ಬೆಂಗಳೂರು, ಏಪ್ರಿಲ್ 25: ಮತದಾನದ ಬಗ್ಗೆ ಜಾಗೃತಿ (Voting Awareness) ಮೂಡಿಸುವುದಕ್ಕಾಗಿ ಮತ್ತು ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಬೆಂಗಳೂರಿನ ಕೆಲವು ಹೋಟೆಲ್ಗಳು (Bengaluru Hotels) ವಿಶಿಷ್ಟ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿವೆ. ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ಮಾಡಿದ್ದಂತೆಯೇ ಈ ಬಾರಿಯೂ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಮತ ಚಲಾಯಿಸಿ ಬಂದವರಿಗೆ ಉಚಿತ ಆಹಾರ, ರಿಯಾಯಿತಿ ದರದಲ್ಲಿ ತಿಂಡಿ ನೀಡುವ ಬಗ್ಗೆ ಘೋಷಣೆ ಮಾಡಿವೆ.
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ‘ವೋಟ್ ಮಾಡಿ, ಊಟ ಮಾಡಿ’ ಅಭಿಯಾನದಡಿ ಮತದಾನದ ದಿನದಂದು ಮತದಾನ ಮಾಡಿದ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡುವುದಾಗಿ ಘೋಷಿಸಿದೆ. 2018 ರ ವಿಧಾನಸಭಾ ಚುನಾವಣೆ ವೇಳೆಯೂ ಹೋಟೆಲ್ ಇಂತಹ ಕೊಡುಗೆ ನೀಡಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕೇವಲ ಶೇ 54 ರಷ್ಟು ಮತದಾನವಾಗಿತ್ತು ಎಂಬುದು ಬೇಸರದ ಸಂಗತಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು. ಈ ಕುರಿತು ಜಾಗೃತಿ ಮೂಡಿಸುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ ಕೆಲವು ಹೋಟೆಲ್ಗಳು ಕೆಲವು ತಿನಿಸುಗಳನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಮತದಾನದ ದಿನದಂದು ನೀಡುತ್ತವೆ. ಸಿಹಿತಿಂಡಿಗಳು ಮತ್ತು ಕೇಕ್‌ಗಳಂತಹ ಕೆಲವು ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿವೆ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ.
ಮತದಾನ ಮಾಡಿದವರಿಗೆ ಉಚಿತ ಆಹಾರ ನೀಡುವ ಹೋಟೆಲ್ಗಳ ಅಭಿಯಾನಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದ ಮೂಲಕ ಮಂಗಳವಾರ ಅನುಮತಿ ನೀಡಿತ್ತು.
ಇದನ್ನೂ ಓದಿ: ಮತದಾನ ಮಾಡಿದವರಿಗೆ ಉಚಿತ ಆಹಾರದ ಕೊಡುಗೆ ನೀಡಲು ಹೋಟೆಲ್ಗಳಿಗೆ ಹೈಕೋರ್ಟ್ ಅನುಮತಿ
ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರಿಗೆ ಮತಗಟ್ಟೆಗೆ ಹೋಗಿ ಬರಲು Rapido ಉಚಿತ ಸೇವೆ ಘೋಷಣೆ ಮಾಡಿದೆ. ಭಾರತೀಯ ಚುನಾವಣಾ ಆಯೋಗ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೊಂದಿಗೆ ಸೇರಿಕೊಂಡು Rapido ಈ ಕ್ರಮಕ್ಕೆ ಮುಂದಾಗಿದೆ. SawaariZimmedariKi ಅಭಿಯಾನದಡಿ ಶುಕ್ರವಾರ ಹಿರಿಯ ನಾಗರಿಕರು ಮತ್ತು ವಿಕಲಚೇತನ ಮತದಾರರಿಗೆ ಉಚಿತ ಆಟೋರಿಕ್ಷಾ ಮತ್ತು ಕ್ಯಾಬ್ ಸೇವೆ ದೊರೆಯಲಿದೆ.
ಈ ವಿಶೇಷ ಸೇವೆಯನ್ನು ಪಡೆಯಲು ಮತದಾರರು ‘VOTENOW’ ಕೋಡ್ ಅನ್ನು ಬಳಸಬಹುದು ಎಂದು Rapido ತಿಳಿಸಿದೆ.
ಬಿಡದಿ ಬಳಿಯ ಜನಪ್ರಿಯ ಅಮ್ಯೂಸ್‌ಮೆಂಟ್ ಪಾರ್ಕ್ ವಂಡರ್ಲಾ, ಮತದಾನದ ಗುರುತು ಪ್ರದರ್ಶಿಸುವವರಿಗೆ ಏಪ್ರಿಲ್ 26, 27 ಮತ್ತು 28 ರಂದು ಟಿಕೆಟ್ ಮೇಲೆ ಶೇಕಡಾ 15 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.
ಲೋಕಸಭೆ ಚುನಾವಣೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ