ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ, ಚುನಾವಣಾ ಪೂರ್ವ ಹೊಂದಾಣಿಕೆ ಇಲ್ಲ: ಅಮಿತ್ ಶಾ ಸ್ಪಷ್ಟನೆ
ಮೈಸೂರು ವಿಭಾಗದಲ್ಲಿ ಬಿಜೆಪಿ ದುರ್ಬಲತೆ ಬಗ್ಗೆ ಕೋರ್ ಕಮಿಟಿ ಸದಸ್ಯರು ಅಮಿತ್ ಶಾ ಮುಂದೆ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 35 ಕ್ಷೇತ್ರಗಳಲ್ಲಿ ಪಕ್ಷ ವೀಕ್ ಇದೆ. ಅಲ್ಲಿ ಪಕ್ಷ ಬಲಪಡಿಸಲು ಆದ್ಯತೆ ಕೊಡಬೇಕು ಎಂದು ಸದಸ್ಯರು ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವುದಿಲ್ಲ. ಬೇರೆ ಪಕ್ಷಗಳೊಂದಿಗೂ ಚುನಾವಣಾ ಪೂರ್ವ ಹೊಂದಾಣಿಕೆ ಇಲ್ಲ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದಂತೆ ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ನಾಯಕ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. ಅವಧಿ ಪೂರ್ವ ಚುನಾವಣೆ ನಡೆಯಲ್ಲ. ಇದಕ್ಕೆ ಕಾರಣವನ್ನು ಕರೆ ಮಾಡಿ ತಿಳಿಸುವುದಾಗಿ ಅಮಿತ್ ಶಾ ಹೇಳಿರುವುದು ತಿಳಿದುಬಂದಿದೆ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಿನ್ನೆ (ಏಪ್ರಿಲ್ 01) ನಡೆದ ಸಭೆಯಲ್ಲಿ ಅಮಿತ್ ಶಾ ಹೀಗೆ ತಿಳಿಸಿದ್ದಾರೆ. ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಮಾತುಗಳು ಕೇಳಿಬರುತ್ತಿವೆ. ಇದು ನಿಜವೇ ಎಂದು ಕೋರ್ ಕಮಿಟಿಯ ಸದಸ್ಯರು ಕೇಳಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಅಮಿತ್ ಶಾ ಸ್ಪಷ್ಟೀಕರಣ ಕೊಟ್ಟಿದ್ದಾರೆ.
ನವೆಂಬರ್, ಡಿಸೆಂಬರ್‌ನಲ್ಲಿ ಗುಜರಾತ್ ಚುನಾವಣೆ ಮಾತ್ರ ಇದೆ. ಮುಂದಿನ ವರ್ಷ ಮೇನಲ್ಲಿ ಕರ್ನಾಟಕ ಚುನಾವಣೆ ಮಾತ್ರ ಇದೆ. ಗುಜರಾತ್, ಕರ್ನಾಟಕ ಚುನಾವಣೆ ಮಧ್ಯೆ ಸಮಯ ಹೆಚ್ಚಿದೆ. ಈ ನಡುವೆ ಮತ್ತೊಂದು ಜನಪ್ರಿಯ ಬಜೆಟ್ ಕೂಡ ನೀಡಬಹುದು. ಪಕ್ಷ ಸಂಘಟನೆ ಮಾಡುವುದಕ್ಕೆ ನಿಮಗೆ ಬೇಕಾದಷ್ಟು ಸಮಯವಿದೆ. ಹೀಗಾಗಿ ಬೇರೆ ಪಕ್ಷದ ಜತೆ ಹೊಂದಾಣಿಕೆ ಕೇವಲ ಗಾಳಿ ಸುದ್ದಿ. ದೆಹಲಿಯಲ್ಲಿ ಈ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಆತಂಕ ಬೇಡ ಎಂದು ನಿನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಅಮಿತ್ ಶಾ ತಿಳಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಮೈಸೂರು ವಿಭಾಗದಲ್ಲಿ ಬಿಜೆಪಿ ದುರ್ಬಲತೆ ಬಗ್ಗೆ ಕೋರ್ ಕಮಿಟಿ ಸದಸ್ಯರು ಅಮಿತ್ ಶಾ ಮುಂದೆ ವಿಚಾರ ಪ್ರಸ್ತಾಪಿಸಿದ್ದಾರೆ ಎಂದು ತಿಳಿದುಬಂದಿದೆ. ಸುಮಾರು 35 ಕ್ಷೇತ್ರಗಳಲ್ಲಿ ಪಕ್ಷ ವೀಕ್ ಇದೆ. ಅಲ್ಲಿ ಪಕ್ಷ ಬಲಪಡಿಸಲು ಆದ್ಯತೆ ಕೊಡಬೇಕು ಎಂದು ಸದಸ್ಯರು ಹೇಳಿದ್ದಾರೆ. ಸಮಸ್ಯೆ ಇದೆ ಎಂದು ಹೇಳಬೇಡಿ. ಪರಿಹಾರ ಏನು ಮಾಡಬೇಕು ಅನ್ನೋದನ್ನು ಹೇಳಿ. ಸಮಸ್ಯೆ ಇದೆ, ಪಕ್ಷ ಅಲ್ಲಿ ವೀಕ್ ಇದೆ ಅಂತಾ ನನಗೂ ಗೊತ್ತಿದೆ. ಸಾರ್ವಜನಿಕ ಭಾಷಣ ಮಾಡಿದ ರೀತಿ ಸಮಸ್ಯೆ ಹೇಳಬೇಡಿ. ಏನು ಮಾಡಿದರೆ ಅಲ್ಲಿ ಪಕ್ಷ ಮೇಲಕ್ಕೆ ಎದ್ದೇಳುತ್ತದೆ ಅನ್ನೋದು ಹೇಳಿ ಎಂದು ಅಮಿತ್ ಶಾ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲಿ ಪಕ್ಷ ಸೇರ್ಪಡೆಗೆ ಕೆಲವರು ಆಸಕ್ತರು ಇದ್ದಾರೆ. ಅಗತ್ಯವಿರುವ, ಹೊಂದಾಣಿಕೆ ಆಗುವವರನ್ನು ಸೇರ್ಪಡೆ ಮಾಡಿಕೊಂಡು ಪಕ್ಷ ಬಲಪಡಿಸಬಹುದು ಎಂದು ಕೋರ್ ಕಮಿಟಿ ಸದಸ್ಯರು ತಿಳಿಸಿರುವ ಮಾಹಿತಿ ಲಭ್ಯವಾಗಿದೆ. ಅದರ ಬಗ್ಗೆ ನೀವೇ ರಾಜ್ಯದಲ್ಲಿ ಚರ್ಚೆ ಮಾಡಿ ನಿರ್ಧಾರ ಮಾಡಿ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇದನ್ನೂ ಓದಿ: ಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ: ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಹೇಳಿಕೆ
ಇದನ್ನೂ ಓದಿ: ಹಿರಿಯ ಕಾಂಗ್ರೆಸ್ ನಾಯಕ ಪರಮೇಶ್ವರರನ್ನು ಅಮಿತ್ ಶಾಗೆ ಪರಿಚಯಿಸಿದರು ಬಸವರಾಜ ಬೊಮ್ಮಾಯಿ