ಬೆಂಗಳೂರು, (ನವೆಂಬರ್ 14): ಈ ಬಾರಿ ದೀಪಾವಳಿಯಲ್ಲಿ (Deepavali) ಹೆಚ್ಚು ಶಬ್ಧ, ಮಾಲಿನ್ಯ ಮಾಡುವ ಪಟಾಕಿಗಳಿಗೆ ಬ್ರೇಕ್ ಬಿದ್ದಿದೆ. ಕಳೆದ ದೀಪಾವಳಿಗೆ ಹೋಲಿಸಿದರೆ, ಈ ಬಾರಿ ಪಟಾಕಿ(firecrackers) ಅಬ್ಬರ ಕಡಿಮೆ ಇದೆ. ಇಷ್ಟಾದರೂ ಸಹ ಅವಘಡಗಳು ಮಾತ್ರ ಕಡಿಮೆ ಆಗಿಲ್ಲ. ಪಟಾಕಿ ಸಂಬಂಧಿತ ಅವಘಡದಿಂದ ಬೆಂಗಳೂರಿನಲ್ಲಿ ಗಾಯಗೊಂಡವರ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಗಾಯಗೊಂಡವರ ಪೈಕಿ ಸರ್ಕಾರಿ ಆಸ್ಪತ್ರಗೆ 17 ಜನ ದಾಖಲಾಗಿದ್ದರೆ, 26 ಜನ ಖಾಸಗಿ ಆಸ್ಪತ್ರೆ ಬಾಗಿಲು ತಟ್ಟಿದ್ದಾರೆ.
ದೀಪಾವಳಿಯ ಮೊದಲ ದಿನ ಅಂದರೆ ನರಕ ಚತುರ್ದಶಿಯಂದು (ನವೆಂಬರ್ 12) ಮಕ್ಕಳು ಸೇರಿದಂತೆ 26 ಜನರು ಗಾಯಗೊಂಡಿದ್ದರು. ಇದೀಗ ದೀಪಾವಳಿ 2ನೇ ದಿನ ಅಮಾವಸ್ಯೆಯಂದು (ನವೆಂಬರ್ 13) ಗಾಯಗೊಂಡವರ ಸಂಖ್ಯೆ 26ರಿಂದ 43ಕ್ಕೆ ಏರಿಕೆಯಾಗಿದೆ. ನವೆಂಬರ್ 12 ರಿಂದ ಇಲ್ಲಿಯವರೆಗೆ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಅವಘಡದ 26 ಕೇಸ್ ದಾಖಲಾಗಿವೆ. ಈ ಪೈಕಿ ಐವರಿಗೆ ಗಂಭೀರ ಗಾಯವಾಗಿದೆ. 26 ಜನರ ಪೈಕಿ ಇನ್ನೊಬ್ಬರು ಸಿಡಿಸಿದ ಪಟಾಕಿಯಿಂದಲೇ 12 ಮಂದಿಗೆ ಗಾಯಗಳಾಗಿವೆ. ಸ್ವತಃ ಪಟಾಕಿ ಸಿಡಿಸುತ್ತಿದ್ದಾಗ ಗಾಯಗೊಂಡವರ ಸಂಖ್ಯೆ 14.
ಇದನ್ನೂ ಓದಿ: ದೀಪಾವಳಿ ಮೊದಲ ದಿನ ಪಟಾಕಿ ಸಿಡಿತಕ್ಕೆ ಬೆಂಗಳೂರಿನಲ್ಲಿ 26 ಜನರಿಗೆ ಗಾಯ
ನಿನ್ನೆ(ಸೋಮವಾರ) ರಾಮಮೂರ್ತಿ ನಗರದ ಮೂರುವರೆ ವರ್ಷದ ಮಗುವಿಗೂ ಪಟಾಕಿಯಿಂದ ಗಂಭೀರ ಗಾಯವಾಗಿದೆ. ಸುರುಸುರು ಬತ್ತಿ ಹಚ್ಚುವಾಗ ಕಣ್ಣಿಗೆ ಕಿಡಿ ತಾಗಿದ್ದು, ಮಗುವಿಗೆ ಮೈನರ್ ಇಂಜುರಿಯಾಗಿದೆ. ಇನ್ನು ಶ್ರೀರಾಂಪುರದ ಯುವಕನೊಬ್ಬ ಏರಿಯಾದಲ್ಲಿ ನಡೆದುಕೊಂಡು ಹೋಗುತ್ತಿದ್ದ ಈ ವೇಳೆ ಯಾರೋ ಹಚ್ಚಿದ ಪಟಾಕಿ ಯುವಕನ ಕಣ್ಣಿಗೆ ಸಿಡಿದಿದೆ. ಇದರಿಂದ ಐಬಾಲ್‌ಗೆ ಗಂಭೀರ ಗಾಯ ಆಗಿದ್ದು, ಒಳಗಡೆ ರಕ್ತ ಹೆಪ್ಪುಗಟ್ಟಿದೆ. ಇದೇ ರೀತಿ ಬನ್ನೇರುಘಟ್ಟದ ವ್ಯಕ್ತಿಯ ಕಣ್ಣಿಗೆ ಲಕ್ಷ್ಮೀ ಪಟಾಕಿ ಸಿಡಿದು ಗಾಯವಾಗಿದೆ.
ಸಂಜೆ 6 ರ ವರೆಗೆ ಮಾತ್ರ ಪಟಾಕಿ ಮಾರಾಟಕ್ಕೆ ಬಿಬಿಎಂಪಿ ಅವಕಾಶ ನೀಡಿದೆ. ಆದ್ರೆ, ರಾತ್ರಿ 10 ಗಂಟೆ ಆದರೂ ವಿಜಯನಗರದ ಆರ್ ಪಿಸಿ ಲೇಔಟ್ ನಲ್ಲಿರೋ ಮೈದಾನದಲ್ಲಿ ಪಟಾಕಿ ಮಾರಾಟ ಮಾಡಲಾಗಿದೆ. ಹೀಗಾಗಿ 112 ಕ್ಕೆ ಕರೆ ಮಾಡಿ ಮಾಹಿತಿ ನೀಡಿದರೂ, ಯಾವುದೇ ಕ್ರಮವಿಲ್ಲ ಎಂದು ಗಿರೀಶ್ ಎನ್ನುವರ ಟ್ವಿಟರ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Deepavali: ಆಕಸ್ಮಿಕವಾಗಿ ಪಟಾಕಿ ಕಿಡಿ ಕಣ್ಣಿಗೆ ಬಿದ್ದರೆ ಏನು ಮಾಡಬೇಕು, ಏನು ಮಾಡಬಾರದು?
ಹತ್ತಾರು ರೂಲ್ಸ್ ಹಾಕಿರುವುದರಿಂದ ಪಟಾಕಿ ಹೊಡೆಯೋರ ಸಂಖ್ಯೆ ಕಡಿಮೆ ಆಗಿದೆಯಾದರೂ ಅವಘಡಗಳು ಮಾತ್ರ ನಡೆಯುತ್ತಲೇ ಇವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:05 am, Tue, 14 November 23