ಹುಳ ಇದ್ದ ಆಹಾರ ಕೊಟ್ಟು ಪ್ರಕರಣ ಮುಚ್ಚಿಹಾಕಲೆತ್ನಿಸಿದ್ದ ರಾಮೇಶ್ವರಂ ಕೆಫೆ ವಿರುದ್ಧ ಎಫ್‌ಐಆರ್
ಬೆಂಗಳೂರಿನ ಪ್ರಸಿದ್ಧ ರಾಮೇಶ್ವರಂ ಕೆಫೆ ವಿರುದ್ಧ ಕಳಪೆ ಆಹಾರ ನೀಡಿದ ಆರೋಪದಲ್ಲಿ ಎಫ್‌ಐಆರ್ ದಾಖಲಾಗಿದೆ. ಗ್ರಾಹಕರೊಬ್ಬರಿಗೆ ಪೊಂಗಲ್‌ನಲ್ಲಿ ಹುಳು ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಕೆಫೆ ಮಾಲೀಕರಾದ ರಾಘವೇಂದ್ರ ರಾವ್ ಮತ್ತು ದಿವ್ಯಾ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಮುಚ್ಚಿಹಾಕಲು ಪ್ರಯತ್ನ, ಸುಳ್ಳು ದೂರು ದಾಖಲಿಸಿ ಬೆದರಿಕೆ ಹಾಕಿದ ಆರೋಪಗಳು ಕೆಫೆ ವಿರುದ್ಧ ಕೇಳಿಬಂದಿವೆ.

ಬೆಂಗಳೂರು, ಡಿಸೆಂಬರ್ 2: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯ (Rameshwaram Cafe) ಮಾಲೀಕರು ಕಳಪೆ ಆಹಾರವನ್ನು ನೀಡಿದ್ದಲ್ಲದೆ, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ ಆರೋಪದಲ್ಲಿ ಹೋಟೆಲ್ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಗ್ರಾಹಕ ನಿಖಿಲ್ ಎನ್ ಎಂಬವರು ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿದೆ. ಕೆಫೆಯ ಮಾಲೀಕ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಮತ್ತು ಹಿರಿಯ ವ್ಯವಸ್ಥಾಪಕ ಸುಮಂತ್ ಲಕ್ಷ್ಮಿನಾರಾಯಣ್ ಅವರ ವಿರುದ್ಧ ದೂರು ದಾಖಲಾಗಿದ್ದು, ನವೆಂಬರ್ 29 ರಂದು ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸಲಿಗೆ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದೇನು? ಏನಿದು ಪ್ರಕರಣ?
ದೂರುದಾರ ನಿಖಿಲ್ ಅವರು ಜುಲೈ 24 ರಂದು ಟರ್ಮಿನಲ್ 1 ರಲ್ಲಿ ಗುವಾಹಟಿಗೆ ತೆರಳಲು ತಯಾರಿ ನಡೆಸುತ್ತಿದ್ದಾಗ ಕೆಫೆಯ ವಿಮಾನ ನಿಲ್ದಾಣದ ಕೌಂಟರ್‌ನಲ್ಲಿ ‘ಪೊಂಗಲ್’ ಮತ್ತು ಫಿಲ್ಟರ್ ಕಾಫಿ ಆರ್ಡರ್ ಮಾಡಿದ್ದರು. ಪೊಂಗಲ್‌ನಲ್ಲಿ ಹುಳ ಪತ್ತೆಯಾಗಿದೆ ಎಂದು ಹೇಳಿಕೊಂಡಿದ್ದರು. ಹೋಟೆಲ್ ಸಿಬ್ಬಂದಿಗೆ ತಕ್ಷಣ ಮಾಹಿತಿ ನೀಡಿದ್ದೆ, ಅವರು ಬದಲಿ ಆಹಾರ ನೀಡುವುದಾಗಿ ತಿಳಿಸಿದರು. ಆದರೆ ಬೋರ್ಡಿಂಗ್‌ಗೆ ಆತುರ ಇದ್ದುದರಿಂದ ನಿರಾಕರಿಸಿದ್ದೆ ಎಂದು ನಿಖಿಲ್ ಹೇಳಿದ್ದಾರೆ. ಆದರೆ, ಇತರ ಇತರ ಗ್ರಾಹಕರು ಚಿತ್ರ, ವಿಡಿಯೋ ತೆಗೆದುಕೊಂಡಿದ್ದರು ಎಂದು ವರದಿಯಾಗಿದೆ. ಮತ್ತು ನಿಖಿಲ್ ಯಾವುದೇ ಸಮಸ್ಯೆ ಉಂಟುಮಾಡದೆ ಸುಮ್ಮನೆ ಹೊರಟುಹೋಗಿದ್ದರು.
ಸಮಸ್ಯೆ ಶುರುವಾಗಿದ್ದೆಲ್ಲಿಂದ?
ಆದರೆ, ಆಹಾರದಲ್ಲಿ ಹುಳ ಸಿಕ್ಕಿದ ವಿಡಿಯೋ, ಚಿತ್ರಗಳು ಮರುದಿನ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಹೋಟೆಲ್ನವರು ನಿಖಿಲ್ ವಿರುದ್ಧ, ಬ್ರಾಂಡ್ ಹೆಸರಿಗೆ ಕಳಂಕ ತರುವುದಾಗಿ ಬೆದರಿಕೆಯೊಡ್ಡಿದ್ದಾಗಿಯೂ 25 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ ಎಂದೂ ಪೊಲೀಸ್ ದೂರು ದಾಖಲಿಸಿದ್ದರು ಎಂದು ‘ಪಿಟಿಐ’ ಸುದ್ದಿಸಂಸ್ಥೆ ವರದಿ ಮಾಡಿದೆ.
ಕೆಫೆಯ ಆರೋಪಗಳ ಆಧಾರದ ಮೇಲೆ ಪೊಲೀಸರು ನಿಖಿಲ್ ಮತ್ತು ಅವರ ಸ್ನೇಹಿತರನ್ನು ವಿಚಾರಣೆಗೆ ಕರೆಸಿದ್ದರು. ಆದರೆ ನಿಖಿಲ್ ತಾನು ಎಂದಿಗೂ ಪರಿಹಾರ ಅಥವಾ ಮರುಪಾವತಿ ಕೇಳಿಲ್ಲ ಎಂದಿದ್ದಾರೆ. ಕೆಫೆ ಮಾಡಿರುವ ಆರೋಪಗಳಿಗೂ ತನಗೂ ಸಂಬಂಧ ಇಲ್ಲ. ಆ ಹೊತ್ತಿನಲ್ಲಿ ವಿಮಾನದಲ್ಲಿದ್ದೆ ಎಂದು ದಾಖಲೆಗಳನ್ನು ತೋರಿಸಿದ್ದರು. ನಂತರ ನಿಖೀಲ್ ಆಗಲೀ ಅವರ ಸ್ನೇಹಿತರಾಗಲೀ ಬ್ಲ್ಯಾಕ್‌ಮೇಲ್ ಅಥವಾ ಸುಲಿಗೆ ಮಾಡಲು ಪ್ರಯತ್ನಿಸಿದ ಬಗ್ಗೆ ಯಾವುದೇ ಪುರಾವೆಗಳು ತನಿಖಾಧಿಕಾರಿಗಳಿಗೆ ದೊರೆತಿಲ್ಲ.
ಇದನ್ನೂ ಓದಿ: ಬೆಂಗ್ಳೂರಿನ ಇಡ್ಲಿ ಸಾಂಬಾರ್, ಮಸಾಲಾ ದೋಸೆ, ಫಿಲ್ಟರ್ ಕಾಫಿ ರುಚಿ ಸವಿದು ಫಿದಾ ಆದ ವಿದೇಶಿಗ
ಆದರೆ ಇಷ್ಟೆಲ್ಲ ಆದ ಮೇಲೆ ನಿಖಿಲ್ ಸುಮ್ಮನಿರಲಿಲ್ಲ. ಪ್ರತಿದೂರು ದಾಖಲಿಸಿ, ಈ ಘಟನೆಯನ್ನು ‘ಗಂಭೀರ ಆಹಾರ ಸುರಕ್ಷತೆಯ ವೈಫಲ್ಯ’ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೆ, ಕೆಫೆಯು ತನ್ನ ವರ್ಚಸ್ಸಿಗೆ ಕಳಂಕ ತರುವ ಮತ್ತು ತನ್ನನ್ನು ಬೆದರಿಸುವ ಸಲುವಾಗಿ ಸುಳ್ಳು ಪ್ರಕರಣವನ್ನು ದಾಖಲಿಸಿದೆ ಎಂದು ಆರೋಪಿಸಿದ್ದಾರೆ. ಈ ದೂರಿನ ಅನ್ವಯ ಕೆಫೆಯ ಮಾಲೀಕರು ಮತ್ತು ಅವರ ಪ್ರತಿನಿಧಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತಾದ (ಬಿಎನ್‌ಎಸ್) ಹಲವಾರು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕ್ರಿಮಿನಲ್ ಪಿತೂರಿ, ಸುಳ್ಳು ಮಾಹಿತಿ ಒದಗಿಸುವುದು, ಸಾಕ್ಷ್ಯಗಳನ್ನು ರೂಪಿಸುವುದು ಮತ್ತು ಕಲಬೆರಕೆ ಅಥವಾ ಹಾನಿಕಾರಕ ಆಹಾರವನ್ನು ಮಾರಾಟ ಮಾಡುವುದು ಸೇರಿದಂತೆ ಹವಲು ಆರೋಪಗಳನ್ನು ಕೆಫೆ ವಿರುದ್ಧ ಹೊರಿಸಲಾಗಿದೆ.




