ಬೆಂಗಳೂರು: ಮಹಿಳಾ ಪ್ರಯಾಣಿಕರಿಗಾಗಿ ಬಂದಿದೆ ಉಬರ್ ಮಹಿಳಾ ಬೈಕ್ ಟ್ಯಾಕ್ಸಿ
ಇಷ್ಟು ದಿನ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಬುಕ್ ಮಾಡಿದರೆ ಪುರುಷ ಡ್ರೈವರ್ಗಳು ಮಾತ್ರ ಬರುತ್ತಿದ್ದರು. ಇದು ಮಹಿಳಾ ಪ್ರಯಾಣಿಕರಿಗೆ ಮುಜುಗರ ಉಂಟುಮಾಡುತ್ತಿತ್ತು. ಆದರೆ, ಇನ್ನು ಆ ಚಿಂತೆ ಬೇಕಿಲ್ಲ. ಮಹಿಳೆಯರಿಗಾಗಿಯೇ ಉಬರ್ ಮಹಿಳಾ ಬೈಕ್ ಟ್ಯಾಕ್ಸಿ ಸೇವೆ ನಗರದಲ್ಲಿ ಆರಂಭವಾಗಿದೆ. ನೂತನ ಸೇವೆ ಹಲವು ಸುರಕ್ಷತಾ ಫೀಚರ್ಗಳನ್ನೂ ಒಳಗೊಂಡಿದೆ. ವಿವರಗಳಿಗೆ ಮುಂದೆ ಓದಿ.
ಬೆಂಗಳೂರು, ಡಿಸೆಂಬರ್ 13: ಮಹಿಳೆಯರಿಗೆ ಪ್ರತ್ಯೇಕ ಬೈಕ್ ಟ್ಯಾಕ್ಸಿ ಒದಗಿಸುವ ‘ಮೋಟೋ ವುಮೆನ್’ ಸೇವೆಯನ್ನು ಉಬರ್ ಗುರುವಾರ ಆರಂಭಿಸಿದೆ. ಈ ಸೇವೆಯಿಂದ ಮಹಿಳಾ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣದ ಅವಕಾಶ ದೊರೆಯುವುದರ ಜತೆಗೆ, ಚಾಲಕಿಯರಿಗೆ ಆದಾಯ ಗಳಿಕೆಗೂ ದಾರಿಯಾಗಲಿದೆ. ‘ಮೋಟೋ ವುಮೆನ್’ ಸೇವೆಗೆ ಈಗಾಗಲೇ 300 ಕ್ಕೂ ಹೆಚ್ಚು ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಮೋಟೋ ವುಮೆನ್ ವಿಶೇಷವೇನು?
‘ಮೋಟೋ ವುಮೆನ್’ ಸೇವೆಯಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಗೂ ಹಲವು ವೈಶಿಷ್ಟ್ಯಗಳಿವೆ. ಐವರ ಸಂಪರ್ಕ ಸಂಖ್ಯೆಗಳೊಂದಿಗೆ ರಿಯಲ್ ಟೈಂ ಟ್ರಿಪ್ ಶೇರಿಂಗ್ಗೂ ಅವಕಾಶ ಕಲ್ಪಿಸಲಾಗಿದೆ. ಫೋನ್ ಸಂಖ್ಯೆಗಳು ಮತ್ತು ಡ್ರಾಪ್-ಆಫ್ ಸ್ಥಳಗಳ ರಹಸ್ಯ ಕಾಪಾಡಲೂ ಅವಕಾಶವಿದೆ. ಅದೇ ರೀತಿ ಹೆಚ್ಚು ಹೊತ್ತು ಕಾಯಿಸುವುದು, ಮಾರ್ಗ ಮಧ್ಯದಲ್ಲಿನ ಡ್ರಾಪ್‌ಗಳು ಅಥವಾ ಮಾರ್ಗ ಬದಲಾಯಿಸುವಿಕೆಯಂಥ ಪ್ರಕ್ರಿಯೆಗಳ ಮೇಲ್ವಿಚಾರಣೆಗೂ ವ್ಯವಸ್ಥೆ ಇದೆ. ಬೈಕ್ ಟ್ಯಾಕ್ಸಿ ಸವಾರರ ಸುರಕ್ಷಿತ ಮತ್ತು ಖಾಸಗಿತನ ಕಾಪಾಡುವ ನಿಟ್ಟಿನಲ್ಲಿ ಈ ವೈಶಿಷ್ಟ್ಯಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಈ ಸೇವೆಯು ಹೆಚ್ಚಿನ ಮಹಿಳೆಯರನ್ನು ಬೈಕ್ ಟ್ಯಾಕ್ಸಿ ಡ್ರೈವರ್‌ಗಳಾಗಲು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
ಬೈಕ್ ಟ್ಯಾಕ್ಸಿಗಳಿಂದ ಹೆಚ್ಚಲಿದೆ ಉದ್ಯೋಗಾವಕಾಶ
ಬೈಕ್ ಟ್ಯಾಕ್ಸಿಗಳು ಭಾರತದಾದ್ಯಂತ 5.4 ದಶಲಕ್ಷ ಮಂದಿಯ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ ಎಂದು ಕೆಪಿಎಂಜಿ ವರದಿ ಮತ್ತು ಆಕ್ಸ್‌ಫರ್ಡ್ ಎಕನಾಮಿಕ್ಸ್‌ನ ಅಧ್ಯಯನ ವರದಿಯಲ್ಲಿ ತಿಳಿಸಿರುವುದನ್ನು ಕಂಪನಿ ಉಲ್ಲೇಖಿಸಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಶಾಕ್: ಹೊಸ ವರ್ಷದಿಂದ ಮೆಟ್ರೋ ಟಿಕೆಟ್ ದರ ಹೆಚ್ಚಳ ಬಹುತೇಕ ಖಚಿತ
ಮಹಿಳಯರನ್ನು ಹೊರತುಪಡಿಸಿ ಇತರರನ್ನು ಕರೆದೊಯ್ಯಲು ಮಹಿಳಾ ಡ್ರೈವರ್ಗಳು ಬಯಸಿದಲ್ಲಿ ‘ವುಮನ್ ಒನ್ಲಿ’ ಮೋಡ್ ಅನ್ನು ಆಫ್ ಮಾಡುವ ಆಯ್ಕೆಯನ್ನೂ ನೀಡಲಾಗಿದೆ. ಇದರಿಂದ ಮಹಿಳಾ ಡ್ರೈವರ್ಗಳು ಹೆಚ್ಚು ಗಳಿಸುವ ಅವಕಾಶ ಇದೆ ಎಂದು ಕಂಪನಿ ಹೇಳಿದೆ.
2025 ರ ಮೊದಲ ತ್ರೈಮಾಸಿಕದ ವೇಳೆಗೆ ಮಹಿಳಾ ಬೈಕ್ ಟ್ಯಾಕ್ಸಿ ಡ್ರೈವರ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಉಬರ್ ಚಿಂತನೆ ನಡೆಸಿದ್ದು, ಅವಕಾಶಗಳನ್ನು ಇನ್ನಷ್ಟು ವಿಸ್ತರಿಸಲಿದೆ ಎನ್ನಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ