ಮಗಳ ವಯಸ್ಸಿನ ಹೆಣ್ಣು ಜೀವಕ್ಕಾದ ನೋವಿನ ಬಗ್ಗೆ ಸರ್ಕಾರ, ಎಸ್‌ಐಟಿ ಚರ್ಚೆ ಮಾಡುತ್ತಿಲ್ಲ: ಸಂಸದ ಡಿ.ಕೆ.ಸುರೇಶ್
ರಮೇಶ್ ಜಾರಕಿಹೊಳಿ ಸಿಡಿ ಕೇಸ್ಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿಕೆ ನೀಡಿದ್ದಾರೆ. ಸರ್ಕಾರ ಇದರ ರಕ್ಷಣೆಗೆ ನಿಂತಿರುವುದನ್ನು ನೋಡಿದರೆ ಇದು ಸಿಡಿಗಳಿಂದ ಉಳಿದಿರುವ ಸರ್ಕಾರ ಎಂದೆನಿಸುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಮಗಳ ವಯಸ್ಸಿನ ಹೆಣ್ಣು ಮಗಳಿಗಾದ ನೋವಿನ ಬಗ್ಗೆ ಸರ್ಕಾರವಾಗಲೀ, ಎಸ್‌ಐಟಿಯಾಗಲೀ ಯಾರೂ ಸಹ ಚರ್ಚೆ ಮಾಡುತ್ತಿಲ್ಲ. ಸರ್ಕಾರ ಆರೋಪಿಗಳ ರಕ್ಷಣೆಗೆ ನಿಂತಿರುವುದನ್ನು ನೋಡಿದರೆ ಇದು ಸಿಡಿಗಳಿಂದ ಉಳಿದಿರುವ ಸರ್ಕಾರ ಎಂದೆನಿಸುತ್ತಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಈ ಸರ್ಕಾರ ಅಭಿವೃದ್ಧಿಯ ಕುರಿತಾಗಿ ಅಥವಾ ನೀರಿನ ಸಮಸ್ಯೆ ಬಗ್ಗೆ ಚಿಂತಿಸುತ್ತಿಲ್ಲ. ಅಕ್ರಮ ಚಟುವಟಿಕೆ ಮುಚ್ಚಿಟ್ಟುಕೊಂಡು ಸರ್ಕಾರ ನಡೆಸುತ್ತಿದ್ದಾರೆ. ಇದನ್ನು ಯಾರು ನಿಯಂತ್ರಿಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಪ್ರಕರಣ ಮುಚ್ಚಿಹಾಕುವ ಕುತಂತ್ರ ನಡೆಸುತ್ತಿದ್ದಾರೆ. ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕೈಚೆಲ್ಲಿ ಕುಳಿತಿದ್ದಾರೆ. ರಮೇಶ್ ಜಾರಕಿಹೊಳಿ ಅವಾಚ್ಯ ಪದ ಬಳಸಿದ ವಿಚಾರಕ್ಕೆ ಸಂಬಂಧಿಸಿ, ಅವರು ಎದುರಿಗೆ ಸಿಕ್ಕಿದರೆ ಏನನ್ನು ಹೇಳಬೇಕೋ ಹೇಳುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ಹೇಲಿದರು.
ಅವರು ಬಟ್ಟೆ ಬಿಚ್ಚುವುದಕ್ಕೆ ನಾವು ಹೇಳಿದ್ವಾ? ಅವರೇ ಅಲ್ವಾ ಬಟ್ಟೆ ಬಿಚ್ಚಿದ್ದು? ಎಂದು ಪ್ರಶ್ನೆಗೆ, ‘ಸರ್ಕಾರದಲ್ಲಿ ಸಿಎಂ ಇಲ್ಲ, ಗೃಹ ಮಂತ್ರಿಗಳೂ ಕೂಡ ಇಲ್ಲ. ಸರ್ಕಾರ ತಂದವರು ಇವರೇ, ಸರ್ಕಾರ ಬೀಳಿಸೋದು ಇವರೇ ಅಲ್ವಾ? ಇವರಿಂದ ಇಡೀ ಬಿಜೆಪಿಗೆ ಆತಂಕ ಇದೆ. ಜನರಿಗೆ ಸರ್ಕಾರದ ಕಡೆಯಿಂದ ಒಂದು ಸಂದೇಶ ಹೋಗಬೇಕಾಗಿತ್ತು. ಆದ್ರೆ ಇನ್ಮುಂದೆ ಮಹಿಳೆಯರ ರಕ್ಷಣೆಗೆ ಸರ್ಕಾರ ಇಲ್ಲ ಅಂತ ಆಗಿದೆ ಎಂದು ಹೇಳಿಕೆ ನೀಡಿದರು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್, ಡಿ ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ