ಬೆಂಗಳೂರು: ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ. ನಮ್ಮ ಇಲಾಖೆಯಿಂದ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಟಿವಿ9ಗೆ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿಕೆ ನೀಡಿದ್ದಾರೆ. ಸ್ಟನ್ನಿಂಗ್ ಕಡ್ಡಾಯ ಆದೇಶ ಮಾಡಿಲ್ಲ. ಪತ್ರ ಬರೆದಿದ್ದಾರೆ ಅಷ್ಟೇ. ಹಲಾಲ್ ಕಟ್ ಮಾಡಬಾರದು ಎಂದು ಪತ್ರ ಬರೆದಿದ್ದಾರೆ ಅಷ್ಟೇ. ಯಾವುದೇ ರೀತಿಯ ಆದೇಶವನ್ನು ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ ಎಂದು ಪ್ರಭು ಚೌಹಾಣ್ ತಿಳಿಸಿದ್ದಾರೆ.
ಹಲಾಲ್ ಕಟ್ ಹಾಗೂ ಜಟ್ಕಾ ಕಟ್ ವಿಚಾರದ ನಡುವೆ ಪಶು ಸಂಗೋಪನಾ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ ಎಂದು ಹೇಳಲಾಗಿತ್ತು. ಅದರಂತೆ, ಇನ್ನು ಮುಂದೆ ಪ್ರಾಣಿಗಳನ್ನು ಆಹಾರಕ್ಕಾಗಿ ವಧೆ ಮಾಡುವಾಗ ಅವುಗಳಿಗೆ ಹಿಂಸೆ ನೀಡಬಾರದು ಎಂದು ಸೂಚನೆ ನೀಡಿರುವ ಬಗ್ಗೆ ಹೇಳಲಾಗಿತ್ತು. ಬೆಂಗಳೂರಿನಲ್ಲಿ ಇನ್ನುಮುಂದೆ ಪ್ರಾಣಿ ವಧೆಗೆ ಸ್ಟನ್ನಿಂಗ್ (stunning) ಕಡ್ಡಾಯವಾಗಿ ಇರಲಿದೆ. ಪಶುಸಂಗೋಪನಾ ಇಲಾಖೆಯಿಂದ ಈ ಬಗ್ಗೆ ಆದೇಶ ನೀಡಲಾಗಿದೆ ಎಂದು ಹೇಳಲಾಗಿತ್ತು. ಇದೀಗ ಇಲಾಖೆ ಹೀಗೆ ಆದೇಶವನ್ನು ಹೊರಡಿಸಿಲ್ಲ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಸ್ಪಷ್ಟನೆ ನೀಡಿದ್ದಾರೆ.
ಸ್ಟನ್ನಿಂಗ್ ಎಂದರೇನು?
ಸ್ಟನ್ನಿಂಗ್ ಮೆಥಡ್‌ನಿಂದ ಪ್ರಾಣಿಗಳು ನರಳಾಟದಿಂದ ಸಾಯೋದಿಲ್ಲ. ಸ್ಟನ್ನಿಂಗ್ ವೇಳೆ ಪ್ರಾಣಿಗಳ ತಲೆಗೆ ಜೋರಾಗಿ ಹೊಡೆಯಲಾಗುತ್ತದೆ. ಆಗ ಪ್ರಾಣಿಗಳ ತಲೆಗೆ ಪೆಟ್ಟು ಬಿದ್ದು ಅವುಗಳ ಮೆದುಳು ನಿಷ್ಕ್ರಿಯಗೊಳ್ಳುತ್ತದೆ. ಆ ವೇಳೆ ಪ್ರಾಣಿಗಳನ್ನು ವಧೆ ಮಾಡಲಾಗುತ್ತದೆ. ಹೀಗೆ, ಇನ್ನು ಮುಂದೆ ಕೋಳಿ, ಕುರಿ ಅಂಗಡಿಗಳಿಗೆ ಲೈಸೆನ್ಸ್ ಕೊಡುವಾಗಲೂ stunning facility ಕಡ್ಡಾಯ ಆಗಿ ಇರಲೇಬೇಕು ಎಂದು ಹೇಳಲಾಗಿತ್ತು.
Stunning facility ಇಲ್ಲದೆ ಹೋದರೆ ಪರವಾನಗಿ ನೀಡಬಾರದು. 2001 ರ ಸೆಕ್ಷನ್ 6 ಮತ್ತು 4 ರ ಅಡಿಯಲ್ಲಿ stunning ನಿಯಮ ಇದೆ. ನಿಯಮ ಬ್ರೇಕ್ ಮಾಡುವವರಿಗೆ 1960 ಆಕ್ಟ್ ಪ್ರಕಾರ 5 ಸಾವಿರದಿಂದ 50 ಸಾವಿರದವರೆಗೂ ದಂಡ ವಿಧಿಸಲಾಗುವುದು ಎಂದು ಸೂಚನೆ ಕೊಡಲಾಗಿದೆ. ಆಕ್ಟ್ ಅಡಿಯಲ್ಲಿ ಪ್ರಾಣಿ ಹಿಂಸೆಯ ಕೇಸ್ ಕೂಡಾ ದಾಖಲು ಮಾಡಲಾಗುವುದು ಎಂದು ಹೇಳಲಾಗಿದೆ. ಹೀಗಾಗಿ ಆಹಾರಕ್ಕಾಗಿ ಕೋಳಿ, ಕುರಿ ವಧೆ ಮಾಡುವವರು ಈ ನಿಯಮ ಅನುಸರಿಸಬೇಕಾಗಿದೆ ಎಂದು ಸುದ್ದಿ ತಿಳಿದುಬಂದಿತ್ತು. ಈಗ ಪ್ರಭು ಚೌಹಾಣ್ ಈ ಬಗ್ಗೆ ಯಾವುದೇ ಆದೇಶ ನೀಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಾಣಿ ವಧೆಗೆ ಸ್ಟನ್ನಿಂಗ್ ಕಡ್ಡಾಯ; ಹಲಾಲ್, ಜಟ್ಕಾ ವಿವಾದದ ನಡುವೆ ಪಶುಸಂಗೋಪನಾ ಇಲಾಖೆ ಮಹತ್ವದ ಆದೇಶ
ಇದನ್ನೂ ಓದಿ: ಜಟ್ಕಾ Vs ಹಲಾಲ್ : ಇವುಗಳ ನಡುವೆ ಏನಿದೆ ವ್ಯತ್ಯಾಸ? ಯಾವ ಮಾಂಸ ಉತ್ತಮ?