ಹೊಸ ವರ್ಷಾಚರಣೆ: ತಡರಾತ್ರಿ 2 ಗಂಟೆವರೆಗೆ ಸಂಚರಿಸಲಿದೆ ನಮ್ಮ ಮೆಟ್ರೋ

| Updated By: Ganapathi Sharma

Updated on: Dec 29, 2023 | 11:11 AM

ರಾತ್ರಿ 11.30ಕ್ಕೆ ಇದ್ದ ನಮ್ಮ ಮೆಟ್ರೋ ಕೊನೆಯ ರೈಲು ಸೇವೆಯನ್ನು ಡಿಸೆಂಬರ್ 31 ರಂದು ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ರೈಲುಗಳು 15 ನಿಮಿಷಗಳ ಆವರ್ತನದಲ್ಲಿ ಸಂಚರಿಸಲಿವೆ.

ಹೊಸ ವರ್ಷಾಚರಣೆ: ತಡರಾತ್ರಿ 2 ಗಂಟೆವರೆಗೆ ಸಂಚರಿಸಲಿದೆ ನಮ್ಮ ಮೆಟ್ರೋ
ನಮ್ಮ ಮೆಟ್ರೋ
Follow us on

ಬೆಂಗಳೂರು, ಡಿಸೆಂಬರ್ 29: ಹೊಸ ವರ್ಷಾಚರಣೆಗೆ ಅನುಕೂಲವಾಗುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಡಿಸೆಂಬರ್ 31ರಂದು ರಾತ್ರಿಯಿಂದ ಬೆಳಗಿನ ಜಾವ 2 ಗಂಟೆಯವರೆಗೆ ನಮ್ಮ ಮೆಟ್ರೋ ರೈಲು (Namma Metro) ಸೇವೆಯನ್ನು ವಿಸ್ತರಿಸಿದೆ. ಆದರೆ, ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಎಂಜಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಪೊಲೀಸ್ ಇಲಾಖೆ ಸೂಚನೆ ಮೇರೆಗೆ ಎಂಜಿ ರಸ್ತೆಗೆ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ವಿಸ್ತೃತ ರೈಲು ಸೇವೆಯನ್ನು ಬಳಸಲು ಮೆಟ್ರೋ ಪ್ರಯಾಣಿಕರು ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಿಗೆ ತೆರಳಲು ಸೂಚಿಸಲಾಗಿದೆ.

ರಾತ್ರಿ 11.30ಕ್ಕೆ ಇದ್ದ ಕೊನೆಯ ರೈಲು ಸೇವೆಯನ್ನು ಡಿಸೆಂಬರ್ 31 ರಂದು ಬೆಳಗಿನ ಜಾವ 2 ಗಂಟೆಯವರೆಗೆ ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ರೈಲುಗಳು 15 ನಿಮಿಷಗಳ ಆವರ್ತನದಲ್ಲಿ ಸಂಚರಿಸಲಿವೆ.

ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಿಂದ ಪ್ರಯಾಣಿಕರಿಗೆ 50 ರೂಪಾಯಿಗೆ ಪೇಪರ್ ಟಿಕೆಟ್ ನೀಡಲಾಗುತ್ತದೆ. ಡಿಸೆಂಬರ್ 31 ರಂದು ಮಧ್ಯರಾತ್ರಿ ಟಿಕೆಟ್ ವಿತರಣೆ ಇರುವುದಿಲ್ಲವಾದ್ದರಿಂದ ಪೇಪರ್ ಟಿಕೆಟ್‌ಗಳನ್ನು ಮುಂಚಿತವಾಗಿ ಪಡೆಯಬೇಕು. ಸ್ಮಾರ್ಟ್ ಕಾರ್ಡ್ ಮತ್ತು ಕ್ಯೂಆರ್ ಕೋಡ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಹೇರಲು ಕರ್ನಾಟಕ ಹೈಕೋರ್ಟ್ ನಕಾರ

ಹೊಸ ವರ್ಷಾಚರಣೆಗಾಗಿ ಎಂಜಿ ರಸ್ತೆಯ ಸಮೀಪದಲ್ಲಿರುವ ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಜನರನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಎಂಜಿ ರಸ್ತೆ ನಿಲ್ದಾಣಕ್ಕೆ ಪ್ರವೇಶ ನಿರ್ಬಂಧಿಸುವ ಕ್ರಮಕ್ಕೆ ಮುಂದಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ