ಬೆಂಗಳೂರು, ಜುಲೈ 24: ಆನೇಕಲ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಕೈದಿಗಳಿಗೆ(Parappana Agrahara Jail) ಅಪ್ಪನ ಮನೆಯಂತಾಗಿದೆ. ಎಷ್ಟೇ ಎಚ್ಚರಿಕೆ ವಹಿಸಿದರೂ, ಎಷ್ಟೇ ವಾರ್ನಿಂಗ್ ಕೊಟ್ಟರೂ ಇಲ್ಲಿನ ಪರಿಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ಕೈದಿಗಳ ಕಳ್ಳಾಟ ನಿಂತಿಲ್ಲ. ಇತ್ತೀಚೆಗಷ್ಟೇ ಉಗ್ರ ನಜೀರ್(T Nazir) ಪರಪ್ಪನ ಆಗ್ರಹಾರದಲ್ಲೇ ಇದ್ದುಕೊಂಡು ಉಗ್ರ ಚಟುವಟಿಕೆಗಳಲ್ಲಿ ಶಾಮೀಲಾಗುವಂತ ಕೈದಿಗಳಿಗೆ ಪ್ರಚೋದನೆ ನೀಡಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿತ್ತು. ಇದೀಗ ಮತ್ತೆ ಜೈಲಿನಲ್ಲಿ ಮೊಬೈಲ್ ಫೋನ್ಗಳು(Mobiles) ಪತ್ತೆಯಾಗಿವೆ. ಜೈಲಾಧಿಕಾರಿಗಳ ತಪಾಸಣೆ ವೇಳೆ ಕೈದಿಗಳ ಕಳ್ಳಾಟ ಬಯಲಾಗಿದೆ.
ಕಳೆದ 21ರ ರಾತ್ರಿ ಅಧಿಕಾರಿಗಳು ಧೀಡಿರ್ ತಪಾಸಣೆ ನಡೆಸಿದ್ದು ಜೈಲಿನ ಟವರ್ ಒಂದರ ಆರನೇ ಬ್ಯಾರಕ್ನಲ್ಲಿ ಮೊಬೈಲ್ ಫೋನ್ಗಳು ಸಿಕ್ಕಿವೆ. ಕೈದಿಗಳು ಶೌಚಾಲಯದಲ್ಲಿ ಮೊಬೈಲ್ ಫೋನ್ ಬಚ್ಚಿಟ್ಟಿದ್ದಾರೆ. ಸದ್ಯ ಜೈಲಾಧಿಕಾರಿಗಳು ಮೂರು ಮೊಬೈಲ್ ಫೋನ್ಗಳನ್ನ ವಶಕ್ಕೆ ಪಡೆದಿದ್ದಾರೆ. ಸರ್ಕಾರ ಎಷ್ಟೇ ಕ್ರಮ ಕೈಗೊಂಡ್ರು ಜೈಲಿನಲ್ಲಿ ಅಕ್ರಮ ಚಟುವಟಿಕೆ ನಿಲ್ಲುತ್ತಿಲ್ಲ. ಪದೇ ಪದೇ ಮೊಬೈಲ್ ಫೋನ್, ಮಾದಕ ವಸ್ತುಗಳು ಪತ್ತೆಯಾಗುತ್ತಿವೆ. ಸದ್ಯ ಈಗ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮೊಬೈಲ್ ಫೋನ್ಗಳನ್ನ ಯಾರು ಬಳಕೆ ಮಾಡುತ್ತಿದ್ರು ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬಂಧಿತರಿಗೆ ಜೈಲಿನಲ್ಲೇ ಉಗ್ರ ತರಬೇತಿ ನೀಡಿದ್ದು ಹೇಗೆ ನಜೀರ್? ತನಿಖೆಗೆ ಆದೇಶಿಸಿದ ಎಡಿಜಿಪಿ
ಇನ್ನು ಕೆಲ ದಿನಗಳ ಹಿಂದೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ನೇತೃತ್ವದ ತಂಡ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿತ್ತು. ಸಿಸಿಬಿ ಅಧಿಕಾರಿಗಳಿಂದ ನಗರದಲ್ಲಿ ಶಂಕಿತ ಉಗ್ರರು ಬಂಧಿತರಾದ ಹಿನ್ನೆಲೆಯಲ್ಲಿ ದಾಳಿ ಕೈಗೊಳ್ಳಲಾಗಿತ್ತು. ಬಂಧಿತ ಶಂಕಿತ ಉಗ್ರರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ಮನಪರಿವರ್ತನೆಗೊಂಡು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಎಡಿಜಿಪಿ ನೇತೃತ್ವದ ತಂಡ ಪ್ರತಿ ಬ್ಯಾರಕ್ ಗಳನ್ನು ಪರಿಶೀಲನೆಗೊಳಪಡಿಸಿತ್ತು. ದಾಳಿ ವೇಳೆ ಮಹತ್ವದ ದಾಖಲೆಗಳು ದೊರೆತಿದೆ ಎನ್ನಲಾಗಿದ್ದು ಹಿರಿಯ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ದಾಳಿ ಬಳಿಕ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಎಚ್ಚರಿಕೆ ಜೊತೆಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಲಾಗಿತ್ತು. ಆದ್ರೆ ಈಗ ಮತ್ತೆ ಬ್ಯಾರಕ್ಗಳಲ್ಲಿ ಫೋನ್ಗಳು ಪತ್ತೆಯಾಗಿವೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:19 pm, Mon, 24 July 23