃದಯ ಕಸಿ ಮಾಡಲು ನೋಂದಾಯಿಸಿದ್ದರು. ಆದರೆ ಹೃದಯ ದಾನಿ ಇಲ್ಲದೆ ಚಿಕಿತ್ಸೆ ನೀಡಲಾಗುತ್ತಿತ್ತು.
ಇನ್ನು ಹೃದಯ ರವಾನೆ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶೇಷಾದ್ರಿಪುರಂ ಮತ್ತು ಆರ್‌ಆರ್‌ನಗರ ನಡುವೆ ಹಸಿರು ಕಾರಿಡಾರ್ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿತ್ತು. ಭಾನುವಾರ, ಟ್ರಾಫಿಕ್ ಪೊಲೀಸರು ಹಸಿರು ಕಾರಿಡಾರ್ ನಿರ್ಮಿಸಿದರು. ಇದರಿಂದ ಆಂಬುಲೆನ್ಸ್ ಸಮಯಕ್ಕೆ ಸರಿಯಾಗಿ ಆಸ್ಪತ್ರೆಯನ್ನು ತಲುಪಿತು.
ಕಳೆದ ವರ್ಷ ಮಾರ್ಚ್‌ನಲ್ಲಿ ಇದೇ ರೀತಿಯ ಘಟನೆಯಲ್ಲಿ, ಹಸಿರು ಕಾರಿಡಾರ್ ನಿರ್ಮಿಸಲಾಗಿತ್ತು. ಆಗ ಕೇವಲ ಎರಡು ಗಂಟೆಗಳಲ್ಲಿ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ ಹೃದಯವನ್ನು ಸಾಗಿಸಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ