ನೆಲಮಂಗಲ ಫ್ಲೈಓವರ್‌ನಲ್ಲಿ ಮತ್ತೆ ಪಂಕ್ಚರ್ ಮಾಫಿಯಾ ಕಾಟ; ಕಠಿಣ ಕ್ರಮಕ್ಕೆ ಸ್ಥಳೀಯರ ಒತ್ತಾಯ

ಬೆಂಗಳೂರಿನ ನೆಲಮಂಗಲ ಫ್ಲೈಓವರ್‌ನಲ್ಲಿ ಮತ್ತೆ ಪಂಕ್ಚರ್ ಮಾಫಿಯಾ ಹಾವಳಿ ಹೆಚ್ಚಾಗಿದೆ. ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಹರಡಿ ವಾಹನಗಳ ಟೈರ್‌ಗಳಿಗೆ ಹಾನಿ ಮಾಡಲಾಗುತ್ತಿದೆ. ಇದು ವಾಹನ ಸವಾರರಿಗೆ ಆರ್ಥಿಕ ನಷ್ಟದ ಜೊತೆಗೆ ಜೀವಾಪಾಯವನ್ನೂ ತರುತ್ತಿದೆ ಎಂದು ಜನರು ಆತಂಕ ವ್ಯಕ್ತಪಡಿಸಿದ್ದಾರೆ.ರಸ್ತೆ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ವ್ಯಕ್ತವಾಗಿದ್ದು, ಈ ಕುರಿತು ಕರ್ನಾಟಕ ಪೋರ್ಟ್​ಫೋಲಿಯೋ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ನೆಲಮಂಗಲ ಫ್ಲೈಓವರ್‌ನಲ್ಲಿ ಮತ್ತೆ ಪಂಕ್ಚರ್ ಮಾಫಿಯಾ ಕಾಟ; ಕಠಿಣ ಕ್ರಮಕ್ಕೆ ಸ್ಥಳೀಯರ ಒತ್ತಾಯ
ನೆಲಮಂಗಲ ಫ್ಲೈಓವರ್‌ನಲ್ಲಿ ಮತ್ತೆ ಪಂಕ್ಚರ್ ಮಾಫಿಯಾ ಕಾಟ

Updated on: Nov 12, 2025 | 2:16 PM

ಬೆಂಗಳೂರು, ನವೆಂಬರ್ 12: ನೆಲಮಂಗಲ ಫ್ಲೈಓವರ್ ರಸ್ತೆ ಮತ್ತೊಮ್ಮೆ ಕುಖ್ಯಾತ “ಪಂಕ್ಚರ್ ಮಾಫಿಯಾ”  (Puncture Mafia) ಕಾಟಕ್ಕೆ ತತ್ತರಿಸಿದೆ. ಉದ್ದೇಶಪೂರ್ವಕವಾಗಿ ಹರಿತವಾದ ಮೊಳೆಗಳನ್ನು ದಾರಿಯುದ್ದಕ್ಕೂ ಹರಡಿದ್ದ ದುಷ್ಕರ್ಮಿಗಳ ಬಲೆಗೆ ದ್ವಿಚಕ್ರ ವಾಹನದಲ್ಲಿದ್ದ ದಂಪತಿ ಸಿಲುಕಿದ್ದು, ಅದೃಷ್ಟವಶಾತ್ ಪ್ರಯಾಣಿಕರಿಗೆ ಗಂಭೀರ ಗಾಯಗಳೇನೂ ಆಗಿಲ್ಲ.

ಪಂಕ್ಚರ್ ಮಾಫಿಯಾಕ್ಕೆ ಸಿಲುಕಿದ್ದ ಕುಟುಂಬ ಪಾರು

ಪಂಕ್ಚರ್ ಮಾಫಿಯಾದಲ್ಲಿ ಉದ್ದೇಶಪೂರ್ವಕವಾಗಿ ಟೈರ್‌ಗಳಿಗೆ ಹಾನಿ ಉಂಟುಮಾಡಿ, ನಂತರ ಹತ್ತಿರದ “ಪಂಕ್ಚರ್ ರಿಪೇರಿ” ಅಂಗಡಿಗಳಿಗೆ ಬರುವ ಪ್ರಯಾಣಿಕರಿಗೆ ದುಬಾರಿ ಬೆಲೆಯಲ್ಲಿ ಟೈರ್ ರಿಪೇರಿ ಮಾಡಿಕೊಡುತ್ತಾರೆ. ಈ ದುಷ್ಕೃತ್ಯದಿಂದ ಆರ್ಥಿಕ ನಷ್ಟವಷ್ಟೇ ಅಲ್ಲದೆ ಪ್ರಯಾಣಿಕರ ಜೀವಕ್ಕೂ ಕುತ್ತು ತರುವ ಮಟ್ಟಕ್ಕೆ ತಲುಪಿದೆ. ಫ್ಲೈಓವರ್ ಗಳ ಮೇಲಿನ ವಾಹನಗಳು ಈ ಮಾಫಿಯಾಕ್ಕೆ ಸಿಲುಕಿ ನಿಯಂತ್ರಣ ಕಳೆದುಕೊಳ್ಳುವಂತಹ ಸ್ಥಿತಿ ಎದುರಾದರೆ ಮಾರಕ ಪರಿಣಾಮಗಳನ್ನು ಎದುರಿಸಬೇಕಾಗುತ್ತೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.ಈ ಕುರಿತು ಕರ್ನಾಟಕ ಪೋರ್ಟ್​ಫೋಲಿಯೋ ತನ್ನ ಎಕ್ಸ್ ಖಾತೆಯಲ್ಲಿ ಪಂಕ್ಚರ್ ಮಾಫಿಯಾಕ್ಕೆ ಸಿಲುಕಿದ್ದ ದಂಪತಿಯ ವೀಡಿಯೋ ಒಂದನ್ನು ಹಂಚಿಕೊಂಡಿದೆ.

ಕರ್ನಾಟಕ ಪೋರ್ಟ್​ಫೋಲಿಯೋ ಪೋಸ್ಟ್ ಇಲ್ಲಿದೆ

ಈ ಘಟನೆ ಹಿನ್ನೆಲೆ ರಸ್ತೆ ಸುರಕ್ಷತೆಯ ವಿಷಯದಲ್ಲಿ ಮತ್ತೆ ಪ್ರಶ್ನೆಗಳು ಉದ್ಭವಿಸಿವೆ. ಅಧಿಕಾರಿಗಳು ಇಂತಹ ಅಪರಾಧದ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರಲ್ಲದೆ ನಿಯಮಿತ ರಸ್ತೆ ತಪಾಸಣೆ, ಸಿಸಿಟಿವಿ ಮೇಲ್ವಿಚಾರಣೆ ಹಾಗೂ ಕಠಿಣ ದಂಡದ ಕ್ರಮಗಳನ್ನು ಕೈಗೊಳ್ಳುವುದರಿಂದ ಇಂತಹ ಅಪಾಯಗಳನ್ನು ತಡೆಗಟ್ಟಲು ಸಾಧ್ಯ ಎಂದು ತಜ್ಞರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.