ಸಿಎಂಗೆ ಸಾಹು ಮಹಾರಾಜ್ ಕಾಲದ ಕಥೆ ಹೇಳಿ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿದ ಹೆಚ್.ಆಂಜನೇಯ
ಒಳ ಮೀಸಲಾತಿ ಮೂಲಕ ನ್ಯಾಯ ಕೊಡಿಸಬೇಕು. ನಮ್ಮ ರಾಮ ನೀವು. ನಿಮ್ಮಿಂದ ನ್ಯಾಯ ಸಿಗಬೇಕೆಂದು ಸಿಎಂ ಸಿದ್ದರಾಮಯ್ಯರಿಗೆ ಮಾಜಿ ಸಚಿವ ಆಂಜನೇಯ ಮನವಿ ಮಾಡಿದ್ದಾರೆ. ಇನ್ನು ಇದೇ ವೇಳೆ ಸಿಎಂ ಎದುರು ಸಾಹು ಮಹಾರಾಜ್ ಕಾಲದ ಮೀಸಲಾತಿ ಕಥೆ ಹೇಳಿ ಮಾಜಿ ಸಚಿವ ಹೆಚ್.ಆಂಜನೇಯ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿದ್ದಾರೆ.
ಚಿತ್ರದುರ್ಗ, ಜ.10: ಲೋಕಸಭೆ ಚುನಾವಣೆ (Lok Sabha Election) ಸಮೀಪಿಸುತ್ತಿದ್ದಂತೆ ತಂತ್ರ-ರಣತಂತ್ರ ಶುರುವಾಗಿದೆ. ಅಭ್ಯರ್ಥಿ ಆಯ್ಕೆ ಬೆಳವಣಿಗೆ ಸೇರಿದಂತೆ ಕೆಲ ವಿಚಾರದ ಚರ್ಚೆ ಹಿನ್ನೆಲೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಜೊತೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ನಿನ್ನೆ ಮಹತ್ವದ ಸಭೆಯನ್ನು ನಡೆಸಿದ್ದರು. ಸದ್ಯ ಸಭೆಯಲ್ಲಿ ಒಳ ಮೀಸಲಾತಿ ಪ್ರಸ್ತಾವನೆ ಬಗ್ಗೆ ಚರ್ಚೆ ನಡೆದಿದೆ. ಒಳ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ಸಾಧ್ಯತೆ ಇದೆ.
ಸಚಿವ ಶಿವರಾಜ ತಂಗಡಗಿ, ಪ್ರಿಯಾಂಕ್ ಖರ್ಗೆ, MLC ಪ್ರಕಾಶ್ ರಾಠೋಡ್ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಸಚಿವ ಕೆ ಹೆಚ್ ಮುನಿಯಪ್ಪ, ಆರ್.ಬಿ.ತಿಮ್ಮಾಪುರ, ಮಾಜಿ ಸಚಿವ ಹೆಚ್.ಆಂಜನೇಯ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿದ್ದಾರೆ. ಚುನಾವಣೆ ಪೂರ್ವ ಒಳ ಮೀಸಲಾತಿ ಜಾರಿ ಭರವಸೆ ನೀಡಿದ್ದೇವೆ. ಒಳ ಮೀಸಲಾತಿ ಜಾರಿ ಬಗ್ಗೆ ನಿರ್ಧರಿಸಿ ಎಂದು ಡಾ.ಜಿ.ಪರಮೇಶ್ವರ್ ಅವರು ಮನವಿ ಮಾಡಿದ್ದಾರೆ. ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜೀನಾಮೆ ಚಿಂತನೆ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.
ನ್ಯಾಯಕ್ಕಾಗಿ ಸಿಎಂಗೆ ಆಂಜನೇಯ ಮನವಿ
ಅನೇಕ ವರ್ಷಗಳಿಂದ ಮಾದಿಗ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಅಂಕಿ ಅಂಶ ಗಮನಿಸಿದರೆ ಮಾದಿಗ ಸಮುದಾಯಕ್ಕಾದ ಅನ್ಯಾಯ ತಿಳಿಯುತ್ತದೆ. ಒಳ ಮೀಸಲಾತಿ ಮೂಲಕ ನ್ಯಾಯ ಕೊಡಿಸಬೇಕು. ನಮ್ಮ ರಾಮ ನೀವು. ನಿಮ್ಮಿಂದ ನ್ಯಾಯ ಸಿಗಬೇಕೆಂದು ಸಿಎಂ ಸಿದ್ದರಾಮಯ್ಯರಿಗೆ ಮಾಜಿ ಸಚಿವ ಆಂಜನೇಯ ಮನವಿ ಮಾಡಿದ್ದಾರೆ. ಇನ್ನು ಇದೇ ವೇಳೆ ಸಿಎಂ ಎದುರು ಸಾಹು ಮಹಾರಾಜ್ ಕಾಲದ ಮೀಸಲಾತಿ ಕಥೆ ಹೇಳಿ ಮಾಜಿ ಸಚಿವ ಹೆಚ್.ಆಂಜನೇಯ ಒಳ ಮೀಸಲಾತಿ ಜಾರಿಗೆ ಆಗ್ರಹಿಸಿದ್ದಾರೆ.
ಸಾಹು ಮಹಾರಾಜ್ ಕುದುರೆ ಕಟ್ಟುವ ಜಾಗಕ್ಕೆ ಹೋಗಿರುತ್ತಾರೆ. ಕುದುರೆಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಿರುತ್ತಾರೆ. ಕುದುರೆ ನೋಡಿಕೊಳ್ಳುವವರನ್ನು ಕೇಳಿದಾಗ ಹೀಗೆ ಹೇಳುತ್ತಾರೆ, ಬಲಿಷ್ಠ ಕುದುರೆಗಳ ಗುಂಪು, ಕಡಿಮೆ ಶಕ್ತ ಕುದುರೆಗಳ ಗುಂಪು, ಕನಿಷ್ಠ ಶಕ್ತ ಕುದುರೆಗಳ ಗುಂಪು, ಬಲಹೀನ ಕುದುರೆಗಳ ಗುಂಪಾಗಿ ವಿಂಗಡಿಸಿದ್ದೇವೆ. ಎಲ್ಲಾ ಕುದುರೆ ಒಂದೇ ಕಡೆ ಕಟ್ಟಿದರೆ ಬಲಿಷ್ಠ ಕುದುರೆಗಳಿಗೆ ಮಾತ್ರ ಆಹಾರ ದಕ್ಕುತ್ತದೆ ಎಂದು ಹೇಳುತ್ತಾರೆ. ನಮ್ಮ ಮಾದಿಗ ಸಮುದಾಯದ ಸ್ಥಿತಿ ಬಲಿಷ್ಠರ ಜತೆ ಹೋರಾಡದಂತಿದೆ. ನಮ್ಮ ತಟ್ಟೆಯಲ್ಲಿರುವ ಆಹಾರವನ್ನು ಬಲಿಷ್ಠರು ಕಿತ್ತುಕೊಂಡಂತಾಗುತ್ತಿದೆ ಎಂದು ಆಂಜನೇಯ ಅವರು ಸಿಎಂಗೆ ವಿವರಿಸಿ ಒಳ ಮೀಸಲಾತಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವ ಪರೇಡ್ನಲ್ಲಿ ಕರ್ನಾಟಕದ ಟ್ಯಾಬ್ಲೋ ಕಡೆಗಣನೆಗೆ ಸಿದ್ದರಾಮಯ್ಯ ಆಕ್ರೋಶ
ಸದ್ಯ ಮುಂದಿನ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಜಾರಿ ಶಿಫಾರಸ್ಸಿಗೆ ನಿರ್ಧಾರ ಮಾಡಲಾಗುತ್ತೆ ಎಂದು ಸಿಎಂ ಭರವಸೆ ನೀಡಿದ್ದಾರೆ. ಮಾದಿಗ ಸಮುದಾಯದ ಮತ ಬ್ಯಾಂಕ್ ಮೇಲೆ ಸಿಎಂ ಕಣ್ಣಿಟ್ಟಿದ್ದಾರೆ. ಛಲವಾದಿ, ಬಂಜಾರ, ಬೋವಿ ಸಮುದಾಯ ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಧಾರ ಮಾಡುವ ಸಾಧ್ಯತೆ ಇದೆ.
ತೆಲಂಗಾಣ ಚುನಾವಣೆ ವೇಳೆ ಒಳಮೀಸಲಾತಿ ಬಗ್ಗೆ ಪ್ರಧಾನಿ ಮೋದಿ ಭರವಸೆ
ಇನ್ನು ತೆಲಂಗಾಣ ಚುನಾವಣೆ ವೇಳೆ ಮಾದಿಗ ದಂಡೋರದ ಮುಖಂಡ ಮಂದಕೃಷ್ಣ ಮಾದಿಗ ನೇತೃತ್ವದ ಸಮಾವೇಶದಲ್ಲಿ ಒಳಮೀಸಲಾತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಮಾದಿಗ ಸಮಾಜದ ಮತ ಬ್ಯಾಂಕ್ ಕಬಳಿಸಲು ಕಮಲ ಪಡೆ ಪ್ಲಾನ್ ಮಾಡಿದೆ. ಕೇಂದ್ರ ಬಿಜೆಪಿ ಒಳ ಮೀಸಲಾತಿ ಘೋಷಣೆಗೆ ಪ್ಲಾನ್ ಹಿನ್ನೆಲೆ ಕೇಂದ್ರದಿಂದ ಘೋಷಣೆಗೂ ಮುನ್ನವೆ ಒಳ ಮೀಸಲಾತಿ ಜಾರಿ ಬಗ್ಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಿಎಂ ಸಿದ್ಧರಾಮಯ್ಯ ಪ್ಲಾನ್ ಮಾಡಿದ್ದಾರೆ.
ಮಾದಿಗ ಸಮುದಾಯದ ಮತ ಬ್ಯಾಂಕ್ ಮೇಲೆ ಕೈ & ಕಮಲ ಪಡೆ ಎರಡೂ ಕಣ್ಣಿಟ್ಟಿದೆ. ಮಾದಿಗ ಸಮಾಜ ರಾಜ್ಯ ಮತ್ತು ಇತರೆಡೆ ದೊಡ್ಡ ಮತ ಬ್ಯಾಂಕ್ ಹೊಂದಿದೆ. ಛಲವಾದಿ, ಬಂಜಾರ, ಬೋವಿ ಸಮಾಜ ವಿರೋಧದ ಲೆಕ್ಕಾಚಾರ. ಪರ ಮತ್ತು ವಿರೋಧದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ & ಬಿಜೆಪಿ ತೊಡಗಿವೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ