ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹತ್ಯೆ: ಶಾಸಕ ಮುನಿರತ್ನರನ್ನು ವಿಚಾರಣೆ ನಡೆಸುವಂತೆ ಒತ್ತಾಯ
ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಕೇಸ್ನಲ್ಲಿ ಇದೀಗ ಶಾಸಕ ಮುನಿರತ್ನರ ಹೆಸರು ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುನಿರತ್ನರನ್ನು ವಿಚಾರಣೆ ನಡೆಸುವಂತೆ ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯ ಮುಕುಂದರಾಜ್ ಒತ್ತಾಯಿಸಿದ್ದಾರೆ.
ಬೆಂಗಳೂರು, ನವೆಂಬರ್ 05: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಕೇಸ್ನಲ್ಲಿ ಇದೀಗ ಶಾಸಕ ಮುನಿರತ್ನರ (Munirathna) ಹೆಸರು ಕೇಳಿಬಂದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುನಿರತ್ನರನ್ನು ವಿಚಾರಣೆ ನಡೆಸುವಂತೆ ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯ ಮುಕುಂದರಾಜ್ ಒತ್ತಾಯಿಸಿದ್ದಾರೆ. ಹುಣಸಮಾರನಹಳ್ಳಿಯಲ್ಲಿ ಪರವಾನಗಿ ಪಡೆಯದೆ ಬಂಡೆಗಳು ಸ್ಫೋಟಿಸಲಾಗಿತ್ತು. ಈ ಸಂಬಂಧ ವರದಿ ಸಿದ್ಧಪಡಿಸಿ ಡಿಸಿಗೆ ಕೊಲೆಯಾದ ಪ್ರತಿಮಾ ನೀಡಿದ್ದರು. ಹುಣಸಮಾರನಹಳ್ಳಿ ಪ್ರಕರಣದಲ್ಲಿ ಶಾಸಕ ಮುನಿರತ್ನ 2ನೇ ಆರೋಪಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ರಾಜಸ್ವಧನದಲ್ಲೂ ನಷ್ಟ ಉಂಟು ಮಾಡಿದ್ದಾರೆಂದು ವರದಿಯಲ್ಲಿ ಆರೋಪಿಸಲಾಗಿತ್ತು. ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಬಗ್ಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ. ಎಲ್ಲ ಆಯಾಮದಲ್ಲೂ ಬಿಜೆಪಿ ಶಾಸಕ ಮುನಿರತ್ನಗೆ ನೋಟಿಸ್ ನೀಡಿ ತನಿಖೆ ನಡೆಸುವಂತೆ ಸೂರ್ಯ ಮುಕುಂದರಾಜ್ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯ ಮುಕುಂದರಾಜ್ ಪೋಸ್ಟ್
ಈ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯ ಮುಕುಂದರಾಜ್, ಇವತ್ತು ಕೊಲೆಯಾಗಿರುವ ಹಿರಿಯ ಭೂವಿಜ್ಞಾನಿ ಪ್ರತಿಮಾ ಅವರು ಪ್ರಭಾವಿ ರಾಜಕಾರಣಿ ಮಾಜಿ ಸಚಿವ ಶಾಸಕ ಸಿಡಿ ಕಂಪನಿಗಳ ಮಾಲೀಕ ಮುನಿರತ್ನ ವಿರುದ್ಧ ಅಕ್ರಮ ಸ್ಪೋಟಕ ಬಳಕೆ ಮಾಡಿ ಕಲ್ಲು ಶಿಲೆಗಳನ್ನು ಪುಡಿ ಮಾಡಿದ್ದ ಸಂಬಂಧ ಹಾಗೂ ಸರ್ಕಾರಕ್ಕೆ 25 ಲಕ್ಷ ರಾಯಧನ ನಷ್ಟ ಮಾಡಿದ್ದ ಕಾರಣಕ್ಕೆ ಹುಣಸಮಾರನಹಳ್ಳಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಬಹುಶಃ ಇವರ ಸಹೋದರನ ಹಳೆ ನಂಟು ಈ ಕೊಲೆ ಪ್ರಕರಣದಲ್ಲಿ ಏನಾದರೂ ಹಸ್ತಕ್ಷೇಪ ಮಾಡಿರಬಹುದು ಪೊಲೀಸರು ತನಿಖೆ ನಡೆಸಬಹುದು ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ದಂಡುಪಾಳ್ಯ ಸಿನಿಮಾ ರೀತಿಯಲ್ಲಿ ಹತ್ಯೆ
ಶನಿವಾರ (ನವೆಂಬರ್ 04) ಸಂಜೆ ಸಂಜೆ 7:45ಕ್ಕೆ ಪ್ರತಿಮಾ ಅವರನ್ನು ಕಾರು ಚಾಲಕ ಮನೆಗೆ ಡ್ರಾಪ್ ಮಾಡಿ ಬಳಿಕ ಅಲ್ಲಿಂದ ಚಾಲಕ ತಮ್ಮ ಮನೆಗೆ ತೆರಳಿದ್ದ. ಕಾರಿನ ಚಾಲಕ ಮನೆಯ ಕಡೆಗೆ ಹೋದ ನಂತರ ಮೊದಲನೆ ಮಹಡಿಯಲ್ಲಿದ್ದ ತಮ್ಮ ಮನೆಗೆ ತೆರಳಿದ ಪ್ರತಿಮಾ ಅವರು ಬಾಗಿಲೆಗೆ ಹಾಕಿದ್ದ ಬೀಗವನ್ನು ತೆಗೆದಿದ್ದಾರೆ. ಮನೆಯ ಭದ್ರತೆಗಾಗಿ ಮುಖ್ಯ ಬಾಗಿಲ ಜೊತೆಗೆ ಅದರ ಮುಂಭಾಗ ಕಬ್ಬಿಣದ ಬಾಗಿಲನ್ನೂ ಅಳವಡಿಕೆ ಮಾಡಲಾಗಿತ್ತು.
ಇದನ್ನೂ ಓದಿ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಹತ್ಯೆ: ಕಲ್ಲು ಕ್ವಾರಿ ಮಾಫಿಯಾಕ್ಕೆ ಬಲಿಯಾದ್ರಾ ಪ್ರತಿಮಾ?
ಹೀಗಾಗಿ, ಕಬ್ಬಿಣದ ಬಾಗಿಲು ತೆರೆದು, ನಂತರ ಮುಖ್ಯ ಬಾಗಿಲನ್ನು ತೆರೆದು ಮನೆಯೊಳಗೆ ಕಾಲಿಟ್ಟಿದ್ದಾರೆ. ಪ್ರತಿಮಾ ಅವರು ಮನೆಯೊಳಗೆ ಕಾಲಿಡುತ್ತಿದ್ದಂತೆಯೇ ಹಿಂದಿನಿಂದ ಬಂದ ಹಂತಕರು ಕೂಡಲೇ ಪ್ರತಿಮಾ ಅವರ ಕುತ್ತಿಗೆಗೆ ಹಗ್ಗದಿಂದ ಬಿಗಿದಿದ್ದಾನೆ. ಅಲ್ಲದೇ ಮತ್ತೋರ್ವ ಚೀರಾಡಲು ಆಗದಂತೆ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದಾನೆ.
ನಂತರ ಪ್ರತಿಮಾರನ್ನು ಮನೆಯೊಳಗೆ ಎಳೆದೊಯ್ದು ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಹಂತಕರು ದಂಡುಪಾಳ್ಯ ಸಿನಿಮಾ ಮಾದರಿಯಲ್ಲಿ ಪ್ರತಿಮಾರ ಕುತ್ತಿಗೆಯನ್ನು ಚಾಕುವಿನಿಂದ ಸೀಳಿದ್ದಾರೆ. ಇನ್ನು ಪ್ರತಿಮಾ ಅವರು ಕಚೇರಿಗೆ ತೆಗೆದುಕೊಂಡು ಹೋಗಿ ವಾಪಸ್ ಬಂದಿದ್ದ ಊಟದ ಬ್ಯಾಗ್ ಹಾಗೂ ಅವರ ಚಸ್ಮಾ ಕೂಡ ಬಾಗಿಲ ಬಳಿಯೇ ಬಿದ್ದಿತ್ತು ಎನ್ನುವುದು ತಿಳಿದುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:06 pm, Sun, 5 November 23