Namma Metro: ಪೀಣ್ಯ – ನಾಗಸಂದ್ರ ನಡುವೆ ಮೂರು ದಿನ ಮೆಟ್ರೋ ರೈಲು ಸಂಚಾರ ಸ್ಥಗಿತ

| Updated By: Ganapathi Sharma

Updated on: Jan 25, 2024 | 10:55 AM

Namma Metro Train Services: ನಮ್ಮ ಮೆಟ್ರೋ ಹಸಿರು ಮಾರ್ಗದ ಪೀಣ್ಯ ಹಾಗೂ ನಾಗಸಂದ್ರದ ನಡುವೆ ಮೂರು ದಿನ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ. ಯಾವಾಗಿನಿಂದ ರೈಲು ಸೇವೆ ಸ್ಥಗಿತ, ಯಾಕಾಗಿ ಸ್ಥಗಿತಿ ಹಾಗೂ ಪುನರಾರಂಭ ಯಾವಾಗ ಎಂಬ ಮಾಹಿತಿ ಇಲ್ಲಿದೆ.

Namma Metro: ಪೀಣ್ಯ - ನಾಗಸಂದ್ರ ನಡುವೆ ಮೂರು ದಿನ ಮೆಟ್ರೋ ರೈಲು ಸಂಚಾರ ಸ್ಥಗಿತ
ಪೀಣ್ಯ - ನಾಗಸಂದ್ರ ನಡುವೆ ಮೂರು ದಿನ ಮೆಟ್ರೋ ರೈಲು ಸಂಚಾರ ಸ್ಥಗಿತ
Follow us on

ಬೆಂಗಳೂರು, ಜನವರಿ 25: ಪೀಣ್ಯ ಸುತ್ತ ಮುತ್ತಲಿನ ಹಾಗೂ ಹಸಿರು ಮಾರ್ಗದಲ್ಲಿ ಪ್ರಯಾಣಿಸುವ ಮೆಟ್ರೋ (Namma Metro) ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬ್ಯಾಡ್ ನ್ಯೂಸ್ ನೀಡಿದೆ. ಪೀಣ್ಯ ಹಾಗೂ ನಾಗಸಂದ್ರದ ನಡುವೆ ಮೂರು ದಿನ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ. ನಾಗಸಂದ್ರದಿಂದ ಮಾದವಾರ ವರೆಗಿನ ವಿಸ್ತರಿತ ಮಾರ್ಗದಲ್ಲಿ ಕಾಮಾಗಾರಿ ನಡೆಯಲಿರುವ ಕಾರಣ ಶುಕ್ರವಾರದಿಂದ ಮೂರು ದಿನ ಮೆಟ್ರೋ ಸೇವೆ ತಾತ್ಕಲಿಕ ಸ್ಥಗಿತಗೊಳ್ಳಲಿದೆ. ಜನವರಿ 26 ರಿಂದ ಜನವರಿ 28ರ ತನಕ ಮೆಟ್ರೋ ರೈಲು ಸಂಚಾರ ತಾತ್ಕಲಿಕ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ. ಜನವರಿ 29ರ ಬೆಳಗ್ಗೆ 5 ಗಂಟೆಯಿಂದ ಎಂದಿನಂತೆ ಸಂಚಾರ ಶುರುವಾಗಲಿದೆ ಎಂದು ಬಿಎಂಆರ್​ಸಿಎಲ್ ಮಾಹಿತಿ ನಿಡಿದೆ.

ಮೆಟ್ರೋದ ಎರಡನೇ ಹಂತದ ಕಾಮಗಾರಿ ಕೂಡ ಸದ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ನಗರದ ಎಲ್ಲ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಬಿಎಂಆರ್​ಸಿಎಲ್ ಚುರುಕಿನ ಕಾಮಗಾರಿ ನಡೆಸುತ್ತಿದೆ. ಇದರಡಿ ನಾಗಸಂದ್ರದಿಂದ ಮಾದವಾರ ವರೆಗಿನ ವಿಸ್ತರಿತ ಮಾರ್ಗ ಕಾಮಗಾರಿ ನಡೆಯುತ್ತಿದೆ. ಇದು ಪೂರ್ಣಗೊಂಡ ಬಳಿಕ ಮಾದವಾರ ವರೆಗೆ ಮೆಟ್ರೋ ಸೇವೆ ದೊರೆಯಲಿದೆ.

ಮೆಟ್ರೋ ಸಂಚಾರ ಸ್ಥಗಿತಗೊಳ್ಳುವ ಕಾರಣ ಪೀಣ್ಯ ಸುತ್ತ ಮುತ್ತ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇದೆ.

ಸದ್ಯ ನಮ್ಮ ಮೆಟ್ರೋ ರೈಲುಗಳಲ್ಲಿ ದಿನವೊಂದಕ್ಕೆ ಬರೊಬ್ಬರಿ 6.5 ಲಕ್ಷ ಜನ ಸಂಚರಿಸುತ್ತಿದ್ದಾರೆ. ಈ ಪೈಕಿ 80 ಸಾವಿರದಿಂದ 1 ಲಕ್ಷ ಜನ ಕ್ಯೂಆರ್ ಕೋಡ್ ಮೂಲಕ ಟಿಕೆಟ್ ಖರೀದಿಸಿ ಪ್ರಯಾಣಿಸುತ್ತಿದ್ದಾರೆ. ಇದು ಟಿಕೆಟ್ ಕೌಂಟರ್​​ನ ಒತ್ತಡ ಕಡಿಮೆ ಆಗಲು ಕಾರಣವಾಗಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಕ್ಯೂಆರ್ ಕೋಡ್, ವಾಟ್ಸಪ್​ ಪೇಮೆಂಟ್​​​ ಸೌಲಭ್ಯಕ್ಕೆ ಪ್ರಯಾಣಿಕರು ಫಿದಾ: ಹೊಸ ದಾಖಲೆ

ಚೀನಾದಿಂದ ಬೆಂಗಳೂರಿನತ್ತ ಹೊರಟಿತು ಚಾಲಕ ರಹಿತ ಮೆಟ್ರೋ

ಈ ಮಧ್ಯೆ, ಚಾಲಕ ರಹಿತ ಮೆಟ್ರೋ ರೈಲು ಸೇವೆ ನೀಡುವ ವಿಚಾರದಲ್ಲಿಯೂ ಬಿಎಂಆರ್​ಸಿಎಲ್ ಮುಂದಡಿಯಿಟ್ಟಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ಸ್ ಸಿಟಿಗೆ ಮೊದಲ ಚಾಲಕ ರಹಿತ ರೈಲು ಚೀನಾದಿಂದ ಹೊರಟಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಮೆಟ್ರೋಗೆ ಮೊದಲ ಆರು ಬೋಗಿಗಳ ರೈಲನ್ನು ಜನವರಿ 20 ರಂದು ಹಡಗಿಗೆ ಲೋಡ್ ಮಾಡಲಾಗಿದ್ದು, ಅದು ಸದ್ಯ ಚೆನ್ನೈನತ್ತ ಸಾಗುತ್ತಿದೆ. ಇದು 2024 ರ ಮಧ್ಯಭಾಗದಲ್ಲಿ ಚೆನ್ನೈ ಬಂದರಿಗೆ ಆಗಮಿಸುವ ನಿರೀಕ್ಷೆಯಿದೆ. ನಂತರ ಅಲ್ಲಿಂದ ರಸ್ತೆ ಮೂಲಕ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಸಾಗಿಸಲಾಗುತ್ತದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 am, Thu, 25 January 24