ಸ್ವಾತಂತ್ರ್ಯ ದಿನಾಚರಣೆ ಜಾಹೀರಾತಿನಲ್ಲಿ ನೆಹರು ಫೋಟೊ ನಾಪತ್ತೆ: ಕಾಂಗ್ರೆಸ್ ನಾಯಕರ ಆಕ್ರೋಶ
ಜವಾಹರ್ ಲಾಲ್ ನೆಹರೂ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರೆತಿರುವುದು ಕರುಣಾಜನಕ ಎಂದು ಜೈರಾಮ್ ರಮೇಶ್ ವಿಶ್ಲೇಷಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಸರ್ಕಾರವು (Govt of Karnataka) ‘ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜ’ (Har Ghar Tiranga) ಅಭಿಯಾನದ ಉತ್ತೇಜನಕ್ಕಾಗಿ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ಜವಾಹರ್ಲಾಲ್ ನೆಹರು (Jawaharlal Nehru) ಅವರ ಭಾವಚಿತ್ರ ಕೈಬಿಟ್ಟಿರುವುದು ಪ್ರತಿಪಕ್ಷ ಕಾಂಗ್ರೆಸ್ನ (Indian National Congress) ಕೆಂಗಣ್ಣಿಗೆ ಗುರಿಯಾಗಿದೆ. ಸ್ವಾತಂತ್ರ್ಯ ಸೇನಾನಿಗಳ ಚಿತ್ರಪಟ ಮತ್ತು ವಿವರವಿದ್ದ ಜಾಹೀರಾತಿನಲ್ಲಿ ನೆಹರು ಫೋಟೊ ಹಾಕಿಲ್ಲ ಎಂಬುದು ಕಾಂಗ್ರೆಸ್ ನಾಯಕರ ಆಕ್ಷೇಪವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಕೆಲಸ ಉಳಿಸಿಕೊಳ್ಳಲು ಹತಾಶ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇವರು ಮುಖ್ಯಮಂತ್ರಿಯಾಗಿರುವಾಗ ಬಿಡುಗಡೆ ಮಾಡಿರುವ ಜಾಹೀರಾತಿನಲ್ಲಿ ನೆಹರೂ ಫೋಟೊ ಇಲ್ಲದಿರುವುದು ಬಸವರಾಜ ಬೊಮ್ಮಾಯಿಯವರ ತಂದೆ ಎಸ್.ಆರ್.ಬೊಮ್ಮಾಯಿಯವರಿಗೆ ಆದ ಅವಮಾನ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಎಸ್.ಆರ್.ಬೊಮ್ಮಾಯಿ ಅವರ ರಾಜಕೀಯ ಗುರು ಎಂ.ಎನ್.ರಾಯ್ ಅವರೂ ಸಹ ನೆಹರೂ ಅವರ ಬೆಂಬಲಿಗರಾಗಿದ್ದರು. ಇಂಥ ನೆಹರೂ ಅವರನ್ನು ಮುಖ್ಯಮಂತ್ರಿ ಬೊಮ್ಮಾಯಿ ಮರೆತಿರುವುದು ಕರುಣಾಜನಕ ಎಂದು ವಿಶ್ಲೇಷಿಸಿದ್ದಾರೆ.
Nehru will survive such pettiness. CM Karnataka desperate to save his job knows what he has done is an insult to his father S.R. Bommai & his father’s 1st political guru M.N. Roy both great Nehru admirers, the latter being a friend as well. Pathetic this is. https://t.co/adpkSBVyoU
— Jairam Ramesh (@Jairam_Ramesh) August 14, 2022
‘ಫ್ಲೆಕ್ಸ್, ಬ್ಯಾನರ್ ಹರಿದು ಹಾಕಿರುವುದು ಇವರ ಮನಸ್ಥಿತಿ ತೋರಿಸುತ್ತದೆ. ಬ್ರಿಟಿಷರಿಗೆ ಕ್ಷಮೆ ಕೇಳಿದ ಗಿರಾಕಿಯ ಫೋಟೊ ಹಾಕಿದವರು ನೆಹರೂ ಫೋಟೊ ಮರೆತಿದ್ದಾರೆ’ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಕಿಡಿಕಾರಿದರು.
‘ಇವರ ಮನಸ್ಥಿತಿ ಏನು ಎನ್ನುವುದು ಇದೀಗ ರಾಜ್ಯದ ಜನರಿಗೆ ಅರಿವಾಗುತ್ತಿದೆ. ಮುಂದೆ ಇವರು ಗಾಂಧಿ ಫೋಟೋ ತೆಗೆದು ತಮ್ಮ ಫೋಟೊ ಹಾಕಿಕೊಳ್ಳುತ್ತಾರೆ. ಮುಂದಿನ ಚುನಾವಣೆಯಲ್ಲಿ ಜನರು ಬಿಜೆಪಿಯನ್ನು ಕಿತ್ತೊಗೆಯುತ್ತಾರೆ. ಇವರು ದೇಶಭಕ್ತರು ಎಂದು ತಮಗೆ ತಾವೇ ಸರ್ಟಿಫಿಕೇಟ್ ಕೊಟ್ಟುಕೊಳ್ತಾರೆ. ಒಬ್ಬರಾದರೂ ಹೋರಾಟಗಾರರು ಇದ್ದಾರಾ ಇವರ ಬಳಿ’ ಎಂದು ಅವರು ಪ್ರಶ್ನಿಸಿದರು.
ಡಿಕೆಶಿ ಬೇಸರ
ಹರ್ ಘರ್ ತಿರಂಗಾ ಜಾಹೀರಾತಿನಲ್ಲಿ ನೆಹರು ಫೋಟೊ ಕೈಬಿಟ್ಟಿರುವುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ಆಕ್ಷೇಪಿಸಿದ್ದಾರೆ. ಮೊದಲ ಪ್ರಧಾನಿ ನೆಹರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ. ಈಗಿನ ಸಿಎಂ ಬೊಮ್ಮಾಯಿ ಅವರ ತಂದೆ ಕೂಡ ಸಿಎಂ ಆಗಿದ್ದರು. ಹಾಗಂತ ಎಸ್ಆರ್.ಬೊಮ್ಮಾಯಿ ಸಿಎಂ ಆಗಿಲ್ಲ ಅಂತ ಹೇಳಲು ಆಗುತ್ತಾ? ಇತಿಹಾಸ ತಿರುಚಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.
Published On - 11:36 am, Sun, 14 August 22