ಬೆಂಗಳೂರು: ಯೂತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ (Mohammed Nalapad) ಹಲ್ಲೆ ಮಾಡಿದ ಪ್ರಕರಣದ ತಡೆಯಾಜ್ಞೆಯ ದಿನಾಂಕ ವಿಸ್ತರಣೆಯಾಗದ ಹಿನ್ನೆಲೆ ಪ್ರಕರಣದ ತನಿಖೆಯನ್ನು ಮುಂದುವರಿಸುವಂತೆ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ. ನಲಪಾಡ್ ಪರ ವಕೀಲ ಶ್ಯಾಮ್ ಸುಂದರ್ ಎಸ್ಪಿಪಿಯಾಗುವಂತಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ ನ್ಯಾ.ಎಸ್.ನಟರಾಜ್ ನಲಪಾಡ್ ಪರ ವಕೀಲರ ಆಕ್ಷೇಪ ತಳ್ಳಿಹಾಕಿ ಸಾಕ್ಷ್ಯ ವಿಚಾರಣೆ ಮುಂದುವರಿಸಲು ಆದೇಶ ಹೊರಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮಗ ಮೊಹಮ್ಮದ್ ನಲಪಾಡ್ರ 4 ವರ್ಷದ ಹಿಂದಿನ ಪ್ರಕರಣದ ತನಿಖೆಗೆ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. 2023ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಈ ಬೆಳವಣಿಗೆ ಮೊಹಮ್ಮದ್ ನಲಪಾಡ್ಗೆ ಕಪ್ಪು ಚುಕ್ಕೆಯಾಗುವ ಸಾಧ್ಯತೆ ಇದೆ. ಇನ್ನು ಮೊಹಮ್ಮದ್ ನಲಪಾಡ್ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಮೊಹಮ್ಮದ್ ನಲಪಾಡ್ ಫೆಬ್ರವರಿ 17, 2018 ರಂದು ಯುಬಿ ಸಿಟಿ ರೆಸ್ಟೊರೆಂಟ್ವೊಂದರಲ್ಲಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದರು. ರಾತ್ರಿ ಸುಮಾರು 11 ಗಂಟೆಗೆ ಯುಬಿ ಸಿಟಿ ರೆಸ್ಟೊರೆಂಟ್ಗೆ ವಿದ್ವತ್ ಊಟಕ್ಕೆಂದು ತೆರಳಿದ್ದರು. ಈ ವೇಳೆ ವಿದ್ವತ್ ಮತ್ತು ನಲಪಾಡ್ ನಡುವೆ ಜಗಳ ನಡೆದಿತ್ತು. ಈ ಜಗಳ ತಾರಕಕ್ಕೇರಿ ನಲಪಾಡ್ ಮತ್ತು ಆತನ ಸ್ನೇಹಿತರು ವಿದ್ವತ್ ಮೇಲೆ ಹಲ್ಲೆ ಮಾಡಿದ್ದಾರೆ.
ಬಳಿಕ ವಿದ್ವತ್ ರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಅಲ್ಲಿಗೆ ತೆರಳಿದ ನಲಪಾಡ್ ಮತ್ತು ತಂಡ ಬೆದರಿಕೆ ಹಾಕಿದ್ದರು. ಈ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಇತರೆ 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. 116 ದಿನಗಳ ಜೈಲುವಾಸದ ನಂತರ ಷರತ್ತುಬದ್ಧ ಜಾಮೀನಿನ ಮೇಲೆ ಮೊಹಮ್ಮದ್ ನಲಪಾಡ್ ಹೊರಬಂದಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ವತ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರು ಈ ಆದೇಶ ಹೊರಡಿಸಿದ್ದರು. ಸದ್ಯ ಮಧ್ಯಂತರ ತಡೆಯಾಜ್ಞೆಯ ದಿನಾಂಕ ಮುಗಿದಿದೆ. ತಡೆಯಾಜ್ಞೆಯ ಅವಧಿಯನ್ನು ವಿಸ್ತರಿಸುವಂತೆ ನಲಪಾಡ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಆದರೆ ಸೆಷನ್ಸ್ ಕೋರ್ಟ್ನ ನಲಪಾಡ್ ಪರ ವಕೀಲರ ಆಕ್ಷೇಪ ತಳ್ಳಿಹಾಕಿ ಸಾಕ್ಷ್ಯ ವಿಚಾರಣೆ ಮುಂದುವರಿಸಲು ಆದೇಶ ಹೊರಡಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Tue, 15 November 22