ಬೆಂಗಳೂರು: ರಾಜ್ಯದಲ್ಲಿ ಭಾರೀ ಮಳೆ(Karnataka Rains) ಸುರಿಯುತ್ತಿರುವ ಹಿನ್ನೆಲೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ಡಾ. ಸುಧಾಕರ್(Dr K Sudhakar) ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಮಟ್ಟದಲ್ಲಿ ಆರೋಗ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ.
ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ, ಜಪಾನೀಸ್ ಎನ್ಸಫಲೈಟಿಸ್, ಆನೆಕಾಲು ಮೊದಲಾದ ರೋಗಗಳು ಹರಡುವ ತೀವ್ರ ಸಾಧ್ಯತೆ ಇದೆ. ಹೀಗಾಗಿ ಪ್ರತಿ ಜಿಲ್ಲಾಡಳಿತ ಆರೋಗ್ಯ ಇಲಾಖೆ ಸಮನ್ವಯದೊಂದಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಡಾ. ಸುಧಾಕರ್ ಸೂಚನೆ ನೀಡಿದ್ದಾರೆ. ಜಿಲ್ಲೆಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದ ರ್ಯಾಪಿಡ್ ರೆಸ್ಪಾನ್ಸ್ ಟೀಮ್‌ಗಳು ಸಿದ್ಧವಾಗಿರಬೇಕು. ಹಳ್ಳಿ ಹಾಗೂ ವಾರ್ಡ್ ಮಟ್ಟದಲ್ಲೂ ಪರಿಸ್ಥಿತಿ ನಿರ್ವಹಿಸಲು ಸಜ್ಜಾಗಿರಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಸ್ಥಳೀಯ ಮಟ್ಟದಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ ಕುರಿತು ಕೂಡಲೇ ಅಧ್ಯಯನ ನಡೆಸಬೇಕು. ರೋಗಿಗಳ ಆರೈಕೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಪರಿಶೀಲನೆ ಹಾಗೂ ಸಮನ್ವಯಕ್ಕೆ ನಿಯಂತ್ರಣ ಕೊಠಡಿ ಆರಂಭಿಸಬೇಕು. ತಪಾಸಣಾ ಕಿಟ್, ಔಷಧಿ, ಕೀಟನಾಶಕ ಸೇರಿದಂತೆ ಅಗತ್ಯ ಉತ್ಪನ್ನ ಪೂರೈಕೆ ಬಗ್ಗೆ ನಿಗಾ ಇರಿಸಬೇಕು. ಪ್ರತಿ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಲು ಸಮನ್ವಯ ಸಭೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಔಷಧಿ ಸೇರಿದಂತೆ ಅಗತ್ಯ ವಸ್ತು ಪೂರೈಕೆ ಖಚಿತಪಡಿಸಿಕೊಳ್ಳಲು ಆರೋಗ್ಯಾಧಿಕಾರಿಗಳು ಹಾಗೂ ಇತರೇ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಔಷಧಿ ಪೂರೈಕೆ ಬಗ್ಗೆ ಪ್ರತಿ ಜಿಲ್ಲಾಡಳಿತ ಖಚಿತಪಡಿಸಿಕೊಳ್ಳಬೇಕು. ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹೊಸ ರೋಗಿಗಳ ದಾಖಲಾತಿ, ಚಿಕಿತ್ಸೆ, ತಪಾಸಣೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆರೋಗ್ಯ ಸಚಿವ ಡಾ. ಸುಧಾಕರ್ ನಿರ್ದೇಶನ ನೀಡಿದ್ದಾರೆ.
Published On - 8:49 pm, Thu, 14 July 22