ಬೆಂಗಳೂರು, ಜನವರಿ 27: ತಾಂತ್ರಿಕ ದೋಷದಿಂದ ಇಂದು (ಜ.27) ಮಧ್ಯಾಹ್ನ 1 ಗಂಟೆವರೆಗೆ ನೇರಳೆ ಮಾರ್ಗದ (Purple Line) ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ (MG Road-Baiyappanhalli) ನಡುವೆ ಮೆಟ್ರೋ (Metro) ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಚಲ್ಲಘಟ್ಟ-ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಎಂದಿನಂತೆ ಮೆಟ್ರೋ ಸಂಚಾರ ಇರಲಿದೆ. ಹಸಿರು ಮಾರ್ಗದಲ್ಲಿ ರೈಲುಗಳು ಎಂದಿನಂತೆ ಸಂಚರಿಸಲಿವೆ.
ಹಸಿರು ಮಾರ್ಗ ಪ್ರಯಾಣಿಕರಿಗೆ ಪೀಣ್ಯ ಹಾಗೂ ನಾಗಸಂದ್ರದ ನಡುವೆ ಮೂರು ದಿನ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ. ನಾಗಸಂದ್ರದಿಂದ ಮಾದವಾರ ವರೆಗಿನ ವಿಸ್ತರಿತ ಮಾರ್ಗದಲ್ಲಿ ಕಾಮಾಗಾರಿ ನಡೆಯಲಿರುವ ಕಾರಣ ಶುಕ್ರವಾರ ಜನವರಿ 26 ರಿಂದ ಜನವರಿ 28ರ ತನಕ ಮೆಟ್ರೋ ರೈಲು ಸಂಚಾರ ತಾತ್ಕಲಿಕ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿತ್ತು. ಜನವರಿ 29ರ ಬೆಳಗ್ಗೆ 5 ಗಂಟೆಯಿಂದ ಎಂದಿನಂತೆ ಸಂಚಾರ ಶುರುವಾಗಲಿದೆ ಎಂದು ಬಿಎಂಆರ್ಸಿಎಲ್ ಮಾಹಿತಿ ನಿಡಿದೆ.
ಮೆಟ್ರೋದ ಎರಡನೇ ಹಂತದ ಕಾಮಗಾರಿ ಕೂಡ ಸದ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ನಗರದ ಎಲ್ಲ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಆರ್ಸಿಎಲ್ ಚುರುಕಿನ ಕಾಮಗಾರಿ ನಡೆಸುತ್ತಿದೆ. ಇದರಡಿ ನಾಗಸಂದ್ರದಿಂದ ಮಾದವಾರ ವರೆಗಿನ ವಿಸ್ತರಿತ ಮಾರ್ಗ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಮಾದವಾರ ವರೆಗೆ ಮೆಟ್ರೋ ಸೇವೆ ದೊರೆಯಲಿದೆ.
ಮೆಟ್ರೋ ಸಂಚಾರ ಸ್ಥಗಿತಗೊಳ್ಳುವ ಕಾರಣ ಪೀಣ್ಯ ಸುತ್ತ ಮುತ್ತ ಸಂಚಾರ ದಟ್ಟಣೆ ಹೆಚ್ಚಾಗಿದೆ. ಸದ್ಯ ನಮ್ಮ ಮೆಟ್ರೋ ರೈಲುಗಳಲ್ಲಿ ದಿನವೊಂದಕ್ಕೆ ಬರೊಬ್ಬರಿ 6.5 ಲಕ್ಷ ಜನ ಸಂಚರಿಸುತ್ತಿದ್ದಾರೆ. ಈ ಪೈಕಿ 80 ಸಾವಿರದಿಂದ 1 ಲಕ್ಷ ಜನ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದಾರೆ. ಇದು ಟಿಕೆಟ್ ಕೌಂಟರ್ನ ಒತ್ತಡ ಕಡಿಮೆ ಆಗಲು ಕಾರಣವಾಗಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಇದನ್ನೂ ಓದಿ: Bengaluru Metro: ಸರ್ಜಾಪುರದಿಂದ ಹೆಬ್ಬಾಳಕ್ಕೆ ನಮ್ಮ ಮೆಟ್ರೋ ಸಂಪರ್ಕ ಯೋಜನೆ, ಡಿಪಿಆರ್ ಸಿದ್ಧ; ನಿಲ್ದಾಣಗಳ ಮಾಹಿತಿ ಇಲ್ಲಿದೆ
ಈ ಮಧ್ಯೆ, ಚಾಲಕ ರಹಿತ ಮೆಟ್ರೋ ರೈಲು ಸೇವೆ ನೀಡುವ ವಿಚಾರದಲ್ಲಿಯೂ ಬಿಎಂಆರ್ಸಿಎಲ್ ಮುಂದಡಿಯಿಟ್ಟಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಗೆ ಮೊದಲ ಚಾಲಕ ರಹಿತ ರೈಲು ಚೀನಾದಿಂದ ಹೊರಟಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋಗೆ ಮೊದಲ ಆರು ಬೋಗಿಗಳ ರೈಲನ್ನು ಜನವರಿ 20 ರಂದು ಹಡಗಿಗೆ ಲೋಡ್ ಮಾಡಲಾಗಿದ್ದು, ಅದು ಸದ್ಯ ಚೆನ್ನೈನತ್ತ ಸಾಗುತ್ತಿದೆ. ಇದು 2024 ರ ಮಧ್ಯಭಾಗದಲ್ಲಿ ಚೆನ್ನೈ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ನಂತರ ಅಲ್ಲಿಂದ ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಸಾಗಿಸಲಾಗುತ್ತದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:50 am, Sat, 27 January 24