ಸ್ಮಾರ್ಟ್ ಮೀಟರ್ ಟೆಂಡರ್ ಹಗರಣ: ಕೆ.ಜೆ. ಜಾರ್ಜ್ಗೆ ರಿಲೀಫ್; ಖಾಸಗಿ ದೂರು ರದ್ದುಪಡಿಸಿದ ಹೈಕೋರ್ಟ್
ಸ್ಮಾರ್ಟ್ ಮೀಟರ್ ಟೆಂಡರ್ ಹಗರಣ ಆರೋಪದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಕರ್ನಾಟಕ ಹೈಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ಬಿಜೆಪಿ ನಾಯಕರು ದಾಖಲಿಸಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ. ಅಧಿಕಾರಿಗಳಿಗೂ ಬಿಗ್ ರಿಲೀಫ್ ಸಿಕ್ಕಿದ್ದು, ಬಿಜೆಪಿ ಮಾಡಿದ್ದ ಭ್ರಷ್ಟಾಚಾರದ ಆರೋಪಕ್ಕೆ ಹಿನ್ನಡೆಯಾಗಿದೆ.

ಬೆಂಗಳೂರು, ಡಿಸೆಂಬರ್ 02: ಬಿಜೆಪಿ ಮಾಡಿದ್ದ ಸ್ಮಾರ್ಟ್ ಮೀಟರ್ ಟೆಂಡರ್ ಹಗರಣ ಆರೋಪ ವಿಚಾರವಾಗಿ ಸಚಿವ ಕೆ.ಜೆ.ಜಾರ್ಜ್ಗೆ ರಿಲೀಫ್ ಸಿಕ್ಕಿದೆ. ಸಚಿವ ಜಾರ್ಜ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ. ಬಿಜೆಪಿ ನಾಯಕರು ದಾಖಲಿಸಿದ್ದ ಪ್ರಕರಣ ರದ್ದುಪಡಿಸಿ ನ್ಯಾ.ಎಂ.ಐ.ಅರುಣ್ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ. ಆ ಮೂಲಕ ಅಧಿಕಾರಿಗಳಾದ ಗೌರವ್ ಗುಪ್ತಾ, ಮಹಾಂತೇಶ ಬೀಳಗಿ, ಹೆಚ್.ಜೆ.ರಮೇಶ್ ವಿರುದ್ಧದ ಕೇಸ್ ಕೂಡ ರದ್ದಾಗಿದೆ.
ಬಿಜೆಪಿ ನಾಯಕರಿಗೆ ಹಿನ್ನಡೆ
#KarnatakaHighCourt quashed a private complaint filed by #BJP leaders against State Energy Minister KJ George and BESCOM officials, alleging irregularities in the issuance of tender in regard to procurement and installation of smart electric meters in the state. pic.twitter.com/QYNPxlCysG
— Live Law (@LiveLawIndia) December 2, 2025
ಸ್ಮಾರ್ಟ್ ವಿದ್ಯುತ್ ಮೀಟರ್ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಇಂಧನ ಇಲಾಖೆ ವಿರುದ್ಧ ಬಿಜೆಪಿ ಸಮರ ಸಾರಿತ್ತು. ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಇತರೆ ಕಂಪೆನಿಗಳನ್ನು ಕೈಬಿಟ್ಟು ದಾವಣಗೆರೆಯ ರಾಜಶ್ರೀ ಎಲೆಕ್ಟ್ರಿಕಲ್ಸ್ಗೆ ಗುತ್ತಿಗೆ ನೀಡಲಾಗಿದೆ. ಈ ಕಂಪೆನಿಗಾಗಿ ಇತರೆ ಕಂಪೆನಿಗಳು ಟೆಂಡರ್ನಲ್ಲಿ ಭಾಗವಹಿಸದಂತೆ ನೋಡಿಕೊಳ್ಳಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಬೇರೆ ರಾಜ್ಯಗಳಲ್ಲಿ 900 ರೂಪಾಯಿಗಳಿಗೆ ಸಿಗುವ ಸ್ಮಾರ್ಟ್ ಮೀಟರ್ ಅನ್ನು 5 ಸಾವಿರದಿಂದ 10 ಸಾವಿರ ರೂಪಾಯಿಗಳಿಗೆ ಗ್ರಾಹಕರಿಗೆ ನೀಡಲಾಗುತ್ತಿದೆ. ಹೀಗಾಗಿ ಇದೊಂದು ದೊಡ್ಡ ಹಗರಣ ಎಂದು ಆರೋಪಿಸಲಾಗಿತ್ತು.
ಇದನ್ನೂ ಓದಿ: ಸ್ಮಾರ್ಟ್ ಮೀಟರ್ ಹಗರಣ ಆರೋಪ; ಊಹಾಪೋಹಗಳಿಗೆ ಕೆಪಿಟಿಸಿಎಲ್ ಎಂಡಿ ಸ್ಪಷ್ಟನೆ
ಸ್ಮಾರ್ಟ್ ಮೀಟರ್ ಟೆಂಡರ್ ಸುಮಾರ್ 10 ಸಾವಿರ ಕೋಟಿ ರೂಪಾಯಿ ಮೊತ್ತದ್ದಾಗಿರುವ ಕಾರಣ ಜಾಗತಿಕ ಟೆಂಡರ್ ಕರೆಯಬೇಕಿತ್ತು. ಆದರೆ ಕೇವಲ 354 ಕೋಟಿ ರೂ. ವ್ಯವಹಾರ ನಡೆಸುವ ರಾಜಶ್ರೀ ಎಲೆಕ್ಟ್ರಿಕಲ್ಸ್ಗೆ ಟೆಂಡರ್ ನೀಡಲಾಗಿದೆ. 10 ವರ್ಷಕ್ಕೆ 5296 ಕೋಟಿ ರೂಪಾಯಿಗೆ ನೀಡಲಾಗಿರುವ ಟೆಂಡರ್ ಅನ್ನು ಬೇಕೆಂದೇ 997 ಕೋಟಿ ರೂ. ಟೆಂಡರ್ ಎಂಬಂತೆ ಬಿಂಬಿಸಲಾಗಿದೆ. ಬೆಸ್ಕಾಂ ವ್ಯಾಪ್ತಿಗೆ ಮಾತ್ರ ಈ ಟೆಂಡರ್ ಅನ್ವಯವಾದರೂ ಇತರೆ ಎಸ್ಕಾಂಗಳಿಗೂ ಇದೇ ಸ್ಮಾರ್ಟ್ ಮೀಟರ್ ಖರೀದಿಸಿರುವಂತೆ ಸೂಚಿಸಲಾಗಿದೆ. ಇದು ಸಂಪೂರ್ಣ ಕಾನೂನು ಬಾಹಿರ. ಕೇಂದ್ರದ ಆರ್‌ಡಿಎಸ್‌ಎಸ್ ಯೋಜನೆಯಡಿ 900 ರೂ.ಗೆ ಸಿಗುವ ಮೀಟರ್ ಅನ್ನು 5 ಸಾವಿರದಿಂದ 8,800 ರೂಪಾಯಿಗಳಿಗೆ ಗ್ರಾಹಕರು ಖರೀದಿಸಬೇಕಾಗಿದೆ. ಇದಕ್ಕೆ ಇದಕ್ಕೆಲ್ಲಾ ಬೆಸ್ಕಾಂ ಅಧ್ಯಕ್ಷ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಹಾಗೂ ಇತರೆ ಅಧಿಕಾರಿಗಳೇ ಹೊಣೆ ಎಂದು ಬಿಜೆಪಿ ಆರೋಪ ಮಾಡಿತ್ತು. ಆದರೆ, ಬಿಜೆಪಿ ನಾಯಕರು ದಾಖಲಿಸಿದ್ದ ಪ್ರಕರಣ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:45 am, Tue, 2 December 25



