ಸೆಪ್ಟೆಂಬರ್‌ನಲ್ಲಿ ಬೆಂಗಳೂರಿಗೆ ಬರಲಿರುವ ನೆದರ್ಲೆಂಡ್ ಪ್ರಧಾನಿ: ವಿವಿಧ ಕ್ಷೇತ್ರಗಳಲ್ಲಿ ಭರ್ಜರಿ ಹೂಡಿಕೆ ಸಾಧ್ಯತೆ
ನೆದರ್ಲೆಂಡ್ ಪ್ರಧಾನಿ ಮಾರ್ಕ್ರುಟ್ಟೆ ಅವರು ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದ್ದು, ಈ ವೇಳೆ ಅವರು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಬೆಂಗಳೂರು: ನೆದರ್ಲೆಂಡ್ ಪ್ರಧಾನಿ ಮಾರ್ಕ್ ರುಟ್ಟೆ (Netherlands PM Mark Rutte) ಅವರು ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ (India) ಭೇಟಿ ನೀಡುವ ನಿರೀಕ್ಷೆಯಿದ್ದು, ಈ ಸಂದರ್ಭದಲ್ಲಿ ಅವರು ಬೆಂಗಳೂರಿಗೆ (Bengaluru) ಆಗಮಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿರುವ ನೆದರ್ಲೆಂಡ್ನ ಕಾನ್ಸುಲ್ ಜನರಲ್ ಇವೂಟ್ ಡಿ ವಿಟ್ ಅವರು ಇಂದು (ಜೂನ್.07) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದರು.
ಕರ್ನಾಟಕವು ಹೂಡಿಕೆದಾರ ಸ್ನೇಹಿ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಸಾಕಷ್ಟು ನುರಿತ ಮಾನವ ಸಂಪನ್ಮೂಲ ಮತ್ತು ಉತ್ತಮ ಕಾನೂನು ಸುವ್ಯವಸ್ಥೆಯಿದ್ದು ಆರ್ಥಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವೂಟ್ ಡಿ ವಿಟ್ ಅವರಿಗೆ ತಿಳಿಸಿದರು.
ಕರ್ನಾಟಕ ಕೈಗಾರಿಕೀಕರಣದಲ್ಲಿ ಮುಂಚೂಣಿಯಲ್ಲಿದ್ದು, ಅದರಲ್ಲೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಗ್ರಸ್ಥಾನದಲ್ಲಿದೆ. ಕರ್ನಾಟಕವು ನುರಿತ ಮಾನವ ಸಂಪನ್ಮೂಲಗಳ ಲಭ್ಯತೆಯೊಂದಿಗೆ ಶಾಂತಿಯುತ ರಾಜ್ಯವಾಗಿರುವುದರಿಂದ ಹೂಡಿಕೆಗೆ ಅತ್ಯುತ್ತಮ ತಾಣವಾಗಿದೆ ಎಂದು ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಪಠ್ಯ ಪರಿಷ್ಕರಣೆಗೆ ತಾತ್ಕಾಲಿಕ ಸಮಿತಿ ರಚನೆ: ಲೋಪದೋಷ ಸರಿಪಡಿಸುವಂತ ಸಿಎಂ ಸಿದ್ದರಾಮಯ್ಯ ಸೂಚನೆ
ರಾಜ್ಯದಲ್ಲಿ ನೆದರ್ಲ್ಯಾಂಡ್ಸ್ ಕಂಪನಿಗಳಿಗೆ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಕಾನೂನು ಸುವ್ಯವಸ್ಥೆ ಹದಗೆಡಲು ರಾಜ್ಯ ಸರ್ಕಾರ ಬಿಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ನೆದರ್ಲೆಂಡ್, ರಾಜ್ಯದಲ್ಲಿ ಗಣನೀಯ ಮೊತ್ತವನ್ನು ಹೂಡಿಕೆ ಮಾಡಿದೆ. ಇದು ಒಟ್ಟು ಹೂಡಿಕೆಯ ಶೇಕಡಾ 9 ರಷ್ಟಿದೆ. ನೆದರ್‌ಲ್ಯಾಂಡ್‌ನ ಸುಸ್ಥಿರ ಶಕ್ತಿ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮತ್ತು ಇತರ ನವೀನ ಕ್ಷೇತ್ರಗಳಂತಹ ಕೈಗಾರಿಕೆಗಳಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದೆ ಸಭೆಯಲ್ಲಿ ಚರ್ಚೆಯಾಗಿದೆ.
ಇನ್ನು ನೆದರ್ಲೆಂಡ್ ಪ್ರಧಾನಿ ಮಾರ್ಕ್ರುಟ್ಟೆ ಅವರು ರಾಜ್ಯ ಭೇಟಿ ವೇಳೆ ಉದ್ಯಮಿಗಳ ನಿಯೋಗವು ರಾಜ್ಯದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಕುರಿತು ಚರ್ಚಿಸುವ ಸಾಧ್ಯತೆ ಇದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Wed, 7 June 23