ಬೆಂಗಳೂರು, ಜನವರಿ 15: ಕೆಂಗೇರಿ ಸಮೀಪದಲ್ಲಿ ನಿರ್ಮಾಣವಾಗಿರುವ ನಾಡಪ್ರಭು ಕೆಂಪೇಗೌಡ ಲೇಔಟ್ನಲ್ಲಿ ರಸ್ತೆ, ವಿದ್ಯುತ್ ಸಂಪರ್ಕ ಇತ್ಯಾದಿ ಮೂಲಸೌಕರ್ಯಗಳ ಸಮಸ್ಯೆ ದಟ್ಟವಾಗಿ ಕಾಣುತ್ತಿದೆ. ಇಲ್ಲಿ ಮನೆ ಕಟ್ಟಿರುವ ಕೆಲವೇ ಸಂಖ್ಯೆಯ ನಿವಾಸಿಗಳು ತಮ್ಮದೇ ಸ್ವಂತ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕಾದಂತಹ ಸ್ಥಿತಿ ಇದೆ. ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆಯು ಈ ವಿಚಾರದ ಬಗ್ಗೆ ಬಿಡಿಎಗೆ ಪತ್ರ ಬರೆದು ಸಂಕಷ್ಟಗಳನ್ನು ಹೇಳಿಕೊಂಡಿದೆ. ವಿದ್ಯುತ್ ಸಂಪರ್ಕಕ್ಕಾಗಿ ನಿವಾಸಿಗಳು ಮಾಡಿರುವ ವೆಚ್ಚವನ್ನು ಭರಿಸಬೇಕು. ಬಡಾವಣೆಯಲ್ಲಿ ಸಂಪೂರ್ಣವಾಗಿ ವಿದ್ಯುತ್ ಸಂಪರ್ಕ ವ್ಯವಸ್ಥೆ ಮಾಡಬೇಕು ಎಂದು ವೇದಿಕೆಯು ತನ್ನ ಪತ್ರದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು ಆಗ್ರಹಿಸಿದೆ.
ಎನ್ಪಿಕೆಎಲ್ನಲ್ಲಿ (ಕೆಂಪೇಗೌಡ ಲೇಔಟ್) ಅಪೂರ್ಣ ಕಾಮಗಾರಿಯಿಂದಾಗಿ ನಾವು ಬೆಸ್ಕಾಂನಿಂದ ವಿದ್ಯುತ್ ಸಂಪರ್ಕ ಪಡೆಯಲು ಸ್ವಂತ ವೆಚ್ಚದಲ್ಲಿ ಕೇಬಲ್ ಅಳವಡಿಸಿಕೊಳ್ಳಬೇಕಾಯಿತು. ಅಷ್ಟೇ ಅಲ್ಲದೆ, ಕೆಲವು ಕಡೆ ಬೀದಿ ದೀಪಗಳಿಗೆ ನಮ್ಮ ಮನೆಯ ವಿದ್ಯುತ್ ಸಂಪರ್ಕವನ್ನು ಬಳಸಲಾಗುತ್ತಿದೆ. ಇದರಿಂದಾಗಿ ನಮಗೆ ಹೆಚ್ಚುವರಿ ಹಣಕಾಸಿನ ಹೊರೆ ಬಿದ್ದಿದೆ ಎಂದು ಈ ಫೋರಂ ವಿವರಿಸಿದೆ.
ಇದನ್ನೂ ಓದಿ: ಮುಡಾ ಹಗರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಮುಂದೂಡಿಕೆ
ಲೇಔಟ್ನ ನಿವೇಶನದಾರರು ವಿದ್ಯುತ್ ಪಡೆಯಲು ದೂರದಿಂದ ತಂತಿಗಳನ್ನು ಅಳಡಿಸಿಕೊಂಡು ಪಡೆಯುತ್ತಿರುವ ಸಂಪರ್ಕದ ವೆಚ್ಚ ಮತ್ತು ಬೀದಿ ದೀಪಕ್ಕಾಗಿ ತಮ್ಮ ವಿದ್ಯುತ್ ಸಂಪರ್ಕ ಕೊಟ್ಟಿರುವುದರಿಂದ ಆಗುತ್ತಿರುವ ಹೆಚ್ಚುವರಿ ಹೊರೆಯನ್ನು ಬಿಡಿಎ ಭರಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೆಂಗೇರಿ ಸಮೀಪ ಬೆಂಗಳೂರು-ಮೈಸೂರು ರಸ್ತೆ ಹಾಗೂ ಬೆಂಗಳೂರು-ಮಾಗಡಿ ರಸ್ತೆ ವ್ಯಾಪ್ತಿಗೆ ಬರುವ ಕೆಂಚನಪುರ, ಸೀಗೆಹಳ್ಳಿ, ಕೊಡಿಗೇಹಳ್ಳಿ, ಮಂಗನಹಳ್ಳಿ, ಕೊಮ್ಮಘಟ್ಟ, ಚಲ್ಲಘಟ್ಟ, ರಾಮಸಾಗರ ಮೊದಲಾದ ಹತ್ತಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡ ನಾಲ್ಕು ಸಾವಿರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್ ನಿರ್ಮಾಣ ಆಗುತ್ತಿದೆ.
ಈಗಾಗಲೇ ಈ ಲೇಔಟ್ನಲ್ಲಿ 26,000 ಕ್ಕೂ ಅಧಿಕ ನಿವೇಶನಗಳನ್ನು ಬಿಡಿಎ ಹಂಚಿದೆ. ಇದರಲ್ಲಿ ಮನೆಗಳಿಗೆ ಬಿಲ್ಡಿಂಗ್ ಪ್ಲಾನ್ ಪಡೆದಿರುವವರ ಸಂಖ್ಯೆ ನೂರಕ್ಕಿಂತಲೂ ಕಡಿಮೆ. ನಿವೇಶನ ಹಂಚಿಕೆ ಮಾಡಿ ಹಲವು ವರ್ಷಗಳೇ ಆದರೂ ಜನರು ಇಲ್ಲಿ ಮನೆ ನಿರ್ಮಿಸಲು ಮುಂದಾಗಿಲ್ಲ. ಈ ಬಡವಾಣೆಯಲ್ಲಿ ಮೂಲಸೌಕರ್ಯ ಇನ್ನೂ ಪೂರ್ಣವಾಗಿ ಸಿದ್ಧವಾಗಿಲ್ಲದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: ವಿಶ್ವ ಹವ್ಯಕ ಸಮ್ಮೇಳನ—ನಿಲ್ಲದ ವಿವಾದ, ನಿಲುಕದ ವಾಸ್ತವ
ಬಡವಾಣೆಯಲ್ಲಿ ಕೆಲ ಬ್ಲಾಕುಗಳಲ್ಲಿ ಮಾತ್ರವೇ ಡಾಂಬರು ರಸ್ತೆ ಸಂಪರ್ಕ ಇದೆ. ಉಳಿದ ಕಡೆ ಲಾರಿ ಇತ್ಯಾದಿ ದೊಡ್ಡ ಮೋಟಾರು ವಾಹನ ಚಲಾಯಿಸಲು ಸಾಧ್ಯವಾಗುವಂತೆ ರಸ್ತೆ ಅಭಿವೃದ್ಧಿ ಆಗಿಲ್ಲ. ಹೀಗಾಗಿ, ನಿವೇಶನದಾರರು ಮನೆ ನಿರ್ಮಾಣ ಸಾಹಸಕ್ಕೆ ಇನ್ನೂ ಕೈ ಹಾಕಿಲ್ಲ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ