ಕರ್ನಾಟಕ ನಮ್ಮದು, ರಾಜ್ಯ ಒಡೆಯುವ ದ್ರೋಹಿಗಳದ್ದಲ್ಲ; ಟ್ವೀಟ್ ಮೂಲಕ ಹೆಚ್​ಡಿ ಕುಮಾರಸ್ವಾಮಿ ಆಕ್ರೋಶ

ಕರ್ನಾಟಕ ನಮ್ಮದು, ರಾಜ್ಯ ಒಡೆಯುವ ದ್ರೋಹಿಗಳದ್ದಲ್ಲ; ಟ್ವೀಟ್ ಮೂಲಕ ಹೆಚ್​ಡಿ ಕುಮಾರಸ್ವಾಮಿ ಆಕ್ರೋಶ
ಹೆಚ್​ಡಿ ಕುಮಾರಸ್ವಾಮಿ

ಕುರ್ಚಿ ಹಿಡಿಯಲು ಜನರ ಮನಸುಗಳನ್ನು ಮುರಿಯುತ್ತಿದ್ದಾರೆ. ನಾಳೆ ಮನೆಗಳನ್ನೂ ಒಡೆದು ಮನೆ ಮುರುಕರೂ ಆಗುತ್ತಾರೆ. ಅಣ್ಣ-ತಮ್ಮ, ಅಕ್ಕ-ತಂಗಿ ನಡುವೆಯೂ ಬೆಂಕಿ ಇಡುತ್ತಾರೆ. ಹಿಂದುತ್ವದ ಹೆಸರೇಳಿಕೊಂಡು ‘ಹಿಂದುತ್ವದ ವಿನಾಶ’ ಮಾಡುತ್ತಾರೆ.

TV9kannada Web Team

| Edited By: sandhya thejappa

Apr 02, 2022 | 10:36 AM

ಬೆಂಗಳೂರು: ಯುಗಾದಿ ಪರ್ವ ದಿನದಂದು ಎಲ್ಲರೂ ಕರ್ನಾಟಕ ಕರ್ನಾಟಕವಾಗಿಯೇ ಉಳಿಯಬೇಕೆಂಬ ಸಂಕಲ್ಪ ಮಾಡೋಣ ಅಂತ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಸರಣಿ ಟ್ವೀಟ್ ಮಾಡಿದ್ದಾರೆ. ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸದ ಕಿಡಿಗೇಡಿಗಳಿಗೆ, ಧರ್ಮವಿನಾಶಕ್ಕೆ ಕಂಕಣತೊಟ್ಟ ಕಿರಾತಕರಿಗೆ ಪಾಠ ಕಲಿಸಬೇಕು. ಕರ್ನಾಟಕ (Karnataka) ನಮ್ಮದು, ರಾಜ್ಯ ಒಡೆಯುವ ದ್ರೋಹಿಗಳದ್ದಲ್ಲ. ಧರ್ಮದ ಹೆಸರಿನಲ್ಲಿ ಜನರನ್ನು ಒಡೆಯುವ ದ್ರೋಹಿಗಳದ್ದಲ್ಲ ಅಂತ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

ಕುರ್ಚಿ ಹಿಡಿಯಲು ಜನರ ಮನಸುಗಳನ್ನು ಮುರಿಯುತ್ತಿದ್ದಾರೆ. ನಾಳೆ ಮನೆಗಳನ್ನೂ ಒಡೆದು ಮನೆ ಮುರುಕರೂ ಆಗುತ್ತಾರೆ. ಅಣ್ಣ-ತಮ್ಮ, ಅಕ್ಕ-ತಂಗಿ ನಡುವೆಯೂ ಬೆಂಕಿ ಇಡುತ್ತಾರೆ. ಹಿಂದುತ್ವದ ಹೆಸರೇಳಿಕೊಂಡು ‘ಹಿಂದುತ್ವದ ವಿನಾಶ’ ಮಾಡುತ್ತಾರೆ. ಇಂತಹ ನಕಲಿಗಳ ಮಾತನ್ನು ಯಾರೂ ನಂಬಬಾರದು. ಕರಪತ್ರ ಹಿಡಿದು ಬಂದರೆ ಭಾವೈಕ್ಯತೆಯ ಪಾಠ ಹೇಳಿ ಕಳಿಸಿ ಅಂತ ಮಾಜಿ ಸಿಎಂ ಹೆಚ್​ಡಿಕೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.

ಹಲಾಲ್, ಜಟ್ಕಾ ವಿವಾದದ ಬಗ್ಗೆ ಆಕ್ರೋಶ ಹೊರಹಾಕಿದ ಕುಮಾರಸ್ವಾಮಿ, ತಲತಲಾಂತರಗಳಿಂದ ಯುಗಾದಿ ಹಬ್ಬ ಆಚರಣೆ ಮಾಡುತ್ತಿದ್ದೇವೆ. ಯುಗಾದಿ ಮರುದಿನ ಹೊಸತೊಡಕೂ ಇದೆ, ಹಲಾಲೂ ಇದೆ. ಆದರೆ ಈಗ ‘ಹಲಾಲ್ ಹಾಲಾಹಲ’ ವನ್ನು ಸೃಷ್ಟಿಸಲಾಗಿದೆ. ಹಲಾಲ್, ಜಟ್ಕಾ ಎಂದು ಜನರನ್ನು ಛಿದ್ರಗೊಳಿಸಲಾಗುತ್ತಿದೆ. ಭಾವನಾತ್ಮಕವಾಗಿ ಛಿದ್ರಗೊಳಿಸಿ ಮತ ಗಿಟ್ಟಿಸುವ ಗಿಡುಗಗಳಿವು. ಹಿಂದುತ್ವ ಹೆಸರಿನಲ್ಲಿ ರಾಜಕೀಯ ಜನ್ಮ ಪಡೆದುಕೊಂಡು. ರಕ್ಕಸರೂಪದಲ್ಲಿ ಬೆಳೆದಿರುವ ಪಕ್ಷದ ಬಾಲಂಗೋಚಿಗಳಿವು. ಇವರು ನೈಜ ಹಿಂದುಗಳೇ ಅಲ್ಲವೆಂದು ಕಿಡಿಕಾರಿದ್ದಾರೆ.

ತಲತಲಾಂತರಗಳಿಂದ ಇಲ್ಲದ ಆಹಾರ ತಾರತಮ್ಯ ಈಗೇಕೆ ಬಂತು? 150 ಸ್ಥಾನಗಳ ಗುರಿ ಮುಟ್ಟಲು ರೂಪಿಸಿದ ‘ರೋಡ್ ಮ್ಯಾಪ್’ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಸಂವಿಧಾನ ಮುಗಿಸುವ ರಕ್ಕಸ ಹುನ್ನಾರಕ್ಕೆ ಇದು ನಾಂದಿಯಷ್ಟೇ ಅಂತ ಟ್ವೀಟ್ ಮೂಲಕ ಕುಮಾರಸ್ವಾಮಿ ತಿಳಿಸಿದ್ದಾರೆ.

ಅನ್ನ, ಆಹಾರದಲ್ಲಿ ಅರಾಜಕತೆ ಸೃಷ್ಟಿಸಿ ಬೇಳೆ ಬೇಯಿಸಿಕೊಳ್ಳುವವರು. ಭಾರತಕ್ಕೆ ಮತ್ತು ಭಾವೈಕ್ಯ ಪರಂಪರೆಗೆ ದೊಡ್ಡ ಅಪಾಯ. ಮನಸುಗಳ ನಡುವೆ ಯುದ್ಧವನ್ನೇ ಸೃಷ್ಟಿಸುತ್ತಿರುವ ಈ ಕಿಡಿಗೇಡಿಗಳು. ಯುದ್ಧೋನ್ಮಾದ ಸರ್ವಾಧಿಕಾರಿಗಳಿಗಿಂತಲೂ ವಿನಾಶಕಾರಿ. ಇದನ್ನು ಕನ್ನಡಿಗರು ಅರ್ಥ ಮಾಡಿಕೊಳ್ಳಬೇಕು. ಯುಗಾದಿ ಹಬ್ಬದ ದಿನ ನೈಜ ಹಿಂದೂಗಳು ಮಾಂಸ ಮಾರುವುದಿಲ್ಲ. ಮಾಂಸವನ್ನು ಕೂಡ ಯಾರೂ ಖರೀದಿ ಮಾಡಲು ಹೋಗುವುದಿಲ್ಲ. ಆದರೆ, ಜಟ್ಕಾ ಕಟ್ ಹೆಸರಲ್ಲಿ ಕೆಲವರು ಅಂಗಡಿಗಳನ್ನು ತೆರೆದಿದ್ದಾರೆ. ಯುಗಾದಿ ಹಬ್ಬದ ದಿನವೇ ಕೆಲವರು ಅಂಗಡಿಗಳನ್ನು ತೆರೆದಿದ್ದಾರೆ. ಇವರೆಲ್ಲಾ ಹಿಂದೂಗಳಾ ಎಂದು ಪ್ರಶ್ನಿಸಿದ ಹೆಚ್ಡಿಕೆ, ಭಾರತದಿಂದ ಹಿಂದೂ ಧರ್ಮ ಮೂಲೋತ್ಪಾಟನೆ ಇವರ ಅಜೆಂಡಾ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜನಪೀಡಕರನ್ನು ತಿರಸ್ಕರಿಸೋಣ: ಅನಾದಿ ಕಾಲದಿಂದಲೂ ಯುಗಾದಿ, ಹೊಸತೊಡಕು ಆಚರಿಸುತ್ತಿದ್ದೇವೆ. ಈ ಹಿಂದೆ ಆಚರಣೆ ಮಾಡಿದಂತೆಯೇ ಈ ವರ್ಷವೂ ಆಚರಿಸೋಣ. ಭಾರತವನ್ನು ಒಡೆಯುವ ವಿಷಬೀಜಾಸುರರನ್ನು ಹಿಮ್ಮೆಟ್ಟಿಸೋಣ. ಸರ್ವಜನಾಂಗದ ತೋಟದಲ್ಲಿರುವ ಪ್ರತಿಯೊಬ್ಬರಿಗೂ ನನ್ನ ಮನವಿ. ದೇಶಕ್ಕೆ ಮಾದರಿಯಾದ ನೆಮ್ಮದಿಯ ಕರುನಾಡು ಕಾಪಾಡಿಕೊಳ್ಳೋಣ. ಕರ್ನಾಟಕ ಎಲ್ಲರನ್ನೂ ಒಳಗೊಳ್ಳುವ ಶುದ್ಧ ಅಂತಃಕರಣದ ಮನಸುಗಳದ್ದ ಭಾವನೆಗಳ ಕೆಂಡದ ಮಳೆ ಸುರಿಸುವ ಕಿರಾತಕರದ್ದಲ್ಲ. ಜನಪೀಡಕರನ್ನು ತಿರಸ್ಕರಿಸೋಣ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ

ಇದನ್ನೂ ಓದಿ

ಸಾಲದ ಸುಳಿಯಲ್ಲಿ ಸಿಲುಕಿ ರೈತ ಕಂಗಾಲು: ಕೃಷಿ ಜಮೀನು ಹರಾಜ್ ಹಾಕಲು ಬ್ಯಾಂಕ್ ಮುಂದು; ಸಿಧನೂರು ರೈತರ ಗೋಳು ಕೇಳೊರ್ಯಾರು?

ರಷ್ಯಾ ವಾಯುಗಡಿ ಪ್ರವೇಶಿಸಿ ಉಕ್ರೇನ್​ನ ಸೇನಾ ಹೆಲಿಕಾಪ್ಟರ್: ಇಂಧನ ಸ್ಥಾವರದ ಮೇಲೆ ಬಾಂಬ್ ದಾಳಿ

Follow us on

Related Stories

Most Read Stories

Click on your DTH Provider to Add TV9 Kannada