ನಮ್ಮ ಮೆಟ್ರೋ ಪಿಂಕ್‌ ಲೈನ್‌ನ ಸಿಎಂಆರ್​​ಎಸ್​ ಪರಿಶೀಲನೆ ಪೂರ್ಣ: 7.5 ಕಿ.ಮೀ ಎಲಿವೇಟೆಡ್ ಮಾರ್ಗದಲ್ಲಿ ತಪಾಸಣೆ

ನಮ್ಮ ಮೆಟ್ರೋ ಪಿಂಕ್ ಲೈನ್‌ನ ಕಾಳೇನ ಅಗ್ರಹಾರ-ತಾವರೆಕೆರೆ ಎಲಿವೇಟೆಡ್ ಮಾರ್ಗದ ಸಿಎಂಆರ್‌ಎಸ್ (CMRS) ಸುರಕ್ಷತಾ ಪರಿಶೀಲನೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ವಾಣಿಜ್ಯ ಸಂಚಾರಕ್ಕೆ ಅನುಮೋದನೆ ಸಿಗುವ ನಿರೀಕ್ಷೆಯಿದೆ. ತಪಾಸಣೆಯ ಸಂದರ್ಭದಲ್ಲಿ ಸಿಎಂಆರ್‌ಸ್ ಸೂಚಿಸಿರುವ ಅಂಶಗಳು ಹಾಗೂ ಷರತ್ತುಗಳನ್ನು ಪಾಲಿಸಿದ ನಂತರವೇ ಪ್ರಯಾಣಿಕರ ಸಂಚಾರಕ್ಕೆ ಅಗತ್ಯವಾದ ಸುರಕ್ಷತಾ ಅನುಮೋದನೆ ನೀಡಲಾಗುವುದು ಎಂದು ಬಿಎಂಆರ್​​ಸಿಎಲ್​​ ಕೂಡ ತಿಳಿಸಿದೆ.

ನಮ್ಮ ಮೆಟ್ರೋ ಪಿಂಕ್‌ ಲೈನ್‌ನ ಸಿಎಂಆರ್​​ಎಸ್​ ಪರಿಶೀಲನೆ ಪೂರ್ಣ: 7.5 ಕಿ.ಮೀ ಎಲಿವೇಟೆಡ್ ಮಾರ್ಗದಲ್ಲಿ ತಪಾಸಣೆ
ಪಿಂಕ್‌ ಲೈನ್‌ನ ಸಿಎಂಆರ್​​ಎಸ್​ ಸುರಕ್ಷತಾ ಪರಿಶೀಲನೆ ಪೂರ್ಣ
Image Credit source: BMRCL X Page
Edited By:

Updated on: Oct 08, 2026 | 3:59 PM

ಬೆಂಗಳೂರು, ಅಕ್ಟೋಬರ್​​ 08: ಬಹು ನಿರೀಕ್ಷಿತ ನಮ್ಮ ಮೆಟ್ರೋ ಪಿಂಕ್​​ ಲೈನ್​​ ಆರಂಭಕ್ಕೆ ಸಂಬಂಧಿಸಿ ಮಹತ್ವದ ಬೆಳವಣಿಗೆ ನಡೆದಿದ್ದು, ಕಾಳೇನ ಅಗ್ರಹಾರ–ತಾವರೆಕೆರೆ 7.5 ಕಿ.ಮೀ ಎಲಿವೇಟೆಡ್ ಮಾರ್ಗದ ಸುರಕ್ಷತಾ ಪರಿಶೀಲನೆ ಪೂರ್ಣಗೊಂಡಿದೆ. ಅಕ್ಟೋಬರ್ 6ರಿಂದ 8ರ ವರೆಗೆ ದಕ್ಷಿಣ ವಲಯ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತ (ಸಿಎಂಆರ್‌ಎಸ್) ವಿ. ವೆಂಕಟಸುಬ್ರಮಣಿಯನ್ ನೇತೃತ್ವದಲ್ಲಿ ಪರಿಶೀಲನಾ ಕಾರ್ಯ ನಡೆದಿದೆ. ಅ. 6ರಂದು ಮುಖ್ಯ ಮಾರ್ಗ ಹಾಗೂ ಮೂಲಸೌಕರ್ಯಗಳ ಮೋಟಾರ್ ಟ್ರಾಲಿ ಪರಿಶೀಲನೆ, ಅ.7ರಂದು ಕೊತ್ತನೂರು ಡಿಪೋ ಪರಿಶೀಲನೆ ಜೊತೆಗೆ ರೈಲು ಟ್ರಯಲ್ ಮತ್ತು ಟೆಸ್ಟಿಂಗ್, ಅ. 8ರಂದು ಬೈಯಪ್ಪನಹಳ್ಳಿ OCC ಪರಿಶೀಲನೆ ನಡೆಸಲಾಗಿದೆ.

ಒಟ್ಟು 6 ಮೆಟ್ರೋ ನಿಲ್ದಾಣ ಒಳಗೊಂಡಿರುವ ಪಿಂಕ್‌ ಲೈನ್‌ನ ಎಲಿವೇಟೆಡ್ ಮಾರ್ಗ

ಕಾಳೇನ ಅಗ್ರಹಾರ, ಹುಳಿಮಾವು, IIMB, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿ ಒಟ್ಟು 6 ಮೆಟ್ರೋ ನಿಲ್ದಾಣಗಳನ್ನು ಪಿಂಕ್‌ ಲೈನ್‌ನ ಎಲಿವೇಟೆಡ್ ಮಾರ್ಗ ಹೊಂದಿದೆ. ಈ ಸುರಕ್ಷತಾ ತಪಾಸಣೆಯು ಮಾರ್ಗದಲ್ಲಿ ವಾಣಿಜ್ಯ ಪ್ರಯಾಣಿಕರ ಸೇವೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಈಗಾಗಲೇ ಬಿಎಂಆರ್‌ಸಿಲ್ ಆಗಸ್ಟ್ 2026ರಲ್ಲಿ ಸಂಶೋಧನಾ ವಿನ್ಯಾಸ ಮತ್ತು ಮಾನದಂಡಗಳ ಸಂಸ್ಥೆಯಿಂದ (RDSO) ವೇಗ ಪ್ರಮಾಣಪತ್ರವನ್ನು ಪಡೆದಿದೆ. ತದನಂತರ ರೈಲ್ವೆ ಮಂಡಳಿಯಿಂದ ಮೆಟ್ರೋ ರೈಲು ಬೋಗಿಗಳಿಗೆ ತಾತ್ಕಾಲಿಕ ಅನುಮೋದನೆ ಹಾಗೂ ಸಿಗ್ನಲಿಂಗ್ ವ್ಯವಸ್ಥೆಗೆ ಸ್ವತಂತ್ರ ಸುರಕ್ಷತಾ ಮೌಲ್ಯಮಾಪಕರಿಂದ (ISA) ಸುರಕ್ಷತಾ ಪ್ರಮಾಣೀಕರಣವನ್ನು ಪಡೆಯಲಾಗಿದೆ.

ಇದನ್ನೂ ಓದಿ: ಹೊಸ ರೈಲುಗಳ ಸಂಚಾರಕ್ಕೆ ರೈಲ್ವೆ ಮಂಡಳಿ ಅನುಮೋದನೆ: ಶೀಘ್ರವೇ ನಮ್ಮ ಮೆಟ್ರೋ ಪಿಂಕ್​​ ಲೈನ್​​ ಕಾರ್ಯಾರಂಭ ಸಾಧ್ಯತೆ

ತಪಾಸಣೆಯ ಸಂದರ್ಭದಲ್ಲಿ ಸಿಎಂಆರ್‌ಸ್ ಸೂಚಿಸಿರುವ ಅಂಶಗಳು ಹಾಗೂ ಷರತ್ತುಗಳನ್ನು ಪಾಲಿಸಿದ ನಂತರವೇ ಪ್ರಯಾಣಿಕರ ಸಂಚಾರಕ್ಕೆ ಅಗತ್ಯವಾದ ಸುರಕ್ಷತಾ ಅನುಮೋದನೆ ನೀಡಲಾಗುವುದು. ಗುಲಾಬಿ ಮಾರ್ಗದ ಈ ಎತ್ತರಿಸಿದ ವಿಭಾಗವು ಸಾರ್ವಜನಿಕ ಸೇವೆಗೆ ಮುಕ್ತಗೊಂಡ ನಂತರ, ನಮ್ಮ ಮೆಟ್ರೋದ ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 96.10 ಕಿ.ಮೀ. ಮಾರ್ಗದ ಉದ್ದವು 103.60 ಕಿ.ಮೀ.ಗೆ ವಿಸ್ತರಣೆಯಾಗಲಿದೆ. ಇದರಿಂದ ಬನ್ನೇರುಘಟ್ಟ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಮತ್ತಷ್ಟು ಸುಧಾರಿಸಲಿದ್ದು, ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚಿನ ಬಲ ದೊರೆಯಲಿದೆ ಎಂದು ಬಿಎಂಆರ್​​ಸಿಎಲ್​​ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:58 pm, Thu, 8 October 26

ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
Loading...
Unable to load recommendations.
Follow Us