ವಿದ್ಯಾರ್ಥಿಗಳಿಗೆ 15 ದಿನಗಳ ಒಳಗೆ ಟಿಸಿ ನೀಡುವಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ನಿರ್ದೇಶನದಂತೆ, ರಾಜ್ಯದ ಎಲ್ಲಾ ಶಾಲೆಗಳು ಅರ್ಜಿ ಸ್ವೀಕರಿಸಿದ 15 ದಿನಗಳಲ್ಲಿ ವರ್ಗಾವಣೆ ಪ್ರಮಾಣಪತ್ರ (TC) ನೀಡಬೇಕು. ವಿಫಲವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಶಿಕ್ಷಣ ಇಲಾಖೆ ಸೂಚಿಸಿದೆ. ಶುಲ್ಕ ಬಾಕಿ ಇದ್ದರೂ TC ವಿಳಂಬ ಮಾಡುವಂತಿಲ್ಲವೆಂದಿರುವ ಇಲಾಖೆ, ಪೋಷಕರು TC ವಿಳಂಬವಾದರೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಬಹುದು ಎಂದು ಹೇಳಿದೆ.

ಬೆಂಗಳೂರು, ಡಿಸೆಂಬರ್ 02: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (KSCPR) ನಿರ್ದೇಶನದ ಮೇರೆಗೆ, ಶಿಕ್ಷಣ ಇಲಾಖೆಯು ಎಲ್ಲಾ ಶಾಲೆಗಳಿಗೆ ಅರ್ಜಿಗಳನ್ನು ಸ್ವೀಕರಿಸಿದ 15 ದಿನಗಳಲ್ಲಿ ವರ್ಗಾವಣೆ ಪ್ರಮಾಣ ಪತ್ರಗಳನ್ನು(TC) ನೀಡುವಂತೆ ಸೂಚಿಸಿದೆ. ಒಂದು ವೇಳೆ ವಿಫಲವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಸಿದೆ.
ಟಿಸಿ ಸಿಗದಿದ್ದರೆ ಬಿಇಓಗೆ ವಿನಂತಿ ಸಲ್ಲಿಸಿ
ಶಿಕ್ಷಣ ಇಲಾಖೆ ಕಳಿಸಿರುವ ನೋಟಿಸ್ನಲ್ಲಿ ‘ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳುವ ಸಲುವಾಗಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ರ ಸೆಕ್ಷನ್ 5(1) ಅನ್ನು ಉಲ್ಲಂಘಿಸದೆ, 15 ದಿನಗಳಲ್ಲಿ ವರ್ಗಾವಣೆ ಪ್ರಮಾಣಪತ್ರವನ್ನು ನೀಡುವುದು ಶಾಲಾ ಪ್ರಾಂಶುಪಾಲರ ಪ್ರಾಥಮಿಕ ಕರ್ತವ್ಯವಾಗಿದೆ. ಶಾಲಾ ಪ್ರಾಂಶುಪಾಲರು ಸಮಯಕ್ಕೆ ಸರಿಯಾಗಿ ವರ್ಗಾವಣೆ ಪತ್ರವನ್ನು ನೀಡದಿದ್ದರೆ, ಪೋಷಕರು ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗೆ ವಿನಂತಿಯನ್ನು ಸಲ್ಲಿಸಬೇಕು. ಮನವಿಯನ್ನು ಸ್ವೀಕರಿಸುವ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸದರಿ ಶಾಲಾ ಪ್ರಾಂಶುಪಾಲರಿಗೆ ಒಂದು ವಾರದ ಕಾಲಾವಕಾಶ ನೀಡಿ, ಮನವಿಯನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು.’ ಎಂದು ತಿಳಿಸಲಾಗಿದೆ.
ಸರ್ಕಾರಿ ಶಾಲೆಗೆ ವರ್ಗಾವಣೆಯಾದಾಗ ಮಾತ್ರ ಆದೇಶ ಅನ್ವಯ
ಈ ಕುರಿತು ಮಾತನಾಡಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಶಾಲೆಗಳು ಟಿಸಿ ವಿಳಂಬ ಮಾಡುತ್ತಿರುವ ಬಗ್ಗೆ ಪೋಷಕರಿಂದ ಅನೇಕ ದೂರುಗಳು ಬಂದಿರುವುದರಿಂದ ಇಲಾಖೆ ಈ ಸುತ್ತೋಲೆ ಹೊರಡಿಸಿದೆ. ಬಾಕಿ ಇರುವ ಶುಲ್ಕದ ಸಮಸ್ಯೆ ಇದ್ದರೆ, ಬಿಇಒ ಶಾಲೆಗಳಿಗೆ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತಾರೆ. ಇಲ್ಲಿಯವರೆಗೆ, ಶಾಲೆಗಳಿಂದ ನಮಗೆ ಅಂತಹ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದ್ದಾರೆ.
ಆರ್‌ಟಿಇ ವಿದ್ಯಾರ್ಥಿಗಳು ಮತ್ತು ಪೋಷಕರ ಸಂಘದ ಬಿ.ಎನ್. ಯೋಗಾನಂದ ಮಾತನಾಡಿ, 2021–22ರಲ್ಲಿ ಶಿಕ್ಷಣ ಸಂಸ್ಥೆಗಳು ವಿಧಿಸುವ ಶುಲ್ಕಗಳನ್ನು ಭರಿಸಲಾಗದ ಅನೇಕ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸ್ಥಳಾಂತರಗೊಂಡಿದ್ದಾರೆ. ಆ ಸಮಯದಲ್ಲಿ, ಕೆಲವು ಖಾಸಗಿ ಶಾಲೆಗಳು ತಮ್ಮ ಟಿಸಿಗಳನ್ನು ನೀಡುವುದನ್ನು ವಿಳಂಬ ಮಾಡುವ ಮೂಲಕ ಪೋಷಕರು ಮತ್ತು ಮಕ್ಕಳಿಗೆ ತೊಂದರೆ ನೀಡಿದ್ದಾರೆ. ಇದರಿಂದಾಗಿ ಕರ್ನಾಟಕ ಹೈಕೋರ್ಟ್ ಖಾಸಗಿ ಶಾಲೆಗಳ ಶುಲ್ಕವನ್ನು ನಿಯಂತ್ರಿಸಲು ಮತ್ತು ವಿಳಂಬವಿಲ್ಲದೆ ಟಿಸಿ ಸಿಗುತಂತೆ ಮಾಡಲು ಸಮಿತಿಗಳನ್ನು ರಚಿಸುವಂತೆ ಆದೇಶಿಸಿದೆ ಎಂದಿದ್ದಾರೆ.
ಇದನ್ನೂ ಓದಿ ಶಾಲೆಗಳ ಸುತ್ತಮುತ್ತ ಬೀದಿ ನಾಯಿ ಉಪಟಳ ತಡೆಯಲು ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ
ಒಂದು ಮಗು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಸ್ಥಳಾಂತರಗೊಂಡಾಗ ಮಾತ್ರ ಈ ಆದೇಶ ಅನ್ವಯಿಸುತ್ತದೆ. ಮಕ್ಕಳು ಎರಡು ಖಾಸಗಿ ಶಾಲೆಗಳ ನಡುವೆ ಸ್ಥಳಾಂತರಗೊಂಡಾಗ ಇದು ಅನ್ವಯಿಸುವುದಿಲ್ಲ. ಪಾವತಿ ಬಾಕಿ ಇದ್ದರೆ ಅದನ್ನು ಆಯಾ ಜಿಲ್ಲಾ ಪಂಚಾಯತ್ ಸಿಇಒ ನೇತೃತ್ವದ ಸಮಿತಿಗೆ ಕೊಂಡೊಯ್ಯಬಹುದು. ಟಿಸಿ ನೀಡದೆ ಅವರು ಮಕ್ಕಳಿಗೆ ಕಿರುಕುಳ ನೀಡುವಂತಿಲ್ಲ ಎಂದು ಯೋಗಾನಂದ ಹೆಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




