ನೀವು ನಿಜವಾಗ್ಲೂ ಇಂಜಿನಿಯರಿಂಗ್ ಮಾಡಿದ್ದೀರಾ? ರಸ್ತೆಗಳನ್ನ ತೋರಿಸಿ ಅಧಿಕಾರಿಗಳಿಗೆ ಕೃಷ್ಣಬೈರೇಗೌಡ ಕ್ಲಾಸ್

ಬೆಂಗಳೂರು ಅಭಿವೃದ್ಧಿಗೆ ಮೆಟ್ರೋ ಅತ್ಯಗತ್ಯ.ಆದ್ರೆ ಇದೇ ಮೆಟ್ರೋ ಕಾಮಗಾರಿ ಈಗ ಜನರ ಪಾಲಿಗೆ ಸಂಕಷ್ಟವಾಗಿ ಪರಿಣಮಿಸಿದೆ.ಕೆ.ಆರ್. ಪುರಂನಿಂದ ಹೆಬ್ಬಾಳ, ಏರ್‌ಪೋರ್ಟ್ ರಸ್ತೆವರೆಗಿನ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಇಳಿದ ಸಚಿವ ಕೃಷ್ಣಬೈರೇಗೌಡರಿಗೆ ಕಂಡಿದ್ದು ಅಸಮರ್ಪಕ ಕಾಮಗಾರಿ ನಿರ್ವಹಣೆ. ಮಾನ್ಯತಾ ಟೆಕ್ ಪಾರ್ಕ್ ಮುಂಭಾಗದಲ್ಲಿ ಕಾಮಗಾರಿ ನಡೆಯುತ್ತಿರುವ ವೇಗ ಕಂಡು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೀವು ನಿಜವಾಗ್ಲೂ ಇಂಜಿನಿಯರಿಂಗ್ ಮಾಡಿದ್ದೀರಾ? ರಸ್ತೆಗಳನ್ನ ತೋರಿಸಿ ಅಧಿಕಾರಿಗಳಿಗೆ ಕೃಷ್ಣಬೈರೇಗೌಡ ಕ್ಲಾಸ್
Krishna Byre Gowda
Edited By:

Updated on: Oct 22, 2026 | 9:37 PM

ಬೆಂಗಳೂರು, (ಅಕ್ಟೋಬರ್ 22): ಸಚಿವ ಕೃಷ್ಣಬೈರೇಗೌಡ ಅವರು ಇಂದು (ಅಕ್ಟೋಬರ್ 22 ಕೆ.ಆರ್. ಪುರಂನಿಂದ ಹೆಬ್ಬಾಳ, ಏರ್‌ಪೋರ್ಟ್ ರಸ್ತೆವರೆಗಿನ ಕಾಮಗಾರಿಗಳ ಪ್ರಗತಿ ಪರಿಶೀಲನೆ ಮಾಡಿದ್ದು, ಈ ವೇಳೆ ಅಧಿಕಾರಿಗಳು, ಇಂಜಿನಿಯರ್​​​​ಗಳಿಗೆ ಫುಲ್ ತರಾಟೆಗೆ ತೆಗೆದುಕೊಂಡಿದ್ದಾರೆ. ಅಸಮರ್ಪಕ ಕಾಮಗಾರಿ ಕಂಡು ಸಿಡಿಮಿಡಿಗೊಂಡ ಕೃಷ್ಣಬೈರೇಗೌಡ, ಕೆಲಸ ಯಾವಾಗ ಮುಗಿಯೋದು ಅಧಿಕಾರಿಗಳನ್ನೇ ಪ್ರಶ್ನಿಸಿದ್ದಾರೆ. ವರ್ಷಗಳು ಕಳೆದರೂ ಕಾಮಗಾರಿ ವೇಗ ಪಡೆದುಕೊಳ್ಳದಿದ್ದರೆ ಜನರ ಸಂಕಷ್ಟಕ್ಕೆ ಕೊನೆ ಯಾವಾಗ? ಕಂಟ್ರಾಕ್ಟರ್‌ಗಳು ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ, ಸಣ್ಣಪುಟ್ಟ ಸಮಸ್ಯೆಗಳನ್ನೂ ಪರಿಹರಿಸದೆ ನೆಪ ಹೇಳುತ್ತಿದ್ದಾರೆ ಎನ್ನುವುದು ಸಚಿವರ ಆಕ್ರೋಶಕ್ಕೆ ಕಾರಣವಾಗಿದೆ.

ಅಧಿಕಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕ್ಲಾಸ್

ಕಾಮಗಾರಿ ನಿಧಾನಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವರು, ರಸ್ತೆಗಳ ದುಸ್ಥಿತಿ ಕಂಡು ಮತ್ತಷ್ಟು ಕೆರಳಿದ್ದಾರೆ. ಸರ್ವೀಸ್ ರಸ್ತೆಯ ತುಂಬೆಲ್ಲ ಗುಂಡಿಗಳು. ವಾಹನ ಸವಾರರಿಗೆ ಸಂಚರಿಸಲು ಸರಿಯಾದ ಜಾಗವೂ ಇಲ್ಲ.ಇತ್ತ ಮೆಟ್ರೋ ಕಾಮಗಾರಿ ಹೆಸರಲ್ಲಿ ರಸ್ತೆಯ ಬಹುಭಾಗಕ್ಕೆ ಬ್ಯಾರಿಕೇಡ್ ಹಾಕಲಾಗಿದೆ.ಇದನ್ನ ಕಂಡ ಸಚಿವ ಕೃಷ್ಣಬೈರೇಗೌಡ ಚೀಫ್ ಇಂಜಿನಿಯರ್‌ಗೇ ನೇರವಾಗಿ ಪ್ರಶ್ನೆ ಮಾಡಿದ್ದಾರೆ.ನೀವು ನಿಜವಾಗ್ಲೂ ಇಂಜಿನಿಯರಿಂಗ್ ಮಾಡಿದ್ದೀರಾ? ಈ ರಸ್ತೆಯಲ್ಲಿ ಯಾರಾದ್ರೂ ಸಂಚಾರ ಮಾಡಬಹುದಾ? ಕಾಮಗಾರಿ ನಿರ್ವಹಿಸುವ ಅಧಿಕಾರಿಗಳೇ ರಸ್ತೆ ಸಮಸ್ಯೆಗೆ ಉತ್ತರ ಕೊಡದಿದ್ದರೆ ಜನರ ಸಮಸ್ಯೆ ಬಗೆಹರಿಸುವವರು ಯಾರು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಕಡಿವಾಣಕ್ಕೆ ಖಾದರ್ ದಿಟ್ಟ ಹೆಜ್ಜೆ: ಇಲ್ಲಿದೆ ಸಭೆ ಮುಖ್ಯಾಂಶಗಳು

ಸಾರ್ವಜನಿಕರ ರಸ್ತೆಗಳನ್ನೇ ಒತ್ತುವರಿ ಮಾಡಿಕೊಳ್ಳುವುದು ಯಾಕೆ?

ಮೆಟ್ರೋ ಕಾಮಗಾರಿ ನಡೆಯಲಿ. ಆದ್ರೆ ಅದರ ಹೆಸರಲ್ಲಿ ಸಾರ್ವಜನಿಕರ ರಸ್ತೆಗಳನ್ನೇ ಒತ್ತುವರಿ ಮಾಡಿಕೊಳ್ಳುವುದು ಯಾಕೆ. ಕಾಮಗಾರಿಗೆ ಎಷ್ಟು ಜಾಗ ಬೇಕೋ ಅಷ್ಟನ್ನೇ ಬಳಸಿ, ಅನಗತ್ಯವಾಗಿ ಹೆಚ್ಚುವರಿ ಜಾಗಕ್ಕೆ ಬ್ಯಾರಿಕೇಡ್ ಹಾಕಬೇಡಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.ಕಂಟ್ರಾಕ್ಟರ್‌ಗಳಿಗೆ ಜಾಗ ಮಾಡಿಕೊಡುವುದಕ್ಕಾಗಿ ಜನರನ್ನ ಸಂಕಷ್ಟಕ್ಕೆ ತಳ್ಳಬೇಡಿ. ಮುಂದಿನ ಮಂಗಳವಾರದೊಳಗೆ ಅನಗತ್ಯ ಬ್ಯಾರಿಕೇಡ್‌ಗಳನ್ನ ತೆರವುಗೊಳಿಸುವಂತೆ ಡೆಡ್‌ಲೈನ್ ಕೂಡ ನೀಡಿದ್ದಾರೆ.

ನವೆಂಬರ್ ಮೊದಲ ವಾರದಲ್ಲಿ ಪಿಂಕ್ ಲೈನ್ ಸೇವೆ ಆರಂಭಿಸುವ ಗುರಿ

ಇನ್ನು ಪಿಂಕ್ ಲೈನ್ ಮೆಟ್ರೋ ಆರಂಭ ಮಾಡುವ ಬಗ್ಗೆ ಮಾತನಾಡಿದ ಸಚಿವರು, ಪಿಂಕ್ ಲೈನ್ ಮೆಟ್ರೋ ಆರಂಭಕ್ಕೆ ಕೇಂದ್ರ ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ.ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಪಿಂಕ್ ಲೈನ್ ಎಲಿವೇಟೆಡ್ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ ಇದುವರೆಗೂ ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ನಾನೇ ದೆಹಲಿಗೆ ತೆರಳಿ ಈ ಬಗ್ಗೆ ಚರ್ಚಿಸುತ್ತೇನೆ. ನವೆಂಬರ್ ಮೊದಲ ವಾರದಲ್ಲಿ ಪಿಂಕ್ ಲೈನ್ ಮೆಟ್ರೋ ಸೇವೆ ಆರಂಭಿಸುವ ಗುರಿ ಹೊಂದಿರುವುದಾಗಿ ತಿಳಿಸಿದ್ದಾರೆ.


ಒಟ್ನಲ್ಲಿ ಮೆಟ್ರೋ ನಿಧಾನಗತಿಯ ಕಾಮಗಾರಿ ಸಚಿವ ಕೃಷ್ಣಬೈರೇಗೌಡರಿಗೆ ಕೋಪ ನೆತ್ತಿಗೇರುವಂತೆ‌ ಮಾಡಿದೆ. ಇಷ್ಟು ದಿನ ಜನ ಬೇಸರಗೊಳ್ಳುತ್ತಿದ್ರು. ಈಗ ಸಚಿವರೂ ಬೇಸರಗೊಂಡಿದ್ದಾರೆ. ಸಚಿವರ ಕ್ಲಾಸ್ ನಂತರವಾದ್ರೂ ಬಿಎಂಆರ್ಸಿಎಲ್ ಕಾಮಗಾರಿಗೆ ವೇಗ ನೀಡುತ್ತಾ ನೋಡಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us