
ಬೆಂಗಳೂರು, ಡಿ.2: ಬೆಂಗಳೂರು ಮೆಟ್ರೋದಲ್ಲಿ (Namma Metro) ಹೊಸ ಯೋಜನೆಯೊಂದು ಬರಲಿದೆ. ನಮ್ಮ ಮೆಟ್ರೋ ಮೊದಲ ಬಾರಿಗೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಬಾಗಿಲುಗಳನ್ನು (ಪಿಎಸ್‌ಡಿ) ಪರಿಚಯಿಸಲು ಸಿದ್ಧತೆ ನಡೆಸುತ್ತಿದ್ದು, ಈ ಯೋಜನೆ ಮುಂಬರುವ ಪಿಂಕ್ ಲೈನ್‌ನಲ್ಲಿರುವ ನಿಲ್ದಾಣಗಳಿಂದ ಆರಂಭವಾಗಲಿದೆ. ಈಗಾಗಲೇ ಪೂರ್ಣ ಪ್ರಮಾಣದ ಮೂಲ ಮಾದರಿಯನ್ನು ನಿರ್ಮಾಣ ಮಾಡಲಾಗಿದೆ ಎಂದು ವರದಿಯೊಂದು ಹೇಳಿದೆ. 21.26 ಕಿ.ಮೀ. ಕಲೇನಾ ಅಗ್ರಹಾರ-ನಾಗವಾರ ಕಾರಿಡಾರ್‌ನಲ್ಲಿ ಸಿವಿಲ್ ಕಾಮಗಾರಿಗಳು ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಬಿಎಂಆರ್‌ಸಿಎಲ್ ಪಿಎಸ್‌ಡಿಗಳು ಸೇರಿದಂತೆ ಪ್ರಮುಖ ವ್ಯವಸ್ಥೆಗಳ ಹಳಿಗಳ ಜೋಡಣೆ ಕಾರ್ಯವನ್ನು ಆರಂಭಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಬಾಗಿಲುಗಳು ಎಷ್ಟು ಉಪಯುಕ್ತವಾಗಿದೆ ಎಂದರೆ, ಮೆಟ್ರೋ ಅದರ ಗಮ್ಯಸ್ಥಾನದಲ್ಲಿ ಸರಿಯಾಗಿ ಬಂದು ನಿಂತಾಗ ಮಾತ್ರ ಈ ಬಾಗಿಲು ತೆರೆಯುತ್ತದೆ. ಜತೆಗೆ ಇದು ಜನ ಮೆಟ್ರೋ ಹತ್ತುವಾಗ ಆಸ್ಮಿಕವಾಗಿ ಬಾಗಿಲು ಬೀಳುವುದನ್ನು ಕೂಡ ತಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಪವರ್ ಹಳಿಗಳ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚಾಗಿದೆ. ಆದರೆ ಪಿಎಸ್‌ಡಿಗಳಿಂದ ಇಂಥಹ ಪ್ರಕರಣಗಳು ಕಡಿಮೆ ಆಗಲಿದೆ. ಇದರ ಜತೆಗೆ PSDಗಳು ಪ್ಲಾಟ್‌ಫಾರ್ಮ್‌ಗಳು ಸುರಂಗ ಮಾರ್ಗದಲ್ಲಿ ಉಂಟಾಗುವ ವಾಯು ವಿನಿಮಯವನ್ನು ಕಡಿಮೆ ಮಾಡುತ್ತದೆ. ದೆಹಲಿ, ಮುಂಬೈ ಮತ್ತು ಚೆನ್ನೈನಲ್ಲಿರುವ ಮೆಟ್ರೋಗಳಲ್ಲಿ ಈಗಾಗಲೇ, ಈ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆದರೆ ಬೆಂಗಳೂರಿನಲ್ಲಿರುವ 83 ನಿಲ್ದಾಣಗಳಲ್ಲಿ ಯಾವುದಕ್ಕೂ ಇದನ್ನು ಅಳವಡಿಸಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: “ನಾನು ಶಿಮ್ಲಾದಲ್ಲಿ ಇಲ್ಲ, ಕೋರಮಂಗಲದಲ್ಲಿ ಇದ್ದೇನೆ”: ಮತ್ತೆ ವೈರಲ್ ಆಯಿತು ಬೆಂಗಳೂರಿನ ಹವಾಮಾನ
ಇನ್ನು ಈಗಾಗಲೇ ಮಾದರಿ ವಿದ್ಯುತ್ ಸ್ಥಾವರವನ್ನು ಹೊಂದಿರುವ ಎಂಜಿ ರಸ್ತೆಯ ಮೆಟ್ರೋ ನಿಲ್ದಾಣದಿಂದ ಈ ಯೋಜನೆಯನ್ನು ಪ್ರಾರಂಭ ಮಾಡುವ ಸಾಧ್ಯತೆಗಳು ಇದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಯೋಜನೆಗೆ ಅನುಮೋದನೆ ಸಿಕ್ಕ ನಂತರ ಆರು ತಿಂಗಳ ಅವಧಿಯಲ್ಲಿ ಪಿಂಕ್ ಲೈನ್‌ನಲ್ಲಿರುವ ಎಲ್ಲಾ 12 ಸುರಂಗ ಮಾರ್ಗಗಳಿಗೂ ಪಿಎಸ್‌ಡಿಗಳನ್ನು ಅಳವಡಿಸಲಾಗುವುದು ಎಂದು ಹಿರಿಯ ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿಯೊಂದು ದ್ವಾರವು ಸುಮಾರು 2.15 ಮೀಟರ್ ಎತ್ತರವಿದ್ದು, ಪ್ಲಾಟ್‌ಫಾರ್ಮ್ ಗೇಟ್‌ಗಳು 1.4 ಮೀಟರ್ ಎತ್ತರವಿದೆ. ಹಾಗೂ 128 ಮೀಟರ್ ಪ್ಲಾಟ್‌ಫಾರ್ಮ್ ಅನ್ನು ವ್ಯಾಪಿಸಿರುತ್ತವೆ. ಪ್ರತಿ ನಿಲ್ದಾಣದ ವೆಚ್ಚ 9 ಕೋಟಿ ರೂ. ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಇದು ಜೂನ್ 2024ರಲ್ಲಿ ಆಲ್ಸ್ಟೋಮ್ ಟ್ರಾನ್ಸ್‌ಪೋರ್ಟ್ ಜತೆಗೆ ಮಾಡಿಕೊಂಡ ದೊಡ್ಡ ಒಪ್ಪಂದದ ಭಾಗವಾಗಿದೆ. ಇನ್ನು ಈ ಯೋಜನೆಯನ್ನು ಪಿಂಕ್ ಲೈನ್ ಮಾತ್ರವಲ್ಲದೆ, ಪರ್ಪಲ್ ಲೈನ್‌ನಲ್ಲಿರುವ ಮೆಜೆಸ್ಟಿಕ್ ಮತ್ತು ಸೆಂಟ್ರಲ್ ಕಾಲೇಜು ನಿಲ್ದಾಣಗಳಲ್ಲಿ ಪಿಎಸ್‌ಡಿ ಅಳವಡಿಸಲಾಗುವುದು ಎಂದು ಹೇಳಲಾಗಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ