ಬೆಂಗಳೂರು: ಬೆಂಗಳೂರಿನಲ್ಲಿ ಕಳೆದೊಂದು ವಾರದಿಂದ ವರುಣಾರ್ಭಟ ಮುಂದುವರಿದಿದೆ. ಅವಾಂತರಗಳ ಸರಮಾಲೆಯೇ ಸೃಷ್ಟಿಯಾಗುತ್ತಿದ್ದು, ಇಂದು(ಅ.19) ಮೆಟ್ರೋ ಕಾಂಪೌಂಡ್ ಕುಸಿದಿದೆ. ಬೆಂಗಳೂರಿನ ಮಂತ್ರಿಮಾಲ್ ಸಮೀಪದ ಜೆಡಿಎಸ್ ಕೇಂದ್ರ ಕಚೇರಿ ಮುಂಭಾಗದ ಮೆಟ್ರೋ ತಡೆಗೋಡೆ ಕುಸಿದಿದ್ದು, ಕಾರು, ಬೈಕ್ಗಳು ಜಖಂಗೊಂಡಿವೆ.
ತಡೆಗೋಡೆಯ ಪಕ್ಕದಲ್ಲಿ ಕಾರು ಹಾಗೂ ಬೈಕ್ಗಳನ್ನು ನಿಲ್ಲಿಸಲಾಗಿತ್ತು. ಆದ್ರೆ, ಮೆಟ್ರೋ ತಡೆಗೋಡೆ ಕುಸಿತದಿಂದ 6 ಕಾರುಗಳು ಹಾಗೂ ಎರಡು ಬೈಕ್ಗೆ ಹಾನಿಯಾಗಿದೆ. ಇದರಿಂದ ವಾಹನದ ಮಾಲೀಕರು ಕಂಗಾಲಾಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಬಹುತೇಕ ಬೆಂಗಳೂರಿನ ಎಲ್ಲಾ ಅಂಡರ್ಪಾಸ್ಗಳಲಿ ನೀರು ತಂಬಿ ನಂದಿಯಂತಾಗಿವೆ. ಇನ್ನು ಚಿಕ್ಕಪೇಟೆ, ಸುಲ್ತಾನ್ ಪೇಟೆಯಲ್ಲಿ ಹಲವು ಅಂಗಡಿಗಳು ಜಲಾವೃತವಾಗಿ ವ್ಯಾಪಾರಿಗಳು ನಷ್ಟ ಅನುಭವಿಸುವಂತಾಗಿದೆ.
ವಿಲ್ಸನ್ ಗಾರ್ಡ್, ಶಾಂತಿನಗರ, ಶಿವಾನಂದ ಸರ್ಕಲ್ ಸೇರಿದಂತೆ ಹಲವು ಕಡೆಗಳಲ್ಲಿ ಧಾರಾಕಾರ ಮಳೆಗೆ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆ ಮೇಲೆ ಸುಮಾರು ಎರಡು ಅಡಿಯಷ್ಟು ನೀರು ನಿಂತಿದೆ. ಇದರಿಂದ ವಾಹನ ಸವಾರು ಪರದಾಡುವಂತಾಗಿದೆ.
ಇನ್ನೂ 5 ದಿನ ಭಾರೀ ಮಳೆ ಸಾಧ್ಯತೆ
ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಇನ್ನೂ ಮುಂದಿನ ಐದು ದಿನ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಲ್ಲೂ ಇನ್ನೂ 5 ದಿನ ಮಳೆಯ ಎಚ್ಚರಿಕೆ ನೀಡಲಾಗಿದೆ. ತಗ್ಗು ಪ್ರದೇಶ ಹಾಗೂ ರಾಜಾಕಾಲುವೆ ಅಕ್ಕಪಕ್ಕದಲ್ಲಿ ವಾಸಿಸುವ ಜನರು ಜಾಗ್ರತೆಯಿಂದ ಇರಬೇಕಿದೆ.