ಕರ್ನಾಟಕ ಸರ್ಕಾರ ರಚನೆ (Karnataka Government) ಪ್ರಕ್ರಿಯೆ ಈ ವಾರ ಮತ್ತಷ್ಟು ಬಿರುಸು ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳೂ ಇದೆ. ಈ ಮಧ್ಯೆ ಸ್ಪಷ್ಟ ಬಹುಮತ ಗಳಿಸಿರುವ ಕರ್ನಾಟಕ ಕಾಂಗ್ರೆಸ್ ಮುಂದೆ ಹೊಸ ಬೇಡಿಕೆಯೊಂದು ಹುಟ್ಟಿಕೊಂಡಿದೆ. ಹಾಗೆ ರಾಜ್ಯದ ಸಿಎಂ ಸ್ಥಾನದ ಬಗ್ಗೆ ಇನ್ನೂ ನಿರ್ಧರಿಸಲು ಬಹುಮತ ಸಾಧಿಸಿರುವ ಕಾಂಗ್ರೆಸ್ಸಿಗೆ ಸಾಧ್ಯವಾಗುತ್ತಿಲ್ಲ. ಅಂತಹುದರಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಮುಸ್ಲಿಂ ಸಮುದಾಯದವರಾಗಿರಬೇಕು ಎಂದು ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ. ಅದಷ್ಟೇ ಅಲ್ಲ; ಗೃಹ, ಕಂದಾಯ, ಆರೋಗ್ಯ ಮತ್ತಿತರ ಆಯಕಟ್ಟಿನ ಇಲಾಖೆಗಳಿಗೆ ಮುಸ್ಲಿಂ ಶಾಸಕರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಮಾತೂ ಕೇಳಿಬಂದಿದೆ. ಇದರ ಜೊತೆಗೆ ಒಂದು ವೇಳೆ ಸಿದ್ದರಾಮಯ್ಯ ಅಥವಾ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಹಿಡಿತದಲ್ಲಿರುವ ಜನಾಂಗದ ನಾಯಕರಿಗೆ ಅಂದರೆ ಒಕ್ಕಲಿಗರು, ಲಿಂಗಾಯತ ಸಮುದಾಯದಿಂದ ಒಬ್ಬೊಬ್ಬ ಶಾಸಕರನ್ನು ಉಪ ಮುಖ್ಯಮಂತ್ರಿಯನ್ನಾಗಿಸಬೇಕು (Deputy Chief Minister) ಎಂಬ ಮಾತೂ ಚಾಲ್ತಿಯಲ್ಲಿದೆ.
ಉಪ ಮುಖ್ಯಮಂತ್ರಿ ಸ್ಥಾನ ಮುಸಲ್ಮಾನರಿಗೆ ನೀಡಬೇಕು. ಚುನಾವಣೆಗೂ ಮುನ್ನವೇ ಹೀಗೆ ಹೇಳಿದ್ದೆವು. ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ 30 ಟಿಕೆಟ್ (ಮುಸ್ಲಿಂ ಅಭ್ಯರ್ಥಿಗಳು) ನೀಡಬೇಕು ಎಂದು ಮುಸ್ಲಿಂ ನಾಯಕರು ಬೇಡಿಕೆಯಿಟ್ಟಿದ್ದರು. ಅದರಲ್ಲಿ 15 ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಅದರಲ್ಲಿ 9 ಮಂದಿ ಮುಸ್ಲಿಂ ಅಭ್ಯರ್ಥಿಗಳು ಗೆದ್ದಿದ್ದಾರೆ. ಜೊತೆಗೆ, 72 ಅಸೆಂಬ್ಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿಗೆ ಮುಸ್ಲಿಮ್ ಮತದಾರರು ನೀರೆರೆದಿದ್ದಾರೆ. ಸಮುದಾಯವಾಗಿ ನಾವು ಕಾಂಗ್ರೆಸ್‌ಗೆ ಸಾಕಷ್ಟು ಕೊಟ್ಟಿದ್ದೇವೆ. ಪ್ರತಿಯಾಗಿ ನಮಗೆ ಏನಾದರೂ ಸಿಗುವ ಸಮಯ ಬಂದಿದೆ. ಒಬ್ಬ ಮುಸ್ಲಿಂ ಡೆಪ್ಯೂಟಿ ಸಿಎಂ ಮತ್ತು ಗೃಹ ಕಂದಾಯ ಮತ್ತು ಆರೋಗ್ಯದಂತಹ ಉತ್ತಮ ಖಾತೆಗಳನ್ನು ಹೊಂದಿರುವ 5 ಸಚಿವರನ್ನು ಒಟ್ಟಿಗೆ ನೀಡಬೇಕೆಂಬುದು ಮುಸಲ್ಮಾನರು ಬಯಸುತ್ತಿದ್ದಾರೆ. ಆ ಮೂಲಕ ಕೃತಜ್ಞತೆ ಸಲ್ಲಿಸುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ ಎಂದು ಮುಸಲ್ಮಾನರ ನಾಯಕರು ಬಹಿರಂಗವಾಗಿಯೇ ಹೇಳಿದ್ದಾರೆ.
ಯಾರಿಗೆ ಹುದ್ದೆ, ನಿರ್ಧಾರ ಕಾಂಗ್ರೆಸ್ ಗೆ ಬಿಟ್ಟಿದ್ದು
ಪರಿಸ್ಥಿತಿ ಹೀಗಿರುವಾಗ ಅಂದರೆ ಒಂದು ಡಿಸಿಎಂ ಮತ್ತು ಕನಿಷ್ಟ 5 ಮಹತ್ವದ ಸಚಿವ ಸ್ಥಾನಗಳು ಬೇಕೆಂಬ ಬೇಡಿಕೆ ಬಂದಿರುವುದು ನಿಜವಾದರೂ ಆ ಸ್ಥಾನಗಳಿಗೆ ಯಾರನ್ನು ಆಯ್ಕೆ ಮಾಡಬೇಕು ಎಂಬ ವಿವೇಚನೆ ಕಾಂಗ್ರೆಸ್ಗೇ ಬಿಡಲಾಗಿದೆ ಎಂದು ಮುಸ್ಲಿಂ ನಾಯಕರು ಹೇಳಿದ್ದಾರೆ. ಯಾರು ಒಳ್ಳೆಯ ಕೆಲಸ ಮಾಡಿದ್ದಾರೆ, ಯಾರು ಉತ್ತಮ ಅಭ್ಯರ್ಥಿ ಎಂಬುದನ್ನು ಕಾಂಗ್ರೆಸ್ ನಿರ್ಧರಿಸಬೇಕು ಎಂಬ ಕಿವಿಮಾತು ಅವರಿಂದ ಕೇಳಿಬಂದಿದೆ. ಮುಸ್ಲಿಂ ಸಮುದಾಯದಿಂದ ಒಬ್ಬ ಆದರ್ಶ ಉಪ ಮುಖ್ಯಮಂತ್ರಿ ಆಗಬೇಕು ಎಂದು ಮುಖಂಡರು ಆಶಿಸಿದ್ದಾರೆ.
ಮುಂದುವರಿದು… ಮುಸ್ಲಿಂ ಮುಖಂಡರಿಂದ ಇನ್ನೂ ಒಂದು ಮಾತು ಕೇಳಿಬಂದಿದೆ. ಆದರೆ ಅದು ಅವಾಸ್ತವ ಬೇಡಿಕೆಯಾದೀತು ಎನ್ನುತ್ತಾರೆ ರಾಜಕೀಯ ಪಂಡಿತರು. ವಾಸ್ತವವಾಗಿ ಮುಸ್ಲಿಂ ಸಮುದಾಯದವರು ಮುಖ್ಯಮಂತ್ರಿ ಆಗಬೇಕು. ಏಕೆಂದರೆ ಕರ್ನಾಟಕದ ಇತಿಹಾಸದಲ್ಲಿ ಯಾವತ್ತೂ ಮುಸ್ಲಿಂ ಮುಖ್ಯಮಂತ್ರಿ ಆಗಿಲ್ಲ. ರಾಜ್ಯದಲ್ಲಿ 90 ಲಕ್ಷ ಮುಸ್ಲಿಮರಿದ್ದಾರೆ. ಪರಿಶಿಷ್ಟ ಜಾತಿ ಹೊರತುಪಡಿಸಿದರೆ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯ ಇವರದ್ದೇ ಎಂಬುದು ಗಮನಾರ್ಹ. ಅದರಲ್ಲಿ ಈ ಬಾರಿ ಶೇ. 88ರಷ್ಟು ಮಂದಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದಾರೆ ಎಂಬ ಕರ್ತ ಮುಂದಿಟ್ಟಿದ್ದಾರೆ. ಗಮನಾರ್ಹವೆಂದರೆ ಎಸ್ಎಂ ಕೃಷ್ಣ ಅವರ ಅಧಿಕಾರಾವಧಿಯಲ್ಲಿ ಐವರು ಮುಸ್ಲಿಂ ಮಂತ್ರಿಗಳು (ಮಹಿಳೆಯೂ ಇದ್ದರು) ಇದ್ದರು. ಆದರೆ ಈಗ ಉಪ ಮುಖ್ಯಮಂತ್ರಿ ಸ್ಥಾನ ತಮಗೆ ದಕ್ಕಬೇಕು ಎಂಬುದು ಮುಸ್ಲಿಮರ ಒಕ್ಕೊರಲ ಅಭಿಪ್ರಾಯವಾಗಿದೆ.
ಶನಿವಾರ ಬಂದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ 135 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಗಳಿಸಿದೆ. ಬಿಜೆಪಿ 66 ಸ್ಥಾನ ಪಡೆದರೆ ಜೆಡಿಎಸ್ 19 ಸ್ಥಾನ ಗಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:38 pm, Mon, 15 May 23