
ಬೆಂಗಳೂರು, ಅಕ್ಟೋಬರ್ 01: ವಿಧಾನಸೌಧದ ಗ್ರ್ಯಾಂಡ್ಸ್ಟೆಪ್ಸ್ ಮೇಲೆ ಉರ್ದು ಹಬ್ಬ ವಿಚಾರವಾಗಿ ಕನ್ನಡಪರ ಸಂಘಟನೆಗಳು ಮತ್ತು ವಿಪಕ್ಷಗಳಿಂದ ತೀವ್ರ ವಿರೋಧದ ಬೆನ್ನಲ್ಲೇ ಈ ಕುರಿತು ಮುಖ್ಯಮಂತ್ರಿಗಳ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಯಾವುದೇ ಸರ್ಕಾರಿಯೇತರ ಕಾರ್ಯಕ್ರಮಗಳಿಗೆ ಆಸ್ಪದ ಇರುವುದಿಲ್ಲ. ಈ ಕುರಿತ ಸುದ್ದಿ ಸುಳ್ಳು. ರಾಜ್ಯ ಸರ್ಕಾರವು ಇಂತಹ ಯಾವುದೇ ಅನುಮತಿ ನೀಡಿಲ್ಲ ಎಂದು ತಿಳಿಸಲಾಗಿದೆ.
ಉರ್ದು ಹಬ್ಬವನ್ನು ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಮಾಡಬೇಕು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ. ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಕೂಡ ಹೇಳಿದ್ದಾರೆ. ಪ್ರತಿ ಭಾಷೆಗೂ ಮಹತ್ವ ಇದ್ದು, ಅದಕ್ಕೆ ರಾಜಕೀಯ ಸೇರಬಾರದು. ಸ್ಪೀಕರ್ ಆಗಿದ್ದಾಗ ವಿಧಾನಸೌಧದಲ್ಲಿ ಯಕ್ಷಗಾನ ಮಾಡಿಸಬೇಕು ಎಂದು ಯೋಚಿಸಿದ್ದೆ. ಬುಕ್ ಉತ್ಸವವನ್ನು ವಿಧಾನಸೌಧದಲ್ಲಿ ಮಾಡಿದ್ದೆ. ಉರ್ದು ಹಬ್ಬ ಕೇವಲ 3 ಗಂಟೆಗಳ ಕಾರ್ಯಕ್ರಮವಾಗಿದ್ದು, ಹೆಚ್ಚು ಜನಕ್ಕೆ ತಿಳಿಯಬೇಕು ಎಂಬ ಕಾರಣಕ್ಕೆ ಆಚರಿಸಲು ಹೊರಟಿದ್ದೆವು. ಆದರೆ ಅದರಿಂದ ತೊಂದರೆ ಆಗುತ್ತದೆ ಅಂದರೆ, ಅದನ್ನು ಮಾಡಲು ಹೋಗಲ್ಲ. ಸೌಹಾರ್ದ ಸಮಾಜ, ಬಲಿಷ್ಠ ಭಾರತ ನಮ್ಮ ಕನಸು ಎಂದವರು ತಿಳಿಸಿದ್ದಾರೆ.
ಇದನ್ನೂ ಓದಿ: ‘ಸರ್ಕಾರವೇ ಸಮಾಜದ ಸ್ವಾಸ್ತ್ಯ ಹಾಳು ಮಾಡಲು ನಿಂತಂತೆ ಕಾಣ್ತಿದೆ’: ಉರ್ದು ಹಬ್ಬ ಆಚರಣೆ ನಿರ್ಧಾರಕ್ಕೆ ನಾರಾಯಣಗೌಡ ಕಿಡಿ
ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಉರ್ದು ಹಬ್ಬ ಆಚರಣೆಗೆ ಕನ್ನಡಪರ ಸಂಘಟನೆಗಳು ಮತ್ತು ವಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕನ್ನಡಿಗರ ಮೇಲೆ ಉರ್ದು ಭಾಷಿಕರನ್ನು,ಉರ್ದು ಭಾಷಿಕರ ಮೇಲೆ ಕನ್ನಡಿಗರನ್ನು ಎತ್ತಿಕಟ್ಟುವ ಹುನ್ನಾರ ಇದಾಗಿದ್ದು, ಉರ್ದು ವಾರ್ತೆ ಬಗ್ಗೆ ನಡೆದ ಕೋಮುಗಲಭೆಯನ್ನು ಸರ್ಕಾರ ಮರೆತಿದೆಯೇ? ಎಂದು ಕನ್ನಡಪರ ಹೋರಾಟಗಾರರು ಪ್ರಶ್ನಿಸಿದ್ದರು. ವೋಟ್ ಬ್ಯಾಂಕ್ಗಾಗಿ ಕರ್ನಾಟಕದ ಗೌರವ ಕಳೆಯುವ ಕೆಲಸ ಆಗ್ತಿದೆ. ಕಾಂಗ್ರೆಸ್ ಅಂದ್ರೆ ತಾಲಿಬಾನ್ ಸರ್ಕಾರ ಎಂದು ಜನ ಮಾತಾಡ್ತಿದ್ದಾರೆ. ನೀವು ಕೂಡ ಅದಕ್ಕೆ ಒತ್ತು ಕೊಡುವ ಕೆಲಸವನ್ನೇ ಮಾಡುತ್ತಿದ್ದೀರಿ ಎಂದು ವಿಪಕ್ಷಗಳು ಕೂಡ ಕಿಡಿ ಕಾರಿದ್ದವು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.