ಬೆಂಗಳೂರು: ಸಲೂನ್‌ನಲ್ಲಿ (Salon) ಕೆಲಸ ಮಾಡಲು ಭಾನುವಾರ ಸಂಜೆ ನವದೆಹಲಿಯಿಂದ (Delhi) ಬೆಂಗಳೂರಿಗೆ (Bengaluru) ಬಂದಿದ್ದ 31 ವರ್ಷದ ಕೇಶ ವಿನ್ಯಾಸಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (KIA) ನಾಪತ್ತೆಯಾಗಿದ್ದಾರೆ ಎಂದು ಆತನ ಸ್ನೇಹಿತ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಯೋಗೀಶ್‌ಕುಮಾರ್ ರೋಜಾನಾ ನಾಪತ್ತೆಯಾದ ವ್ಯಕ್ತಿ.
ಯೋಗೀಶ್‌ಕುಮಾರ್ ರೋಜಾನಾ ದೆಹಲಿ ಮೂಲದವರಾಗಿದ್ದು, ಇವರು ಸ್ನೇಹಿತ ಅನೀಸ್ ಕೆಲಸ ಮಾಡುತ್ತಿರುವ ಕಾಮನಹಳ್ಳಿಯ ಸಲೂನ್‌ನಲ್ಲಿ ಕೆಲಸ ಮಾಡಲು ಸೆಪ್ಟೆಂಬರ್ 15 ರಂದು ಬೆಂಗಳೂರಿಗೆ ಬಂದಿದ್ದರು. ಆದರೆ ಯೋಗೀಶ್‌ಕುಮಾರ್ ರೋಜಾನಾ ಅವರಿಗೆ ಇಲ್ಲಿಯ ಕೆಲಸ ಹೊಂದಾಣಿಕೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಮರಳಿ ದೆಹಲಿಗೆ ಹೋಗಲು ನಿರ್ಧರಿಸಿದ್ದರು. ಈ ವಿಷಯವನ್ನು ಯೋಗೀಶ್‌ಕುಮಾರ್ ರೋಜಾನಾ ಪತ್ನಿಗೆ ತಿಳಿಸಿದ್ದರು.
ಹೀಗಾಗಿ ಯೋಗೀಶ್‌ಕುಮಾರ್ ರೋಜಾನಾ ಅವರ ಪತ್ನಿ ರಿಟರ್ನ್ ಟಿಕೆಟ್ ಬುಕ್ ಮಾಡಲು ಮುಂದಾದರು. ಆದರೆ ಯಾವುದೇ ಟಿಕೆಟ್‌ಗಳು ತಕ್ಷಣಕ್ಕೆ ಲಭ್ಯವಾಗದ ಕಾರಣ, ಮರುದಿನ ಬೆಳಿಗ್ಗೆ (ಸೆಪ್ಟೆಂಬರ್ 16) ಅವರು ಆಕಾಶ ಏರ್ ಟಿಕೆಟ್ ಬುಕ್ ಮಾಡಿದ್ದರು. ಹೀಗಾಗಿ ನಾನು ಅವರನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಮನೆಗೆ ಹೋದೆ. ರಾತ್ರಿ ವಿಮಾನ ನಿಲ್ದಾಣದಲ್ಲಿ ಕಾದು ಬೆಳಗಿನ ಫ್ಲೈಟ್ ಹತ್ತುವುದಾಗಿ ಹೇಳಿದ್ದರು. ಆದರೆ, ಅವರು ವಿಮಾನ ಹತ್ತಲೇ ಇಲ್ಲ ಮತ್ತು ವಿಮಾನ ಕೂಡ ದೆಹಲಿಗೆ ಹೋಗಿಲ್ಲ ಎಂದು ಅನೀಸ್ ಹೇಳಿದ್ದಾರೆ.
ರೋಜಾನಾ ಅವರ ಮೊಬೈಲ್ಗೆ ಪದೇ ಪದೇ ಕರೆ ಮಾಡಿದೆ, ಫೋನ್ ಸ್ವಿಚ್ ಆಫ್ ಆಗಿದೆ. ಕೂಡಲೇ ಈ ವಿಷಯವನ್ನು ವಿಮಾನ ನಿಲ್ದಾಣ ಪೊಲೀಸರಿಗೆ ತಿಳಿಸಿದೆ. ಸೆಪ್ಟೆಂಬರ್ 17 ರ ಸಂಜೆ ಮಿಸ್ಸಿಂಗ್ ಕೇಸ್ ದಾಖಲಿಸಿದೆ. ರೋಜಾನಾ ಅವರ ಫೋನ್ ಟ್ರ್ಯಾಕ್ ಮಾಡಿದಾಗ ವಿಮಾನ ನಿಲ್ದಾಣದಿಂದ 20 ಕಿಮೀ ದೂರದಲ್ಲಿ ಮೊಬೈಲ್ ಪತ್ತೆಯಾಗಿದೆ. ಆತ ವಿಮಾನ ನಿಲ್ದಾಣದಿಂದ ಹೊರನಡೆದು ಬೆಂಗಳೂರಿನಲ್ಲೇ ಎಲ್ಲೋ ಇದ್ದಾನೆ ಎಂಬ ಶಂಕೆ ಇದೆ ಎಂದು ಅನೀಸ್ ಹೇಳಿದರು.
ಯೋಗೀಶ್‌ಕುಮಾರ್ ರೋಜಾನಾ ಅವರನ್ನು ಕಳೆದ ಮೂರು ವರ್ಷಗಳಿಂದ ನಾನು ಬಲ್ಲೆ. ದೆಹಲಿಯಲ್ಲಿ ತನ್ನದೇ ಆದ ಸಲೂನ್ ನಡೆಸುತ್ತಿದ್ದಾರೆ. ಆದರೆ ಅಲ್ಲಿ ಅಷ್ಟೊಂದು ಸಂಪಾದನೆ ಆಗುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಕೆಲಸ ಮಾಡಿ ಹೆಚ್ಚು ಗಳಿಸಬಹುದೆಂದು ಬಂದಿದ್ದರು. ಅಲ್ಲದೇ ರೋಜನಾ ನಮ್ಮ ಸಲೂನ್ನಲ್ಲೇ ಕೆಲಸ ಮಾಡಲಿ ಎಂದು ನನ್ನ ಮಾಲಿಕರಿಗೆ ಶಿಫಾರಸು ಮಾಡಿದ್ದೆ ಎಂದು ಸ್ನೇಹಿತ ಅನೀಸ್ ತಿಳಿಸಿದ್ದಾರೆ.
ರೋಜನಾ ಅವರು ಈ ಹಿಂದೆ ಮೂರು ವರ್ಷಗಳ ಕಾಲ ಬೆಂಗಳೂರಿನಲ್ಲಿ ಕೇಶ ವಿನ್ಯಾಸಕನಾಗಿ ಕೆಲಸ ಮಾಡಿದ್ದರು. ಇತ್ತೀಚಿಗೆ ಮರಳಿ ದೆಹಲಿಗೆ ಹೋಗಿ ಅಲ್ಲಿಯೇ ಉದ್ಯೋಗ ಮಾಡಲು ಆರಂಭಿಸಿದ್ದರು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ