ಸಿಎಂ ಸಿದ್ದರಾಮಯ್ಯ ದೆಹಲಿ ಪ್ರಯಾಣ ರಹಸ್ಯ ಬಿಚ್ಚಿಟ್ಟ ಬಸವರಾಜ ರಾಯರೆಡ್ಡಿ: ಏನ್ ಹೇಳಿದ್ರು ನೋಡಿ
ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ದೆಹಲಿಗೆ ಹೋಗುತ್ತಿದ್ದು, ಇದು ಸಚಿವ ಸಂಪುಟ ವಿಸ್ತರಣೆ ಚರ್ಚೆಗಲ್ಲ. ಬದಲಾಗಿ ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ. ಸಿದ್ದರಾಮಯ್ಯ ಅವರು ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ರಾಯರೆಡ್ಡಿ ಹೇಳಿದ್ದಾರೆ.
ಕೊಪ್ಪಳ ನವೆಂಬರ್ 12: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ದೆಹಲಿ ಭೇಟಿ ಕುರಿತು ಶಾಸಕ ಬಸವರಾಜ್ ರಾಯರೆಡ್ಡಿ ಪ್ರತಿಕ್ರಿಯಿಸಿದ್ದಾರೆ. ಕೊಪ್ಪಳದಲ್ಲಿ ಬುಧವಾರ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಅಕ್ಟೋಬರ್ 15ರಂದು ದೆಹಲಿಗೆ ತೆರಳುತ್ತಿದ್ದು, ನಾನೂ ಕೂಡ ಅವರೊಂದಿಗೆ ತೆರಳುತ್ತೇನೆ ಎಂದು ರಾಯರೆಡ್ಡಿ ಹೇಳಿದ್ದಾರೆ. ಆದರೆ, ಈ ಭೇಟಿ ಸಚಿವ ಸಂಪುಟ ವಿಸ್ತರಣೆ ಚರ್ಚೆಗಾಗಿ ಅಲ್ಲ. ಅಕ್ಟೋಬರ್ 16ರಂದು ಕಪಿಲ್ ಸಿಬಲ್ ಬಿಡುಗಡೆ ಮಾಡಲಿರುವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಲು ಈ ಭೇಟಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಯಾರನ್ನೆಲ್ಲ ಸಚಿವರನ್ನಾಗಿ ಮಾಡಬೇಕು ಅಥವಾ ಯಾರನ್ನು ತೆಗೆಯಬೇಕು ಎಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ ಮತ್ತು ಪಕ್ಷದ ವರಿಷ್ಠರ ಅಧಿಕಾರಕ್ಕೆ ಒಳಪಟ್ಟಿದೆ. ಈ ವಿಷಯದಲ್ಲಿ ನಾನು ಹೊಸಬನಲ್ಲ, 40 ವರ್ಷಗಳ ಕಾಲ ಶಾಸಕನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದ ಅವರು, ಮಾಧ್ಯಮಗಳಲ್ಲಿ ಬರುವ ಇಂತಹ ವಿಷಯಗಳು ಕೇವಲ ಊಹಾಪೋಹ. ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಶಾಸಕಾಂಗ ಪಕ್ಷದ ಸಭೆ ಕರೆದು ಎಲ್ಲ ಶಾಸಕರ ಒಪ್ಪಿಗೆಯ ನಂತರವೇ ಮುಖ್ಯಮಂತ್ರಿಯ ಬದಲಾವಣೆ ಸಾಧ್ಯ. 2023ರ ಮೇ ತಿಂಗಳಲ್ಲಿ ಸಿದ್ದರಾಮಯ್ಯ ಅವರನ್ನು ಬಹುಮತದಿಂದ ಆಯ್ಕೆ ಮಾಡಲಾಗಿದೆ. ಅವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ತಿಳಿಸಿದ್ದಾರೆ.

