ಬೆಂಗಳೂರು: ಕಳವು ಮಾಡಿದ್ದ ಕಬ್ಬಿಣ ಮಾರಾಟದಿಂದ ಬಂದ 450 ರೂ. ವಿಚಾರಕ್ಕೆ ಚಿಂದಿ ಆಯುತ್ತಿದ್ದ ವ್ಯಕ್ತಿಯ ಕೊಲೆ, ಆರೋಪಿ ಅರೆಸ್ಟ್

ಬೆಂಗಳೂರು ನಗರದ ಮಲ್ಲೇಶ್ವರಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಕೊಲೆಯಾಗಿತ್ತು. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆರೋಪಿಯನ್ನೂ ಬಂಧಿಸಿದ್ದಾರೆ.

ಬೆಂಗಳೂರು: ಕಳವು ಮಾಡಿದ್ದ ಕಬ್ಬಿಣ ಮಾರಾಟದಿಂದ ಬಂದ 450 ರೂ. ವಿಚಾರಕ್ಕೆ ಚಿಂದಿ ಆಯುತ್ತಿದ್ದ ವ್ಯಕ್ತಿಯ ಕೊಲೆ, ಆರೋಪಿ ಅರೆಸ್ಟ್
ಕೊಲೆ ಆರೋಪಿ ಪ್ರಭುಕುಮಾರ್ ಮತ್ತು ಕೊಲೆಯಾದ ವ್ಯಕ್ತಿ ಗುರುಮೂರ್ತಿ
Follow us
Prajwal Kumar NY
| Updated By: Rakesh Nayak Manchi

Updated on: Jul 16, 2023 | 10:35 PM

ಬೆಂಗಳೂರು: ನಗರದ ಮಲ್ಲೇಶ್ವರಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಕೊಲೆಯಾಗಿತ್ತು (Murder). ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಆರೋಪಿಯನ್ನೂ ಬಂಧಿಸಿದ್ದಾರೆ. ಅತಿಯಾದ ಕುಡಿತ ಹಾಗೂ ಕಳ್ಳತನ ಮಾಡುತ್ತಾ ಕೊನೆಗೆ ಮನೆ ಬಿಟ್ಟು ಚಿಂದಿ ಆಯುತ್ತಿದ್ದ ಗುರುಮೂರ್ತಿ ಕೊಲೆಯಾದ ವ್ಯಕ್ತಿಯಾಗಿದ್ದು, ಈತನೊಂದಿಗೆ ಚಿಂದಿ ಆಯುತ್ತಿದ್ದ ಪ್ರಭು ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ.

ಮಲ್ಲೇಶ್ವರಂನಲ್ಲಿ ಜುಲೈ 8ರಂದು ಅಪರಿಚಿತ ವ್ಯಕ್ತಿಯ ಕೊಲೆ ನಡೆದಿತ್ತು. ಆರಂಭದಲ್ಲಿ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿರಲಿಲ್ಲ. ಸದ್ಯ ಗುರುತು ಪತ್ತೆಯಾಗಿದ್ದು, ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗಿದೆ. ಈ ವೇಳೆ ಕೊಲೆಗೆ ಕಾರಣ ಏನು ಎಂಬುದು ಹೊರಬಿದ್ದಿದೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕನ ಮೇಲೆ ಅನೈಸರ್ಗಿಕ ಅತ್ಯಾಚಾರ, ಕೊಲೆ ಕೇಸ್​: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಗುರುಮೂರ್ತಿ ಅತಿಯಾದ ಕುಡಿತ ಚಟಕ್ಕೆ ಬಿದ್ದಿದ್ದನು. ಇದರ ಜೊತೆಗೆ ಕಳ್ಳತನವೂ ಮಾಡಿಕೊಂಡಿದ್ದ. ನಂತರ ಮನೆ ಬಿಟ್ಟಿದ್ದ ಗುರುಮೂರ್ತಿ, ರಸ್ತೆ ಬದಿ ಚಿಂದಿ ಆಯುತಿದ್ದ. ಈ ವೇಳೆ ಚಿಂದಿ ಆಯುತ್ತಿದ್ದ ಮತ್ತಿಬ್ಬರು ಪರಿಚಿತರಾಗಿದ್ದಾರೆ. ಹೀಗೆ ಮೂವರು ಸೇರಿ ಚಿಂದಿ ಆಯುತ್ತಿದ್ದರು. ಆದರೆ ಜುಲೈ 8 ರಂದು ಚಿಂದಿ ಆಯುವ ವೇಳೆ ಸಿಕ್ಕ ಕಬ್ಬಿಣದ ಪೈಪ್ ಮಾರಾಟದಲ್ಲಿ ಬಂದ ಹಣದ ವಿಚಾರದಲ್ಲಿ ಜಗಳ ನಡೆದಿದೆ.

ಕಳವು ಮಾಡಿದ್ದ ಕಬ್ಬಿಣದ ಪೈಪ್ ಅನ್ನು ಮಾರಾಟ ಮಾಡಿದ್ದು, ಇದರಿಂದ 450 ರೂಪಾಯಿ ಸಿಕ್ಕಿದೆ. ಆದರೆ ಪ್ರಭು ಕುಮಾರ್ ತನಗೆ ಹಣ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ಗುರುಮೂರ್ತಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಆರೋಪಿ ದೊಣ್ಣೆಯಿಂದ ಹೊಡೆದು ಗುರುಮೂರ್ತಿಯನ್ನು ಕೊಲೆ ಮಾಡಿದ್ದಾನೆ.

ಹಲ್ಲೆ ವೇಳೆ ಪ್ರಭುಕುಮಾರ್​ನನ್ನು ಸಾರ್ವಜನಿಕರು ಹಿಡಿಯುವ ಪ್ರಯತ್ನ ಮಾಡಿದರೂ ತಪ್ಪಿಸಿಕೊಂಡು ಪರಾರಿಯಾಗಿದ್ದನು. ನಂತರ ಬೆಂಗಳೂರಿನಿಂದ ಆಂದ್ರಪ್ರದೇಶಕ್ಕೆ ಹೋಗಿ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದಾಗ ಮಲ್ಲೇಶ್ವರ ಠಾಣಾ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ