ಬೆಂಗಳೂರು, ಸೆ.11: ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸದ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇಂದು ಖಾಸಗಿ ಸಾರಿಗೆ ಒಕ್ಕೂಟಗಳು ಬೆಂಗಳೂರು ಬಂದ್ಗೆ (Bengaluru Bandh) ಕರೆ ನೀಡಿವೆ. ಅದರಂತೆ, ಮಧ್ಯರಾತ್ರಿ 12 ಗಂಟೆಯಿಂದಲೇ ಆಟೋ, ಟ್ಯಾಕ್ಸಿ, ಖಾಸಗಿ ಬಸ್ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಅದಾಗ್ಯೂ, ಕಲಾಸಿಪಾಳ್ಯ ಸೇರಿದಂತೆ ಕೆಲವೆಡೆ ಆಟೋ, ಖಾಸಗಿ ಬಸ್ಗಳು ಎಂದಿನಂತೆ ಸಂಚಾರ ಆರಂಭಿಸಿವೆ.
ಖಾಸಗಿ ಸಾರಿಗೆ ಒಕ್ಕೂಟದಿಂದ ಮುಷ್ಕರಕ್ಕೆ ಕರೆ ನೀಡಿದ್ದರೂ ಕೆಆರ್ ಮಾರುಕಟ್ಟೆಯ ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣಕ್ಕೆ ಬಂದ್ ಬಿಸಿ ತಟ್ಟಿಲ್ಲ. ಕೆಲವು ಖಾಸಗಿ ಬಸ್ಗಳು ಬೆಳಗ್ಗೆಯೇ ಸಂಚಾರ ಆರಂಭಿಸಿವೆ. ಆಟೋಗಳು ಸಹ ಎಂದಿನಂತೆ ಸಂಚಾರ ನಡೆಸುತ್ತಿವೆ.
ಬೆಂಗಳೂರು-ತುಮಕೂರು ಹೆದ್ದಾರಿ, ಹಾಸನ ಹೆದ್ದಾರಿ, ಹೆಸರಘಟ್ಟ ರಸ್ತೆಯಲ್ಲಿ ಖಾಸಗಿ ಬಸ್ಗಳು ಎಂದಿನಂತೆ ಸಂಚಾರ ಆರಂಭಿಸಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸುತ್ತ ಮುತ್ತ ಯಾವುದೇ ಬದಲಾವಣೆ ಆಗಿಲ್ಲ. ಆಟೋಗಳು ಸಹ ಎಂದಿನಂತೆ ಸಂಚಾರ ನಡೆಸುತ್ತಿವೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸೋಲದೇವನಹಳ್ಳಿ, ಬಾಗಲಗುಂಟೆ, ಮಾದನಾಯಕನಹಳ್ಳಿ, ನೆಲಮಂಗಲ ಉಪ ವಿಭಾಗದ ಪೊಲೀಸರು ಸ್ಥಳದಲ್ಲಿ ನಿಯೋಜನೆಗೊಂಡಿದ್ದಾರೆ.
ಬಂದ್ ಇದ್ದರೂ ಟ್ಯಾಕ್ಸಿಯನ್ನು ರಸ್ತೆಗೆ ಇಳಿಸಿದ ಚಾಲಕನಿಗೆ ಮೈಸೂರು ಪೇಟ ಹಾರ ಹಾಗೂ ಶಾಲು ಹಾಕಿ ಸನ್ಮಾನ ಮಾಡಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮಾನವೀಯವಾಗಿ ನಡೆದುಕೊಂಡ ಘಟನೆ ನಡೆದಿದೆ. ಮಾಮ ಕೆಲಸ ಮಾಡೋ ಹೋಗೋ ಎಂದು ಇತರೆ ಚಾಲಕರು ನಿಂದಿಸಿದ್ದಾರೆ. ಮನೆಗೆ ಹೋಗುತ್ತಿದ್ದೇನೆ ಅಣ್ಣ ಎಂದರೂ ಕೇಳದ ಕಿಡಿಗೇಡಿಗಳು, ಆತನಿಗೆ ಬೈದು ಮುಖಕ್ಕೆ ಉಗಿದು ಅಮಾನವೀಯವಾಗಿ ನಡೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಬಂದ್: ಖಾಸಗಿ ಸಾರಿಗೆ ಸಂಘಟನೆಗಳಿಂದ ಇಂದು ಸಪ್ತ ದಿಗ್ಬಂಧನ, ರ್ಯಾಲಿ ಸಾಗುವ ಮಾರ್ಗಗಳು ಹೀಗಿವೆ
ಇಂದು ಬಂದ್ಗೆ ಕರೆಕೊಟ್ಟಿದ್ದರೂ ವಿಮಾನ ನಿಲ್ದಾಣಕ್ಕೆ ಬಂದ್ ಬಿಸಿ ತಟ್ಟಿಲ್ಲ. ಇದಕ್ಕೆ ಕಾರಣ, ಹಲವು ಟ್ಯಾಕ್ಸಿಗಳು ಎಂದಿನಂತೆ ಕಾರ್ಯಾಚರಣೆ ನಡೆಸುತ್ತಿವೆ. ಏರ್ಪೋಟ್ನ ಕೆಎಸ್ಟಿಡಿಸಿ ಟ್ಯಾಕ್ಸಿಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಕೆಲವು ಟ್ಯಾಕ್ಸಿ ಚಾಲಕರಿಂದ ಪ್ರತ್ಯಕ್ಷ ಬೆಂಬಲ ವ್ಯಕ್ತವಾದರೆ, ಕೆಲವರು ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಂದ್ ಲೆಕ್ಕಿಸದೇ ರಸ್ತೆಗೆ ಇಳಿದ ಕೆಎಸ್ಟಿಡಿಸಿ ಟ್ಯಾಕ್ಸಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ಏರ್ಪೋರ್ಟ್ ರಸ್ತೆಯ ಚಿಕ್ಕಜಾಲ ಬಳಿ ತಡರಾತ್ರಿ ನಡೆದಿದೆ. ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವೇಳೆ ಕಲ್ಲು ತೂರಾಟ ನಡೆಸಲಾಗಿದ್ದು, ಕಾರಿನ ಗ್ಲಾಸ್ ಪುಡಿಯಾಗಿದೆ. ಸದ್ಯ ಚಿಕ್ಕಜಾಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ನಾಳೆ ಬೆಂಗಳೂರು ಬಂದ್ಗೆ ಕರೆ: ಪರ್ಯಾಯ ಮಾರ್ಗಗಳು ಹೀಗಿವೆ
ಚಿಕ್ಕಜಾಲ ಸೇರಿದಂತೆ ಕೆಲವಡೆ ಏರ್ಪೋಟ್ ಟ್ಯಾಕ್ಸಿ ಮೇಲೆ ಕಲ್ಲು ತೂರಾಟ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ವಿಮಾನ ನಿಲ್ದಾಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಒಲಾ ಉಬರ್ ಸೇರಿದಂತೆ ಬಸ್ ನಿಲ್ದಾಣಗಳಲ್ಲೂ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಅಲ್ಲದೆ, ರಸ್ತೆಗಿಳಿಯುತ್ತಿರುವ ಚಾಲಕರಿಗೆ ಪೊಲೀಸರ ಅಭಯ ಸಿಕ್ಕಿದ್ದು, ಪೊಲೀಸ್ ಭದ್ರತೆಯಲ್ಲಿ ಪ್ರಯಾಣಿಕರು ಟ್ಯಾಕ್ಸಿಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ.
ಹೆಬ್ಬಳಾದಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಂದಿನಂತೆ ಖಾಸಗಿ ವಾಹನಗಳು ಸಂಚರಿಸುತ್ತಿವೆ. ಆದರೂ ಹೆಚ್ಚಿನ ಜನರು ಆಟೋ, ಒಲಾ ಬಿಟ್ಟು ಸರ್ಕಾರಿ ಬಸ್ಸುಗಳತ್ತ ಮುಖ ಮಾಡುತ್ತಿದ್ದಾರೆ. ಜನರಿಗೆ ಸಮಸ್ಯೆಯಾಗದಂತೆ ಹೆಚ್ಚಿನ ಸರ್ಕಾರಿ ಬಸ್ಗಳನ್ನು ರಸ್ತೆಗೆ ಇಳಿಸುತ್ತಿರುವ ಹಿನ್ನೆಲೆ ಜನರು ಎಂದಿನಂತೆ ಸಂಚರಿಸುತ್ತಿದ್ದಾರೆ.
ಅತ್ತಿಬೆಲೆಯಲ್ಲಿ ಟಿಟಿ ವಾಹನದಲ್ಲಿ ಜನರು ಸಂಚಾರ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಕೆಲವು ಸಂಘಟನೆಗಳು, ವಾಹನ ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ. ಟಿಟಿಯಿಂದ ಪ್ರಯಾಣಿಕರನ್ನು ಕೆಳಗೆ ಇಳಿಸಿ ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರು ಜಾಲಹಳ್ಳಿ ಕ್ರಾಸ್ ಬಳಿ ಆಟೋ ಚಾಲಕರ ಪ್ರತಿಭಟನೆ ಕಾವು ಹೆಚ್ಚಾಗಿದೆ. ರಸ್ತೆಗೆ ಇಳಿದ ಆಟೋ, ಕಾರುಗಳನ್ನು ತಡೆಯುತ್ತಿರುವ ಚಾಲಕರು, ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಟಯರ್ಗಳ ಗಾಳಿ ತೆಗೆದು ಬೆಂಗಳೂರು ಸಾರತಿ ಸೇನೆಯ ಕಾರ್ಯಕರ್ತರು ಆಕ್ರೋಶ ಹೊರಹಾಕುತ್ತಿದ್ದಾರೆ.
ಬಂದ್ ಮಧ್ಯೆಯೂ ರಸ್ತೆಗಿಳಿದ ಆಟೋಗಳ ಪೈಕಿ ಕೆಲವು ಆಟೋ ಚಾಲಕರು ಹೆಚ್ಚಿನ ಹಣ ಪೀಕುತ್ತಿದ್ದಾರೆ. ಎಂದಿಗಿಂದ ಎರಡು ಪಟ್ಟು ಜಾಸ್ತಿ ಬಾಡಿಗೆ ಪಡೆಯುತ್ತಿದ್ದಾರೆ. ಇದರಿಂದ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:51 am, Mon, 11 September 23