ಬೆಂಗಳೂರು, ಡಿಸೆಂಬರ್ 13: ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ದೇವನಹಳ್ಳಿ ಟೋಲ್ ಪ್ಲಾಜಾ ಟೋಲ್ ಸಂಗ್ರಹದಲ್ಲಿ ಬರೋಬ್ಬರಿ ಶೇ 185ರಷ್ಟು ಹೆಚ್ಚಳವಾದ ಬೆನ್ನಲ್ಲೇ ಇದೀಗ ಆ ಕುರಿತು ಚರ್ಚೆ ಆರಂಭವಾಗಿದೆ. ದೇವನಹಳ್ಳಿ ಟೋಲ್ ಪ್ಲಾಜಾ ವಿರುದ್ಧ ಉದ್ಯಮಿ ಮೋಹನ್ ದಾಸ್ ಪೈಕಿ ಧ್ವನಿಯೆತ್ತಿದ್ದು, ಅದನ್ನು ಏರ್ಪೋರ್ಟ್ ನಂತರ ಬಳ್ಳಾರಿ ರಸ್ತೆಗೆ ಸ್ಥಳಾಂತರಿಸಬೇಕು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಆಗ್ರಹಿಸಿದ್ದಾರೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ನಿತಿನ್ ಗಡ್ಕರಿ ಅವರನ್ನು ಟ್ಯಾಗ್ ಮಾಡಿ ಸಂದೇಶ ಪ್ರಕಟಿಸಿರುವ ಮೋಹನ್ ದಾಸ್ ಪೈ, ಬೆಂಗಳೂರಿಗೆ ಮಾತ್ರ ಏಕೆ ಈ ತಾರತಮ್ಯ ಎಂದು ಪ್ರಶ್ನಿಸಿದ್ದಾರೆ.
ಭಾರತದಲ್ಲಿ ಈ ಮೊದಲು ಯಾವ ಏರ್ಪೋರ್ಟ್ ರಸ್ತೆಗೂ ಟೋಲ್ ಇರಲಿಲ್ಲ. ಬೆಂಗಳೂರಿಗೆ ಮಾತ್ರ ಯಾಕೆ ಈ ತಾರತಮ್ಯ? ಟೋಲ್ ಅನ್ನು ವಿಮಾನ ನಿಲ್ದಾಣದ ನಂತರ ಬಳ್ಳಾರಿ ರಸ್ತೆಯಲ್ಲಿ ಸ್ಥಾಪಿಸಬೇಕು ಎಂದು ಎಕ್ಸ್ ಸಂದೇಶದಲ್ಲಿ ಮೋಹನ್ ದಾಸ್ ಪೈ ಆಗ್ರಹಿಸಿದ್ದಾರೆ. ಈ ಸಂದೇಶದ ಜತೆಗೆ ನಿತಿನ್ ಗಡ್ಕರಿ, ಸಿಎಂ ಆಫ್ ಕರ್ನಾಟಕ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರನ್ನೂ ಟ್ಯಾಗ್ ಮಾಡಿದ್ದಾರೆ.
Rubbish No airport in India has a toll road before it. Why this discrimination against Bengaluru. Toll should be for the bellary road after airport @nitin_gadkari @DKShivakumar @siddaramaiah @CMofKarnataka @lkatheeq https://t.co/lYAAWDWTBg
— Mohandas Pai (@TVMohandasPai) December 12, 2024
2023-24 ಹಣಕಾಸು ವರ್ಷದಲ್ಲಿ ದೇವನಹಳ್ಳಿ ಟೋಲ್ ಪ್ಲಾಜಾ 308 ಕೋಟಿ ರೂ. ಆದಾಯ ಗಳಿಸಿತ್ತು. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮುಖ್ಯ ಹೆದ್ದಾರಿಯಲ್ಲೇ ಟೋಲ್ ಪ್ಲಾಜಾ ಇರುವುದು ಆದಾಯ ಸಂಗ್ರಹ ಏರಿಕೆಗೆ ಕಾರಣ ಎನ್ನಲಾಗಿದೆ. ಬಳ್ಳಾರಿ ರಸ್ತೆ ಮಾತ್ರವಲ್ಲದೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರೂ ಇಲ್ಲಿ ಟೋಲ್ ಪಾವತಿಸಬೇಕಾಗುತ್ತದೆ.
2023-24 ರಲ್ಲಿ, ಕೆಂಪೇಗೌಡ ಅಂತರರರಾಷ್ಟ್ರೀಯ ವಿಮಾನ ನಿಲ್ದಾಣ 37.53 ದಶಲಕ್ಷ ಪ್ರಯಾಣಿಕರನ್ನು ಮತ್ತು 4,39,000 ಮೆಟ್ರಿಕ್ ಟನ್ಗಳಷ್ಟು ಸರಕುಗಳ ಸಾಗಾಟ ಮಾಡಿದೆ. ಇದು ಟೋಲ್ ಪ್ಲಾಜಾದ ಗಳಿಕೆಗೆ ಗಣನೀಯವಾಗಿ ಕೊಡುಗೆ ನೀಡಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಹೊಸ ವರ್ಷದಿಂದ ಮೆಟ್ರೋ ಟಿಕೆಟ್ ದರ ಹೆಚ್ಚಳ ಬಹುತೇಕ ಖಚಿತ
ಕಳೆದ ಒಂದು ದಶಕದಲ್ಲಿ ದೇವನಹಳ್ಳಿ ಟೋಲ್ ಪ್ಲಾಜಾದಲ್ಲಿ 1,577 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಟೋಲ್ ಶುಲ್ಕಗಳು ಅಸಮಂಜಸವಾಗಿವೆ ಎಂದು ಮೋಹನ್ ದಾಸ್ ಪೈ ಪ್ರತಿಪಾದಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ