
ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಬೈಯಪ್ಪನಹಳ್ಳಿ – ಕೆಆರ್ ಪುರ ಮೆಟ್ರೊ ನಿಲ್ದಾಣಗಳ ನಡುವೆ ಬುಧವಾರ ಪ್ರಾಯೋಗಿಕ ಸಂಚಾರ ಆರಂಭಿಸಿದ್ದು, ಪ್ರತಿನಿತ್ಯ ವೈಟ್ಫೀಲ್ಡ್ಗೆ ತೆರಳುವ ಮತ್ತು ಅಲ್ಲಿಂದ ಬರುವ ಜನರಿಗೆ ಭರವಸೆ ಮೂಡಿಸಿದೆ. ಪರ್ಪಲ್ ಲೈನ್ನ ಪ್ರಮುಖ ವಿಭಾಗದಲ್ಲಿ ಪ್ರಾಯೋಗಿಕ ಸಂಚಾರ ಬುಧವಾರ ಸಂಜೆ 6 ಗಂಟೆಗೆ ಪ್ರಾರಂಭವಾಯಿತು ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
1 ನೇ ರೈಲು ಸಂಚಾರ ಪರೀಕ್ಷೆಯು ಸಂಜೆ 6.04 ಕ್ಕೆ ಕೆಆರ್ ಪುರದಿಂದ ಬೈಯಪ್ಪನಹಳ್ಳಿ ನಡುವೆ ನಿಧಾನಗತಿಯಲ್ಲಿ ನಡೆಯಿತು. ರೈಲು ಮರಳಿ ಕೆಆರ್ ಪುರ ನಿಲ್ದಾಣಕ್ಕೆ ಹಿಂತಿರುಗಿತು ಎಂದು ಬಿಎಂಆರ್ಸಿಎಲ್ ಟ್ವೀಟ್ ಮಾಡಿದೆ.
2023 ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕೆಲವು ವಾರಗಳ ಮೊದಲು, ಮಾರ್ಚ್ 25 ರಂದು ಪ್ರಧಾನಿ ನರೇಂದ್ರ ಮೋದಿ ಅವರು 13.71 ಕಿಮೀ ವೈಟ್ಫೀಲ್ಡ್ (ಕಾಡುಗೋಡಿ) – ಕೃಷ್ಣರಾಜಪುರ (ಕೆಆರ್ ಪುರ) ಮೆಟ್ರೋ ಮಾರ್ಗವನ್ನು ಉದ್ಘಾಟಿಸಿದ್ದರು. ಬೈಯಪ್ಪನಹಳ್ಳಿ-ಕೆಆರ್ ಪುರ ನಡುವಣ ಸಂಪರ್ಕ ಇಲ್ಲದ ಕಾರಣ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಫೀಡರ್ ಬಸ್ ಸೇವೆಗಳನ್ನು ಪ್ರಾರಂಭಿಸಿತ್ತು.
ಇದನ್ನೂ ಓದಿ: BMRCL: ನಮ್ಮ ಮೆಟ್ರೋದಲ್ಲಿ ಹೃದಯಘಾತದಿಂದ ವ್ಯಕ್ತಿ ಸಾವು; ಬಿಎಂಆರ್ಸಿಎಲ್ ವಿರುದ್ಧ ಎಫ್ಐಆರ್ ದಾಖಲು
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ ಅಂತ್ಯದ ವೇಳೆಗೆ ಬೈಯಪ್ಪನಹಳ್ಳಿ – ಕೆಆರ್ ಪುರ ಮಾರ್ಗದಲ್ಲಿ ಮೆಟ್ರೋ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಬಿಎಂಆರ್ಸಿಎಲ್ ಉದ್ದೇಶಿಸಿದೆ. ಸಂಚಾರ ಆರಂಭಗೊಂಡರೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಬಹುದು ಎಂದು ಬಿಎಂಆರ್ಸಿಎಲ್ ನಿರೀಕ್ಷಿಸುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ