Freedom March: ಸ್ವತಂತ್ರ ನಡಿಗೆಗೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ,  ಈ ರಸ್ತೆಗಳಲ್ಲಿ ಸಂಚರಿಸಲಿದೆ ಪಾದಯಾತ್ರೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 14, 2022 | 1:30 PM

ಸ್ವತಂತ್ರ ನಡಿಗೆಯಲ್ಲಿ ಹೆಜ್ಜೆ ಹಾಕುವ ಪ್ರತಿ ವ್ಯಕ್ತಿಗೆ ಟಿ-ಶರ್ಟ್, ಕ್ಯಾಪ್ ಹಾಗೂ ಕಿಟ್ ವಿತರಿಸಲಾಗುತ್ತದೆ. ಬೆಂಗಳೂರಿಗೆ ಪ್ರವೇಶ ಕಲ್ಪಿಸುವ ಮಾರ್ಗಗಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.

Freedom March: ಸ್ವತಂತ್ರ ನಡಿಗೆಗೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ,  ಈ ರಸ್ತೆಗಳಲ್ಲಿ ಸಂಚರಿಸಲಿದೆ ಪಾದಯಾತ್ರೆ
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದರು.
Follow us on

ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನೆಲೆಯಲ್ಲಿ (Azadi Ka Amrit Mahotsav) ಕಾಂಗ್ರೆಸ್ ಪಕ್ಷವು (Congress Party) ಆಯೋಜಿಸಿರುವ ‘ಸ್ವತಂತ್ರ ನಡಿಗೆ’ ಪಾದಯಾತ್ರೆಯಲ್ಲಿ (Freedom March) ಒಂದೂವರೆ ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್​ ನಾಯಕರು ಹೇಳಿದ್ದಾರೆ. ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಡಾ ಜಿ.ಪರಮೇಶ್ವರ ನೇತೃತ್ವದಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ಈಗಾಗಲೇ 75 ಸಾವಿರಕ್ಕೂ ಹೆಚ್ಚು ಜನರು ಆನ್​ಲೈನ್ ನೋಂದಣಿ ಮಾಡಿಕೊಂಡಿದ್ದು, ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ವ್ಯವಸ್ಥೆಗಾಗಿ 11 ಉಪಸಮಿತಿಗಳನ್ನು ರೂಪಿಸಲಾಗಿದ್ದು, ಜವಾಬ್ದಾರಿ ಹಂಚಿಕೆ ಮಾಡಲಾಗಿದೆ ಎಂದು ಪರಮೇಶ್ವರ್ ಅವರು ಹೇಳಿದರು.

ಸಾರಿಗೆ, ಆಹಾರ, ಮಾಧ್ಯಮ ಸೇರಿದಂತೆ ವಿವಿಧ ವಿಷಯಗಳತ್ತ ಗಮನ ಹರಿಸಲು ಉಪಸಮಿತಿಗಳನ್ನು ರಚಿಸಲಾಗಿದೆ. ಸ್ವತಂತ್ರ ನಡಿಗೆಯಲ್ಲಿ ಹೆಜ್ಜೆ ಹಾಕುವ ಪ್ರತಿ ವ್ಯಕ್ತಿಗೆ ಟಿ-ಶರ್ಟ್, ಕ್ಯಾಪ್ ಹಾಗೂ ಕಿಟ್ ವಿತರಿಸಲಾಗುತ್ತದೆ. ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಕನಕಪುರ, ಹೊಸೂರು ಭಾಗದಿಂದ ಬೆಂಗಳೂರಿಗೆ ಪ್ರವೇಶ ಕಲ್ಪಿಸುವ ಮಾರ್ಗದಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ತುಮಕೂರು ರಸ್ತೆ ಮೂಲಕ ಬೆಂಗಳೂರಿಗೆ 21 ಜಿಲ್ಲೆಗಳಿಂದ ಅಭಿಮಾನಿಗಳು ಬರುತ್ತಿದ್ದಾರೆ. ಇವರು ಹಿಂದಿನ ರಾತ್ರಿಯೇ ಸಿದ್ದಗಂಗಾ ಮಠಕ್ಕೆ ಬಂದು ತಂಗಬಹುದು. ಅಲ್ಲಿಂದ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದವರೆಗೂ ತಮ್ಮ ವಾಹನಗಳನ್ನು ತರಬಹುದು. ಅಲ್ಲಿಂದ ಮೆಟ್ರೋ ಮೂಲಕ ಮೆಜೆಸ್ಟಿಕ್​ನಿಂದ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ಬರಬಹುದು ಎಂದು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಈಗಾಗಲೇ 50 ಸಾವಿರ ಮಂದಿಗೆ ಉಚಿತ ಸಂಚಾರಕ್ಕೆ ಅನುವಾಗುವಂತೆ ಮೆಟ್ರೋ ರೈಲಿನ ಟಿಕೆಟ್​ಗಳನ್ನು ಖರೀದಿಸಿದೆ.

ಮೆಜೆಸ್ಟಿಕ್​ನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮಧ್ಯಾಹ್ನ 2 ಗಂಟೆಗೆ ಪಾದಯಾತ್ರೆ ಆರಂಭವಾಗಲಿದೆ. ಕೆಆರ್ ವೃತ್ತ, ಹಡ್ಸನ್ ಸರ್ಕಲ್, ಜೆಸಿ ರಸ್ತೆ, ಮಿನರ್ವ ವೃತ್ತ, ವಿವಿಪುರಂ ವೃತ್ತ ಮಾರ್ಗವಾಗಿ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನವನ್ನು ಸ್ವತಂತ್ರ ನಡಿಗೆ ಮೂಲಕ ಕಾರ್ಯಕರ್ತರು ತಲುಪಲಿದ್ದಾರೆ. ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪಾದಯತ್ರೆಯು ಸಾಗಿಬರುವ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟದ ದೃಶ್ಯಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರ ಆಕರ್ಷಕ ಚಿತ್ರಪಟಗಳನ್ನು ಪ್ರದರ್ಶಿಸುವ ಮೂಲಕ ಹೊಸ ಪೀಳಿಗೆಗೆ ಸ್ವಾತಂತ್ರ್ಯದ ಹಕ್ಕು ಹಾಗೂ ಅದಕ್ಕಾಗಿ ನಮ್ಮ ಹಿರಿಯರು ಮಾಡಿದ ಹೋರಾಟ ಹಾಗೂ ಬಲಿದಾನದ ಬಗ್ಗೆ ತಿಳಿಸಿಕೊಡಲು ಪ್ರಯತ್ನ ಮಾಡಲಾಗಿದೆ. ಮಂಗಳೂರು, ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಿಂದ ಕಲಾತಂಡಗಳು ಪಾದಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಗೌರವ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಪರಮೇಶ್ವರ್ ಹೇಳಿದ್ದಾರೆ.

ಪಾದಯಾತ್ರೆ ಮಾರ್ಗದಲ್ಲಿ ಕಾಂಗ್ರೆಸ್​ ಸ್ವಯಂಸೇವಕರನ್ನು ನಿಯೋಜಿಸಾಗುವುದು. ಪ್ರತಿ ಕಿಲೋಮೀಟರ್​ಗೆ ಒಂದರಂತೆ 6 ಆಂಬುಲೆನ್ಸ್, ವೈದ್ಯರ ತಂಡವನ್ನು ಸಜ್ಜುಗೊಳಿಸಲಾಗಿದೆ. ಅಲ್ಲಲ್ಲಿ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿದೆ. ಸಂಜೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಖ್ಯಾತ ಗಾಯಕ ಹರಿಹರನ್ ತಂಡದಿಂದ ಸಂಗೀತ ಕಾರ್ಯಕ್ರಮ ಇರಲಿದೆ. ಒಟ್ಟು ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಭಾಷಣಗಳು ಇರುವುದಿಲ್ಲ.

‘ಯಾವುದೇ ರಾಜಕೀಯ ಲಾಭಕ್ಕಾಗಿ ನಾವು ಸ್ವತಂತ್ರ ನಡಿಗೆ ಕಾರ್ಯಕ್ರಮ ಆಯೋಜಿಸಿಲ್ಲ. ಪಾದಯಾತ್ರೆಗೆ ಒಂದೂವರೆ ಲಕ್ಷ ಜನರು ಸೇರುವ ನಿರೀಕ್ಷೆಯಿದೆ. ಮೇಕೆದಾಟು ಯೋಜನೆ ಜಾರಿಯಾದರೆ 1.5 ಕೋಟಿ ಜನತೆಗೆ ನೀರು ಸಿಗುತ್ತದೆ. ಬೆಂಗಳೂರು ನಗರ, ಸುತ್ತಮುತ್ತಲಿನ ಜನತೆಗೆ ಅನುಕೂಲವಾಗುತ್ತದೆ’ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

Published On - 1:30 pm, Sun, 14 August 22