
ನೆಲಮಂಗಲ, ಆಗಸ್ಟ್.13: ಪ್ರೇಮ ವೈಫಲ್ಯಕ್ಕೆ (Love Failure) ಮನನೊಂದು ಯುವತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ರೈಲ್ವೆ ನಿಲ್ದಾಣದ (Soldevanahalli Railway Station) ಬಳಿ ನಡೆದಿದೆ. ಡಾರ್ಜಿಲಿಂಗ್ ಮೂಲದ ಲಿಖಿತ ಜಾಸ್ಮೀನ್(24) ಮೃತ ದುರ್ದೈವಿ. 10 ದಿನಗಳ ಹಿಂದೆ ತನ್ನ ಅಕ್ಕ ಕೃತಿಕ ಜಾಸ್ಮೀನ್ ಮನೆಗೆ ಬಂದಿದ್ದ ಯುವತಿ ಇಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಲಿಖಿತ ಜಾಸ್ಮೀನ್ ಬಿಹಾರಿ ಮೂಲದ ಯುವಕನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಇಬ್ಬರ ಪ್ರೇಮ ಚನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗಾಗಿ ಲವ್ ಬ್ರೇಕ್ ಅಪ್ ಆಗಿತ್ತು. ಇದರಿಂದ ಲಿಖಿತ ಜಾಸ್ಮೀನ್ ಮನನೊಂದಿದ್ದಳು. ಸಾಯುವ ಮಾತಗಳನ್ನಾಡುತ್ತಿದ್ದಳು. ತಂಗಿ ಒಬ್ಬಳೇ ಇದ್ದರೆ ಏನಾದ್ರು ಮಾಡಿಕೊಳ್ಳುತ್ತಾಳೆಂದು ಭಯಪಟ್ಟು ಲಿಖಿತ ಅಕ್ಕ ಕೃತಿಕ ತಂಗಿಯ ನೋವು ಮರೆಸುವ ಸಲುವಾಗಿ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿದ್ದ ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿಕೊಂಡಿದ್ದರು. ಆದರೆ ಇಂದು ಬೆಳಿಗ್ಗೆ 9ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮನೆಯಿಂದ ಆಚೆ ಬಂದ ಲಿಖಿತ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೈಲ್ವೆ ಪೊಲೀಸರು ಸ್ಥಳ ಮಹಜರು ಕಾರ್ಯ ನಡೆಸಿದ್ದು ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಾಕೊಲೇಟ್ ನೀಡುವೇ ಬಾ ಎಂದು ಕರೆದು 7 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೌಲ್ವಿ
ಇನ್ನು ಮತ್ತೊಂದೆಡೆ ತಾನು ಇಷ್ಟ ಪಡುವ ಯುವತಿ ತನ್ನ ಮೆಸೇಜ್ಗಳಿಗೆ ಉತ್ತರಿಸಲಿಲ್ಲ ಎಂಬ ಕಾರಣಕ್ಕೆ ಯುವಕ ಕತ್ತರಿಯಿಂದ ಯುವತಿಯನ್ನು ಇರಿದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ನಡೆದಿದೆ. ನಿನ್ನೆ ಮುಂಜಾನೆ ಮೂಡಬಿದರೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜಿನಲ್ಲಿ ಘಟನೆ ನಡೆದಿದೆ. ತುಮಕೂರು ಮೂಲದ ಮಂಜುನಾಥ್ ಎಂಬ ಆರೋಪಿಯನ್ನು ಮೂಡಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮಂಜುನಾಥ್ ಹಾಗೂ ಹಲ್ಲೆಗೊಳಗಾದ ಯುವತಿ ಇಬ್ಬರೂ ಒಂದೇ ಊರಿನವರು. ಇಬ್ಬರೂ ಒಟ್ಟಿಗೆಯೇ ವಿದ್ಯಾಭ್ಯಾಸ ಮಾಡಿದ್ದರು. ಪಿಯುಸಿ ಓದಲು ಯುವತಿ ಮೂಡಬಿದರೆಯ ಪ್ರತಿಷ್ಠಿತ ಆಳ್ವಾಸ್ ಕಾಲೇಜಿಗೆ ಸೇರಿಕೊಂಡಳು. ಆದರೆ ಮಂಜುನಾಥ್ ಓದು ಮುಂದುವರೆಸಲಿಲ್ಲ. ಮಂಜುನಾಥ್ ಯುವತಿಗೆ ಆಗಾಗ ಮೆಸೇಜ್ ಮಾಡುತ್ತಿದ್ದ. ಆದರೆ ಯುವತಿ ಅದಕ್ಕೆ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಇದರಿಂದ ಕೋಪಗೊಂಡ ಮಂಜುನಾಥ್ ತುಮಕೂರಿನಿಂದ ಸೀದಾ ಆಳ್ವಾಸ್ ಕಾಲೇಜಿಗೆ ಬಂದು ಇಳಿದಿದ್ದ. ಯುವತಿಯನ್ನು ಭೇಟಿ ಮಾಡಲು ಅನೇಕ ಬಾರಿ ಪ್ರಯತ್ನಿಸಿದ್ದಾನೆ. ಆದರೆ ಭೇಟಿಗೆ ಸಾಧ್ಯವಾಗಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಮಂಜುನಾಥ್ ನಿನ್ನೆ ಕ್ಲಾಸ್ ರೂಂಗೆಯೇ ಹೋಗಿ ಯುವತಿಗೆ ಕತ್ತರಿಯಿಂದ ಇರಿದು ಅಟ್ಟಹಾಸ ಮೆರೆದಿದ್ದಾನೆ. ಘಟನೆಯಲ್ಲಿ ಯುವತಿ ಮುಖಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಇತರೆ ವಿದ್ಯಾರ್ಥಿಗಳು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ