ಬೆಂಗಳೂರು: ಹೊಸ ತಳಿಯ ಕೊವಿಡ್19 ವೈರಾಣು ಆತಂಕ ಹಿನ್ನೆಲೆ ಸೋಮವಾರ ಅಥವಾ ಮಂಗಳವಾರ ಆರೋಗ್ಯ ಇಲಾಖೆ ಹಾಗೂ ತಾಂತ್ರಿಕ ಸಲಹಾ ಸಮಿತಿ ಜೊತೆ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಸಭೆ ನಡೆಸಲಿದ್ದಾರೆ. ಆರೋಗ್ಯ ಸಚಿವ ಸುಧಾಕರ್ ಆರೋಗ್ಯ ಇಲಾಖೆ ಜೊತೆ ಪ್ರತ್ಯೇಕ ಸಭೆ ನಡೆಸಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಾಂತ್ರಿಕ ಸಲಹಾ ಸಮಿತಿ ಜೊತೆಗೂ ಮಹತ್ವದ ಸಮಾಲೋಚನೆ ನಡೆಸಲಿದ್ದಾರೆ. ಜಿನೋಮಿಕ್ ಸೀಕ್ವೆನ್ಸ್ ಕುರಿತು ಸರ್ಕಾರ ಹೆಚ್ಚಿನ ಲಕ್ಷ್ಯ ವಹಿಸಿದೆ. ಕಳೆದ 15 ದಿನಗಳ ಹಿಂದೆಯೇ ಒಮಿಕ್ರಾನ್ ಮಾದರಿಯ ಕೊವಿಡ್ ತಳಿ ಎಂಟ್ರಿ ಕೊಟ್ಟಿದೆಯಾ ಎಂಬ ಪರಿಶೀಲನೆ ನಡೆಸಲಿದ್ದಾರೆ.
ಈ ಸಂಬಂಧ, ಕಳೆದ 15 ದಿನಗಳ ಹಿಂದೆಯೇ ಕೇರಳದಿಂದ ಬಂದ ವಿದ್ಯಾರ್ಥಿಗಳ ಮರು ಪರೀಕ್ಷೆ ನಡೆಸಬೇಕಿದೆ. ಮರು ಪರೀಕ್ಷೆ ಮೂಲಕ ಹೊಸ ತಳಿ ಎಂಟ್ರಿ ಕೊಟ್ಟಿಲ್ಲ ಎನ್ನುವುದನ್ನು ಸರ್ಕಾರ ಖಚಿತಪಡಿಸಿಕೊಳ್ಳಲಿದೆ. ಆತಂಕಕಾರಿ ವೈರಸ್ ಬಗ್ಗೆ ನಿನ್ನೆಯಷ್ಟೇ ಸಿಎಂ ಬಸವರಾಜ ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆಗೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಮಾರ್ಗಸೂಚಿ ಕ್ರಮ ಅನುಸರಿಸಲು ಆರೋಗ್ಯ ಸಚಿವರು ಸಭೆ ನಡೆಸಲಿದ್ದಾರೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮ ವಹಿಸುವ ಕುರಿತು ನಾಳೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಆಫ್ರಿಕಾದ ವಿವಿಧ ದೇಶಗಳು ಹಾಗೂ ಹಾಂಕಾಂಗ್ ಪ್ರಯಾಣಿಕರ ಪರಿಶೀಲನೆಗೆ ಪ್ರತ್ಯೇಕ ಮಾರ್ಗಸೂಚಿ ಸಾಧ್ಯತೆ ಇದೆ. ಜಿನೋಮಿಕ್ ಸೀಕ್ವೆನ್ಸ್ ವರದಿ ಬಂದ ಬಳಿಕ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಆರೋಗ್ಯ ಸಚಿವರಿಗೆ ತಾಂತ್ರಿಕ ಸಲಹಾ ಸಮಿತಿ ವಿವರ ಒದಗಿಸಲಿದೆ. ಒಮಿಕ್ರಾನ್ ತಳಿಯ ಕೊವಿಡ್ ದುಷ್ಪರಿಣಾಮಗಳು, ಲಕ್ಷಣಗಳು, ಆರೋಗ್ಯ ಇಲಾಖೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ವಿವರ ನೀಡಲಿದೆ. ತಾಂತ್ರಿಕ ಸಲಹಾ ಸಮಿತಿ ವರದಿ ಬಳಿಕ ಇದೇ ವಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಕೊಡಗು- ಕೇರಳ ಭಾಗದಲ್ಲಿ ಹೈ ಅಲರ್ಟ್
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ನಿರ್ದೇಶನ ಹಿನ್ನಲೆ ಕೊಡಗು-ಕೇರಳ ಗಡಿಯಲ್ಲಿ ಹೈ-ಅಲರ್ಟ್ ಸೂಚಿಸಲಾಗಿದೆ. ಕೊಡಗಿನ ಗಡಿ ಕರಿಕೆ, ಕುಟ್ಟ, ಮಾಕುಟ್ಟ ಭಾಗದಲ್ಲಿ ಬಿಗಿ ಭದ್ರತೆ ಮಾಡುವಂತೆ ಹೇಳಲಾಗಿದೆ. ಗಡಿ ದಾಟಿ ಬರುವವರಿಗೆ ಕೊರೊನಾ ಆರ್ಟಿಪಿಸಿಆರ್ ಕಡ್ಡಾಯ ಇರಲಿದೆ. ಪ್ರತಿಯೊಬ್ಬರಿಗೂ ಆರೋಗ್ಯ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡುತ್ತಿದ್ದಾರೆ. ಕೊರೊನಾದ ಬೆನ್ನಲ್ಲೇ ಕೇರಳ ರಾಜ್ಯದ 16 ಜನರಲ್ಲಿ ನೋರೋ ವೈರಸ್ ಪತ್ತೆ ಆಗಿದೆ. ಹೀಗಾಗಿ, ವಾಂತಿ, ಭೇದಿ, ಜ್ವರ ಲಕ್ಷಣವಿದ್ದವರ ತಪಾಸಣೆ ನಡೆಸಲಾಗುತ್ತಿದೆ. ಈವರೆಗೆ ಕೊಡಗಿನಲ್ಲಿ ನೋರೊ ರೋಗದ ಲಕ್ಷಣ ಕಾಣಿಸಿಕೊಂಡಿಲ್ಲ ಎಂದು ತಿಳಿಸಲಾಗಿದೆ.
ಧಾರವಾಡ: ಡಿಸೆಂಬರ್ 1ರವರೆಗೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ
ಎಸ್ಡಿಎಂ ಕಾಲೇಜಿನಲ್ಲಿ ಕೊರೊನಾ ಕೇಸ್ ಹೆಚ್ಚಳ ಹಿನ್ನೆಲೆ ಕಾಲೇಜಿನ 500 ಮೀಟರ್ ವ್ಯಾಪ್ತಿ ಕಂಟೇನ್ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ. ಕಂಟೇನ್ಮೆಂಟ್ ಜೋನ್ ವ್ಯಾಪ್ತಿ ಶಾಲೆ, ಕಾಲೇಜುಗಳಿಗೆ ರಜೆ ನೀಡಿ ಆದೇಶಿಸಲಾಗಿದೆ. ಡಿಸೆಂಬರ್ 1ರವರೆಗೆ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ಧಾರವಾಡ ಡಿಸಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ; ಜಾತ್ರೆ ನಡೆಯುವ ಸ್ಥಳದಲ್ಲಿಯೇ ಕೊರೊನಾ ಟೆಸ್ಟಿಂಗ್, ವ್ಯಾಕ್ಸಿನೇಷನ್ಗೆ ಸಿದ್ಧತೆ