ನಮ್ಮ ಮೆಟ್ರೋ 3ನೇ ಹಂತ: ರಾಜ್ಯ ಬಜೆಟ್​ನಲ್ಲಿ 1000 ಕೋಟಿ ರೂ. ಅನುದಾನಕ್ಕೆ ಬೇಡಿಕೆ

|

Updated on: Feb 15, 2024 | 8:34 AM

Namma Metro 3rd Phase: ನಮ್ಮ ಮೆಟ್ರೋ ಕಾಮಗಾರಿಗಳು ಸದ್ಯ ಚುರುಕುಗೊಂಡಿದ್ದು, ಬೆಂಗಳೂರಿನಾದ್ಯಂತ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ವಿಚಾರವಾಗಿ ಬಿಎಂಆರ್​​ಸಿಎಲ್ ತ್ವರಿತಗತಿಯಲ್ಲಿ ಹೆಜ್ಜೆ ಇಡುತ್ತಿದೆ. ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ರಾಜ್ಯ ಸರ್ಕಾರದಿಂದ ಈ ಬಾರಿಯ ಬಜೆಟ್​ನಲ್ಲಿ 1,003.47 ಕೋಟಿ ರೂ. ಅನುದಾನ ನಿರೀಕ್ಷಿಸಲಾಗುತ್ತಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ನಮ್ಮ ಮೆಟ್ರೋ 3ನೇ ಹಂತ: ರಾಜ್ಯ ಬಜೆಟ್​ನಲ್ಲಿ 1000 ಕೋಟಿ ರೂ. ಅನುದಾನಕ್ಕೆ ಬೇಡಿಕೆ
ನಮ್ಮ ಮೆಟ್ರೋ
Follow us on

ಬೆಂಗಳೂರು, ಫೆಬ್ರವರಿ 15: ನಮ್ಮ ಮೆಟ್ರೋ (Namma Metro) ಮೂರನೇ ಹಂತದ ಯೋಜನೆಗೆ ರಾಜ್ಯ ಸರ್ಕಾರದಿಂದ (Karnataka Government) 1,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವನ್ನು ಕೋರಲಾಗಿದೆ. ಈ ಬಾರಿಯ ಬಜೆಟ್​ನಲ್ಲಿ ಈ ಮೊತ್ತವನ್ನು ನಿರೀಕ್ಷಿಸಲಾಗಿದ್ದು, ಯೋಜನೆಯೆ ಕಾಮಗಾರಿಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ. ನಮ್ಮ ಮೆಟ್ರೋ ಮೂರನೇ ಹಂತ 44.65 ಕಿಮೀ ಉದ್ದವಿದ್ದು, ಎರಡು ಹೊಸ ಮಾರ್ಗಗಳನ್ನು (ಜೆಪಿ ನಗರ 4 ನೇ ಹಂತದಿಂದ ಕೆಂಪಾಪುರ ಮತ್ತು ಹೊಸಹಳ್ಳಿಯಿಂದ ಕಡಬಗೆರೆ) ಹೊಂದಿರಲಿದೆ.

ಮೊದಲ ಮಾರ್ಗವು ಹೊರ ವರ್ತುಲ ರಸ್ತೆಯ (ಔಟರ್ ರಿಂಗ ರೋಡ) ಪಶ್ಚಿಮ ಭಾಗವನ್ನು ಒಳಗೊಳ್ಳಲಿದ್ದು, ಎರಡನೆಯದು ಮಾಗಡಿ ರಸ್ತೆಯಲ್ಲಿ ಸಾಗಲಿದೆ.

ಮೂರನೇ ಹಂತಕ್ಕಾಗಿ ವಿಸ್ತೃತ ಯೋಜನಾ ವರದಿಯನ್ನು (DPR) ಅನುಮೋದನೆಗಾಗಿ 2022 ರ ನವೆಂಬರ್ ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಸುದೀರ್ಘ ಚರ್ಚೆಗಳ ನಂತರ, ಮಾರ್ಚ್ ವೇಳೆಗೆ ಕೇಂದ್ರವು ಡಿಪಿಆರ್ ಅನ್ನು ಅನುಮೋದಿಸುವ ನಿರೀಕ್ಷೆ ಇದೆ ಎಂದು ಬಿಎಂಆರ್​​ಸಿಎಲ್ ಮೂಲಗಳು ತಿಳಿಸಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ವಿಸ್ತೃತ ಯೋಜನಾ ವರದಿಯನ್ನು ಅನುಮೋದಿಸಲು ಕೇಂದ್ರ ಸರ್ಕಾರವು ಸಾಮಾನ್ಯವಾಗಿ 12-18 ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಆದ್ದರಿಂದ ಇದು ಅಸಾಧ್ಯವೇನಲ್ಲ. ಕಾಮಗಾರಿಗೆ ಸಿದ್ಧತೆ ಕೈಗೊಳ್ಳಲು, ಮುಂಬರುವ ಬಜೆಟ್‌ನಲ್ಲಿ 1,003.47 ಕೋಟಿ ರೂಪಾಯಿಗಳನ್ನು ನಿಗದಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಬಿಎಂಆರ್​​ಸಿಎಲ್ ಮನವಿ ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಸಂಬಂಧಿಸಿ ಬಿಎಂಆರ್​​ಸಿಎಲ್ ಈಗಾಗಲೇ ಪೂರ್ವ ನಿರ್ಮಾಣ ಚಟುವಟಿಕೆಗಳನ್ನು ಆರಂಭಿಸಿದೆ. ಇವುಗಳಲ್ಲಿ ಸ್ಥಳಾಂತರ, ಭೂಸ್ವಾಧೀನ ಇತ್ಯಾದಿ ಚಟುವಟಿಕೆಗಳು ಸೇರಿವೆ.

ಭೂಸ್ವಾಧೀನ ಕುರಿತು ಮಾತನಾಡಿದ ಬಿಎಂಆರ್‌ಸಿಎಲ್‌ನ ಪ್ರಧಾನ ವ್ಯವಸ್ಥಾಪಕ (ಭೂಸ್ವಾಧೀನ) ಎಂಎಸ್ ಚನ್ನಪ್ಪಗೌಡರ್, ಜೆಪಿ ನಗರ 4ನೇ ಹಂತ ಮತ್ತು ಮೈಸೂರು ರಸ್ತೆ ನಡುವೆ ನಿಲ್ದಾಣಗಳು ಮತ್ತು ಮೇಲ್ಸೇತುವೆಗಳನ್ನು ನಿರ್ಮಿಸಲು ಅಗತ್ಯವಿರುವ ಆಸ್ತಿಗಳನ್ನು ಗುರುತಿಸಲಾಗಿದೆ ಮತ್ತು ಮಾಲೀಕರಿಂದ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಆದಾಗ್ಯೂ, ನಾಗರಭಾವಿ-ಕೆಂಪಾಪುರ ಮಾರ್ಗ ಮತ್ತು ಮಾಗಡಿ ರಸ್ತೆ ಮಾರ್ಗಕ್ಕಾಗಿ ಭೂಮಿ ಗುರುತಿಸುವಿಕೆ ಮತ್ತು ಸ್ವಾಧೀನ ಇನ್ನಷ್ಟೇ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಬಜೆಟ್​ ಯಾವಾಗ, ಸಮಯ? ಗಾತ್ರ ಎಷ್ಟು? ಎಲ್ಲಿ ಲೈವ್ ವೀಕ್ಷಿಸಬಹುದು? ಇಲ್ಲಿದೆ ವಿವರ

ಸರ್ಕಾರ 3ನೇ ಹಂತಕ್ಕೆ ಅನುಮೋದನೆ ನೀಡಿದ ತಕ್ಷಣ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದ್ದು, 6-8 ತಿಂಗಳು ಬೇಕಾಗುತ್ತದೆ ಎಂದು ಚನ್ನಪ್ಪಗೌಡ ತಿಳಿಸಿದ್ದಾರೆ.

ನಮ್ಮ ಮೆಟ್ರೋ ಮೂರನೇ ಹಂತದ ವಿವರ

  • ಉದ್ದ: 44.65 ಕಿಮೀ
  • ಲೈನ್​​ಗಳು: 2
  • ನಿಲ್ದಾಣಗಳು: 31
  • ಜೆಪಿ ನಗರ 4ನೇ ಹಂತದಿಂದ ಕೆಂಪಾಪುರ: 32.15 ಕಿಮೀ; 23 ನಿಲ್ದಾಣಗಳು
  • ಹೊಸಹಳ್ಳಿ-ಕಡಬಗೆರೆ: 12.5 ಕಿಮೀ, 9 ನಿಲ್ದಾಣಗಳು
  • 2024-25ರಲ್ಲಿ ಕೋರಿದ ಅನುದಾನ: ರೂ 1,003.47 ಕೋಟಿ ರೂ.

ಕರ್ನಾಟಕದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ