ಮೆಟ್ರೋ ಪ್ರಯಾಣಿಕರಿಗೆ ಶುಭಸುದ್ದಿ: ಹಸಿರು ಮಾರ್ಗಕ್ಕೆ ಸೇರ್ಪಡೆಗೊಳ್ಳಲಿವೆ 21 ಹೊಸ ರೈಲುಗಳು

BMRCL Namma Metro Green Line: ನಮ್ಮ ಮೆಟ್ರೋದ ಹಸಿರು ಮಾರ್ಗಕ್ಕೆ 21 ಹೊಸ CRRC 6-ಕೋಚ್ ರೈಲುಗಳು ಸೇರ್ಪಡೆಯಾಗುತ್ತಿವೆ. ಇದರಿಂದ ಹಸಿರು ಮಾರ್ಗದಲ್ಲಿ ಸಂಚಾರ ವೇಗ ಹೆಚ್ಚಾಗಲಿದ್ದು, ಪ್ರಯಾಣ ಅವಧಿ ಕಡಿತಗೊಳ್ಳಲಿದೆ. ಹಸಿರು ಮಾರ್ಗದ ಹಳೆಯ 17 ರೈಲುಗಳನ್ನು ನೇರಳೆ ಮಾರ್ಗಕ್ಕೆ ಸ್ಥಳಾಂತರಿಸಲಾಗುತ್ತಿದ್ದು, ಈ ಮೂಲಕ ಪ್ರಯಾಣಿಕರಿಗೆ ಉತ್ತಮ ಸೇವೆ ಲಭ್ಯವಾಗಲಿದೆ. ಹೊಸ ರೈಲುಗಳು ಮಾರ್ಚ್‌ನೊಳಗೆ ವಾಣಿಜ್ಯ ಸೇವೆಗೆ ಲಭ್ಯವಾಗಲಿವೆ ಎಂದು ಇಲಾಖೆ ತಿಳಿಸಿದೆ.

ಮೆಟ್ರೋ ಪ್ರಯಾಣಿಕರಿಗೆ ಶುಭಸುದ್ದಿ: ಹಸಿರು ಮಾರ್ಗಕ್ಕೆ ಸೇರ್ಪಡೆಗೊಳ್ಳಲಿವೆ 21 ಹೊಸ ರೈಲುಗಳು
ಹಸಿರು ಮಾರ್ಗಕ್ಕೆ 21 ಹೊಸ ರೈಲುಗಳ ಸೇರ್ಪಡೆ

Updated on: Dec 31, 2025 | 11:07 AM

ಬೆಂಗಳೂರು, ಡಿಸೆಂಬರ್ 31: ನಮ್ಮ ಮೆಟ್ರೋದ ಹಸಿರು ಮಾರ್ಗದಲ್ಲಿ (ಮಾದಾವರ–ಸಿಲ್ಕ್ ಇನ್‌ಸ್ಟಿಟ್ಯೂಟ್) ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಆರಂಭಿಕ ಹಂತದಲ್ಲಿ (ಫೇಸ್–1) ಕಾರ್ಯಾಚರಣೆಯಲ್ಲಿದ್ದ 17 ರೈಲುಗಳನ್ನು ಹಂತ ಹಂತವಾಗಿ ನೇರಳೆ ಮಾರ್ಗಕ್ಕೆ ಸ್ಥಳಾಂತರ ಮಾಡಲಾಗುತ್ತಿದ್ದು, ಹಸಿರು ಮಾರ್ಗಕ್ಕೆ ಸಂಪೂರ್ಣವಾಗಿ 21 ಹೊಸ ಆಧುನಿಕ 6-ಕೋಚ್ CRRC ರೈಲುಗಳನ್ನು ನಿಯೋಜಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ನೇರಳೆ ಮಾರ್ಗಕ್ಕೂ ಹೆಚ್ಚುವರಿ ರೈಲುಗಳು

33.5 ಕಿ.ಮೀ ಉದ್ದದ ಉತ್ತರ–ದಕ್ಷಿಣ ಕಾರಿಡಾರ್ ಆಗಿರುವ ಹಸಿರು ಮಾರ್ಗಕ್ಕೆ ಸಂಪೂರ್ಣ ಹೊಸ ರೈಲುಗಳನ್ನು ನೀಡುವ ಮೂಲಕ ಸಂಚಾರ ಅವಧಿಯನ್ನು ಕಡಿತಗೊಳಿಸಿ, ರೈಲುಗಳ ಓಡಾಟವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರಿಂದ ಹೆಚ್ಚಿನ ಪ್ರಯಾಣಿಕರಿಂದ ಕೂಡಿರುವ ಪೂರ್ವ–ಪಶ್ಚಿಮ ಕಾರಿಡಾರ್‌ನ ನೇರಳೆ ಮಾರ್ಗಕ್ಕೂ ಹೆಚ್ಚುವರಿ ರೈಲುಗಳು ಲಭ್ಯವಾಗಲಿವೆ.

ಚೀನಾ ಮತ್ತು ಕೊಲ್ಕತ್ತಾದಿಂದ 21 ರೈಲುಗಳ ಪೂರೈಕೆ

2019–20ರ ಒಪ್ಪಂದದಂತೆ ಡಿಟಿಜಿ (ಡಿಸೈನ್ ಟು ಗೋ) ತಂತ್ರಜ್ಞಾನದ 21 ಮೆಟ್ರೋ ರೈಲುಗಳನ್ನು ಚೀನಾದ ಸಿಆರ್‌ಆರ್‌ಸಿ ಹಾಗೂ ಭಾರತದಲ್ಲಿನ ಟಿಟಾಗಢ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಪೂರೈಸಲಿದೆ. ಈ ಪೈಕಿ ಒಂದು ಪ್ರೋಟೋಟೈಪ್ ರೈಲು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು, ಹಸಿರು ಮಾರ್ಗದಲ್ಲಿ ಜಲಹಳ್ಳಿ–ಮಂತ್ರಿಸ್ಕ್ವೇರ್–ಸಂಪಿಗೆ ರಸ್ತೆ ನಡುವಿನ ಭಾಗದಲ್ಲಿ ಆರ್‌ಡಿಎಸ್‌ಒ ಮೇಲ್ವಿಚಾರಣೆಯಲ್ಲಿ ರಾತ್ರಿ ವೇಳೆ ಪರೀಕ್ಷಾ ಸಂಚಾರ ನಡೆಯುತ್ತಿದೆ.

ಇದನ್ನೂ ಓದಿ ನಮ್ಮ ಮೆಟ್ರೋ ಹಳದಿ ಮಾರ್ಗ ಪ್ರಯಾಣಿಕರಿಗೆ ಶುಭಸುದ್ದಿ: ಬೆಂಗಳೂರು ತಲುಪಿದ ಡ್ರೈವರ್ಲೆಸ್ 7ನೇ ರೈಲು

ಮುಂದಿನ ಒಂದೆರಡು ವಾರಗಳಲ್ಲಿ ತಪಾಸಣೆ ಪೂರ್ಣಗೊಂಡ ಬಳಿಕ ರೈಲ್ವೆ ಸುರಕ್ಷತಾ ಪ್ರಧಾನ ಆಯುಕ್ತಾಲಯ ಹಾಗೂ ರೈಲ್ವೆ ಮಂಡಳಿಯ ಅನುಮೋದನೆ ಪಡೆದು ಮಾರ್ಚ್ ಒಳಗಾಗಿ ವಾಣಿಜ್ಯ ಸೇವೆಗೆ ಸೇರಿಸುವ ಗುರಿ ಹೊಂದಲಾಗಿದೆ. ಹೊಸ ರೈಲುಗಳ ಸೇರ್ಪಡೆಯಿಂದ ಸಂಚಾರ ವೇಗ ಹೆಚ್ಚಾಗಿ, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published On - 11:01 am, Wed, 31 December 25