Pro Palestine Protest: ಮುಸ್ಲಿಂಗಳ ವಿರುದ್ಧ ದಾಳಿ ನಿಲ್ಲಿಸಿ, ಪ್ಯಾಲೆಸ್ತೀನ್‌ ಬೆಂಬಲಿಸಿ ಎಂಜಿ ರಸ್ತೆಯಲ್ಲಿ ನೂರಾರು ಜನರಿಂದ ಪ್ರತಿಭಟನೆ

|

Updated on: Oct 17, 2023 | 11:35 AM

ಇಸ್ರೇಲ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಲು ಅ.16ರ ಸಂಜೆ ಬೆಂಗಳೂರಿನ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ ಬಳಿ ನೂರಾರು ಜನ ಮಾನವ ಸರಪಳಿ ನಿರ್ಮಿಸಿ ಮೇಣದಬತ್ತಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.

Pro Palestine Protest: ಮುಸ್ಲಿಂಗಳ ವಿರುದ್ಧ ದಾಳಿ ನಿಲ್ಲಿಸಿ, ಪ್ಯಾಲೆಸ್ತೀನ್‌ ಬೆಂಬಲಿಸಿ ಎಂಜಿ ರಸ್ತೆಯಲ್ಲಿ ನೂರಾರು ಜನರಿಂದ ಪ್ರತಿಭಟನೆ
ಎಂಜಿ ರಸ್ತೆಯಲ್ಲಿ ನೂರಾರು ಜನರಿಂದ ಪ್ರತಿಭಟನೆ
Follow us on

ಬೆಂಗಳೂರು, ಅ.17: ಹಮಾಸ್ ಉಗ್ರರ (Hamas Terrorists) ಅಟ್ಟಹಾಸವನ್ನು ಸಮರ್ಥಿಸಿಕೊಂಡು, ಅದನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ ಮಂಗಳೂರಿನ ಝಾಕಿರ್‌ನನ್ನು ಪೊಲೀಸರು (Israel palestine war) ಬಂಧಿಸಿದ್ದಾರೆ. ಈ ಘಟನೆ ನಡುವೆ ಬೆಂಗಳೂರಿನಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲಿಸಿ ದಿಢೀರನೆ ಪ್ರತಿಭಟನೆಯೊಂದು ನಡೆದಿದೆ. ಇಸ್ರೇಲ್‌ನೊಂದಿಗೆ ನಡೆಯುತ್ತಿರುವ ಸಂಘರ್ಷದಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಲು ಅ.16ರ ಸಂಜೆ ಬೆಂಗಳೂರಿನ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದ (MG Road Metro Station) ಬಳಿ ನೂರಾರು ಜನರು ಜಮಾಯಿಸಿ ಪ್ಯಾಲೆಸ್ಟೀನ್‌ನ ಗಾಜಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಯನ್ನು ಭಾರತ ಖಂಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎಂಜಿ ರಸ್ತೆಯ ಉದ್ದಕ್ಕೂ ಮಾನವ ಸರಪಳಿ ನಿರ್ಮಿಸಿ ಮೇಣದಬತ್ತಿ ಹಿಡಿದು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುವಂತೆ ಕೋರಿಕೊಂಡರು. ಫ್ರೀಡಂ ಪಾರ್ಕ್ ಹೊರತುಪಡಿಸಿ ನಗರದಲ್ಲಿ ಬೇರೆಡೆ ಪ್ರತಿಭಟನೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ. ಆದರೂ ನಿನ್ನೆ ಎಂಜಿ ರಸ್ತೆಯಲ್ಲಿ ಕೆಲ ಯುವಕರು-ಯುವತಿಯರು ಪ್ಯಾಲೆಸ್ತೀನ್‌ಗೆ ಬೆಂಬಲ ನೀಡುವಂತೆ ಪ್ರತಿಭಟನೆ ನಡೆಸಿ ಪ್ಯಾಲೆಸ್ತೀನ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿಯ ಕಿರುಪುಸ್ತಕಗಳನ್ನು ಹಂಚಿದ್ದಾರೆ. ಸದ್ಯ ಪ್ರತಿಭಟನೆಗೆ ಅವಕಾಶವಿಲ್ಲದಿದ್ದರೂ ಪ್ರತಿಭಟನೆ ನಡೆಸಿದ ಹಿನ್ನೆಲೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಹಾಗೂ ಬಂಧನಕ್ಕೊಳಗಾಗಿದ್ದ ಕೆಲ ಪ್ರತಿಭಟನಾಕಾರರನ್ನು ತಕ್ಷಣ ಬಿಡುಗಡೆಗೊಳಿಸಲಾಗಿದೆ. ಇನ್ನೂ ಕೆಲವರನ್ನು ಕಬ್ಬನ್ ಪಾರ್ಕ್ ಮತ್ತು ಅಶೋಕ್ ನಗರದ ಪೊಲೀಸ್ ಠಾಣೆಗಳಲ್ಲಿ ಇರಿಸಲಾಗಿದೆ.

ಇದನ್ನೂ ಓದಿ: ನಮ್ಮನ್ನು ಹೆದರಿಸುವ ಪ್ರಯತ್ನ ಮಾಡಬೇಡಿ, ನಾವು ಎಲ್ಲದಕ್ಕೂ ಸಿದ್ಧರಿದ್ದೇವೆ: ಇಸ್ರೇಲ್​ಗೆ ಹಮಾಸ್ ಎಚ್ಚರಿಕೆ

ಪಿಯುಸಿಎಲ್ ಪ್ರಧಾನ ಕಾರ್ಯದರ್ಶಿ ಐಶ್ವರ್ಯಾ ರವಿಕುಮಾರ್ ಘಟನೆ ಸಂಬಂಧ ಮಾತನಾಡಿ, ”ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಪ್ಯಾಲೆಸ್ತೀನ್ ಪರವಾಗಿ ನಿಂತಿರುವ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸುತ್ತಿರುವುದು ದುರದೃಷ್ಟಕರ. ಭಾರತ ಯಾವಾಗಲೂ ಪ್ಯಾಲೆಸ್ತೀನ್ ಜೊತೆ ನಿಂತಿದೆ. ಬೆಂಗಳೂರಿನಲ್ಲಿ, ಅಧಿಕಾರದಲ್ಲಿರುವವರು ಏನೇ ಮಾಡಲು ಪ್ರಯತ್ನಿಸಿದರೂ ಪ್ಯಾಲೆಸ್ಟೀನಿಯಾದವರಿಗೆ ಒಗ್ಗಟ್ಟಾಗಿ ನಿಲ್ಲುವ ಜನರನ್ನು ಒಟ್ಟಿಗೆ ಸೇರಿಸಲು ನಾವು ಪ್ರಯತ್ನಿಸಿದ್ದೇವೆ. ಅಲ್ಲಿನ ನರಮೇಧವು ಅಭೂತಪೂರ್ವ ಮಟ್ಟವನ್ನು ತಲುಪಿದೆ,” ಎಂದು ಹೇಳಿದರು.

ಬ್ರಿಗೇಡ್‌ ರಸ್ತೆಯ ಕಾವೇರಿ ಎಂಪೋರಿಯಂ ವೃತ್ತದಿಂದ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದ ಪಾದಚಾರಿ ಮಾರ್ಗದಲ್ಲಿ ಮಾನವ ಸರಪಳಿ ನಿರ್ಮಿಸಲಾಗಿತ್ತು. ಕೆಲ ಪ್ರತಿಭಟನಾಕಾರರು ಪ್ಯಾಲೆಸ್ಟೀನ್ ಧ್ವಜ ಪ್ರದರ್ಶಿಸಿ ಪ್ಯಾಲೆಸ್ಟೀನ್‌ ಪರ ಘೋಷಣೆಗಳನ್ನು ಕೂಗುತ್ತಿದ್ದರು. ಇನ್ನೂ ಕೆಲವರು ಬಾಯಿಗೆ ಕಪ್ಪು ಪಟ್ಟಿ ಧರಿಸಿದ್ದರು.

ಪ್ರತಿಭಟನಾಕಾರರ ವಿರುದ್ಧ ಎಫ್​ಐಆರ್

ಪ್ಯಾಲೆಸ್ಟೈನ್ ಪರವಾಗಿ ಪ್ರತಿಭಟನೆ ನಡೆಸಿದ್ದವರ ಮೇಲೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಬಹುತ್ವ ಕರ್ನಾಟಕ ಸಂಘಟನೆಯ ಕಾರ್ಯಕರ್ತರ ಮೇಲೆ ಎಫ್​ಐಆರ್​ ಆಗಿದೆ. ಗಾಜಾ ಮೇಲೆ ನಡೆಯುತ್ತಿರುವ ಅಕ್ರಮ ದಾಳಿ ನಿಲ್ಲಿಸಬೇಕು. ಭಾರತ ಇಸ್ರೇಲ್ ಮೇಲೆ ಒತ್ತಡ ಹಾಕಬೇಕು. ಪ್ಯಾಲೆಸ್ಟೈನ್ ನನ್ನು ಪ್ರತ್ಯೇಕ ದೇಶವಾಗಿಸಬೇಕು ಎಂದು ಯಾವುದೇ ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿದ ಹಿನ್ನೆಲೆ ಎಫ್​ಐಆರ್ ದಾಖಲಿಸಲಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:47 am, Tue, 17 October 23