ನಾಗರಬಾವಿಯಲ್ಲಿ ಬಾರ್ ಓಪನ್ ಆಗಿ ಎರಡೇ ದಿನವಾಯ್ತು! ಸ್ಥಳೀಯರಿಂದ ಪ್ರತಿಭಟನೆ, ಬಾರ್ಗೆ ಬೀಗಮುದ್ರೆ ಆಗ್ರಹಿಸಿ ಧರಣಿ
2 ದಿನದ ಹಿಂದಷ್ಟೇ ಓಪನ್ ಆಗಿರುವ ಬಾರ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಬಾರ್ ಬಾಗಿಲು ತೆಗೆಯುವ ಮುನ್ನವೇ ಸ್ಥಳೀಯರು ಬಾರ್ ಮುಂದೆ ಜಮಾವಣೆಗೊಂಡಿದ್ದಾರೆ.
ಬೆಂಗಳೂರು: ನಗರದ ನಾಗರಬಾವಿ ವೃತ್ತದ ಮೆಟ್ರೋ ಲೇಔಟ್ ಬಳಿಯಿರುವ ನೂತನ ಬಾರ್ ಮುಂದೆ ಏರಿಯಾ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. 2 ದಿನದ ಹಿಂದಷ್ಟೇ ಓಪನ್ ಆಗಿರುವ ಬಾರ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇಂದು ಬಾರ್ ಬಾಗಿಲು ತೆಗೆಯುವ ಮುನ್ನವೇ ಸ್ಥಳೀಯರು ಬಾರ್ ಮುಂದೆ ಜಮಾವಣೆಗೊಂಡಿದ್ದಾರೆ. ಸ್ಥಳೀಯ ನಿವಾಸಿಗಳ ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸರಿಂದ ಭದ್ರತೆ ನಿಯೋಜಿಸಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ಸಂಚಾರ ಸ್ಥಗಿತಗೊಳಿಸಿದ್ದಾರೆ. ಜನವಸತಿ ಪ್ರದೇಶದಲ್ಲಿ ಬಾರ್ ಮುಚ್ಚಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೆ ಬಾರ್ ಮಾಲೀಕರ ಜೊತೆ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಹಣದ ಹೊಳೆ ಹರಿಸಿದ್ದಕ್ಕೆ ನಮ್ಮ ವಿರೋಧವಿದ್ದರೂ ಅನುನತಿ ನೀಡಿದ್ದಾರೆ. ಬಿಬಿಎಂಪಿ, ಅಬಕಾರಿ ಇಲಾಖೆ, ಪೊಲೀಸರಿಗೆ ದೂರು ನೀಡಿದ್ರೂ ಕ್ರಮ ವಹಿಸಿಲ್ಲ. ಈಗಾಗ್ಲೇ ಈ ಏರಿಯಾದಲ್ಲಿ ಬಹಳಷ್ಟು ಬಾರ್ಗಳಿವೆ. ಈಗ ಓಪನ್ ಮಾಡಿರುವ ಬಾರ್ & ಲಾಡ್ಜ್ ನ ಸುತ್ತ ಶಾಲೆಗಳು, ದೇವಸ್ಥಾನಗಳಿವೆ. ಅಬಕಾರಿ ಇಲಾಖೆ ಅನುಮತಿ ವಾಪಾಸ್ ಪಡೆಯಬೇಕು. ಬಾರ್ ಗೆ ಬೀಗ ಹಾಕಿ ಸೀಲ್ ಹಾಕುವವರೆಗೂ ನಾವು ಸುಮ್ಮನಿರೊಲ್ಲ. ಪ್ರಭಾವ ಬಳಸಿ ಬಾರ್ ಓಪನ್ ಮಾಡಿದ್ದಾರೆಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಗಂಡ, ಮಕ್ಕಳು ದುಡಿದ ಹಣವನ್ನೆಲ್ಲಾ ಬಾರ್ಗೆ ಸುರಿಯುತ್ತಿದ್ದಾರೆ. ಹೆಂಡತಿ, ಮಕ್ಕಳು, ಅಕ್ಕ ತಂಗಿಯರು ಬೀದಿ ಪಾಲಾಗುತ್ತಿದ್ದಾರೆ. ಹೀಗಾಗಿ ನಮ್ಮ ಏರಿಯಾದಲ್ಲಿ ಬಾರ್ ಬಾಗಿಲು ತೆರೆಯುವುದೇ ಬೇಡ. ನೂತನ ಬಾರ್ಗೆ ಬೀಗಮುದ್ರೆ ಹಾಕುವವರೆಗೆ ಧರಣಿ ಹಿಂಪಡೆಯಲ್ಲ ಎಂದು ಸ್ಥಳೀಯರು ಖಡಕ್ ಆಗಿ ತಮ್ಮ ನಿಲುವನ್ನು ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ