
ಬೆಂಗಳೂರು, ಜುಲೈ 1: ಕರ್ನಾಟಕದಲ್ಲಿ ಮೇಲಿಂದ ಮೇಲೆ ಬೆಲೆ ಏರಿಕೆ ಆಗುತ್ತಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಜೀವನ ನಡೆಸಲು ಒದ್ದಾಡುವಂತಾಗಿದೆ. ಇದೀಗ, ಲಕ್ಷಾಂತರ ವಾಹನಗಳ ಓಡಾಟಕ್ಕೆ ರಹದಾರಿಯಾಗಿರುವ ಬೆಂಗಳೂರಿನ ನೈಸ್ ರಸ್ತೆ (NICE Road) ಟೋಲ್ ದರ (NICE Road Toll Price Hike) ಮತ್ತೆ ಏರಿಕೆಯಾಗಿದೆ. ಈ ಕುರಿತಾಗಿ ಸಾರ್ವಜನಿಕ ಪ್ರಕಟಣೆ ಹೊರಡಿಸಿರುವ ನಂದಿ ಎಕನಾಮಿಕಲ್ ಕಾರಿಡಾರ್ ಎಂಟರ್ಪ್ರೈಸಸ್ (NICE), ಪರಿಷ್ಕೃತ ದರ ಮಂಗಳವಾರದಿಂದಲೇ (ಜುಲೈ 1) ಅನ್ವಯ ಆಗಲಿದೆ ಎಂದು ಹೇಳಿದೆ. ಕರ್ನಾಟಕ ಸರ್ಕಾರದ ಟೋಲ್ ರಿಯಾಯಿತಿ ಒಪ್ಪಂದ ಹಾಗೂ ಪಿಡಬ್ಲ್ಯುಡಿ 40 ಸಿಆರ್ಎಂ 2008 ಅನ್ವಯ ಬಿಎಂಐಸಿ ಯೋಜನೆಯ ಫೇರಿಪೇರಲ್ ರಸ್ತೆ ಮತ್ತು ಲಿಂಕ್ ರಸ್ತೆಯ ಟೋಲ್ ದರಗಳನ್ನು ಜುಲೈ ಒಂದರಿಂದ ಪರಿಷ್ಕರಿಸಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಈ ವಿಚಾರ ಈಗ ವಾಹನ ಸವಾರರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ನಂದಿ ಏಕನಾಮಿಕಲ್ ಕಾರಿಡಾರ್ ಎಂಟರ್ಪ್ರೈಸಸ್ ಅಧೀನಕ್ಕೆ ಒಳಪಡುವ ಒಟ್ಟು 8 ಟೋಲ್ ಪ್ಲಾಜಾಗಳಲ್ಲೂ ದರ ಏರಿಕೆ ಅನ್ವಯ ಆಗಲಿದೆ. ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಕ್ಲೋವರ್ ಲೀಫ್ ಜಂಕ್ಷನ್, ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಲಿಂಕ್ ರಸ್ತೆಗಳನ್ನು ಬಳಕೆ ಮಾಡುವ ವಾಹನ ಸವಾರರಿಗೆ ಹೊಸ ಟೋಲ್ ದರದ ಬಿಸಿ ಮುಟ್ಟಲಿದೆ.
ನೈಸ್ ರಸ್ತೆಯಲ್ಲಿ ಬೈಕ್ ಸವಾರರು ಕೂಡ ಟೋಲ್ ಪಾವತಿ ಮಾಡುತ್ತಾ ಇದ್ದು, ದರ ಏರಿಕೆಗೆ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಸರಾಸರಿ ಶೇ 15 ರ ವರೆಗೆ ಟೋಲ್ ಶುಲ್ಕ ಹೆಚ್ಚಳ ಆಗುತ್ತಿದೆ. ದರ ಏರಿಕೆ ವೇಳೆ ಜನಸಾಮಾನ್ಯರ ಹಿತಾಸಕ್ತಿ ಕಡೆಗಣಿಸಲಾಗಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೈಸ್ ಟೋಲ್ ದರ ಪಟ್ಟಿ
ಇದನ್ನೂ ಓದಿ: 22ರ ವಿದ್ಯಾರ್ಥಿಗೆ ಸಿಕ್ತು 52 ಲಕ್ಷ ರೂ. ಸ್ಯಾಲರಿ ಪ್ಯಾಕೇಜ್ ಉದ್ಯೋಗ : ಇದು ಬೆಂಗಳೂರು ಎಂಐಟಿ ಸಾಧನೆ
ಟೋಲ್ ದರ ಏರಿಕೆಯ ಬಿಸಿ ಇಂದಿನಿಂದಲೇ ಜನರಿಗೆ ತಟ್ಟಲಿದ್ದು, ಹಠಾತ್ ಶುಲ್ಕ ಹೆಚ್ಚಳಕ್ಕೆ ಭಾರಿ ಪ್ರತಿರೋಧ ಎದುರಾಗುವ ಸಾಧ್ಯತೆ ಇದೆ. ಸರ್ಕಾರ ಇದಕ್ಕೆ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ: ಲಕ್ಷ್ಮಿ ನರಸಿಂಹ, ‘ಟಿವಿ9’, ಬೆಂಗಳೂರು
Published On - 8:48 am, Tue, 1 July 25