ಬೆಂಗಳೂರು, ಅ.05: ನಮ್ಮ ಮೆಟ್ರೋದ ನೇರಳೆ ಬಣ್ಣ (Purple Line Metro)ದ ಬಹು ನಿರೀಕ್ಷಿತ ಕೆಆರ್ಪುರಂ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳು, ಅಕ್ಟೋಬರ್ 6 ರಿಂದ ಕಾರ್ಯನಿರ್ವಹಿಸುವ ಸಾಧ್ಯತೆಯಿದೆ ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿದೆ. ಈ ಎರಡು ಮೆಟ್ರೋ ಮಾರ್ಗಗಳ ಉದ್ಘಾಟನೆಯೊಂದಿಗೆ ನೇರಳೆ ಮಾರ್ಗವು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ. ಇದರಿಂದ ಬೆಂಗಳೂರು ಪೂರ್ವದ ಜನದಟ್ಟಣೆ ಕಡಿಮೆ ಆಗುವ ನಿರೀಕ್ಷೆಯಿದೆ.
ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (CMRS) ಈಗಾಗಲೇ ಎರಡೂ ಮಾರ್ಗಗಳನ್ನು ಪರಿಶೀಲಿಸಿದ್ದಾರೆ. ಜೊತೆಗೆ ಈಗಾಗಲೇ ಕೆಆರ್ಪುರಂ ಯಿಂದ ಬೈಯಪ್ಪನಹಳ್ಳಿ ಸುರಕ್ಷತೆಯ ಅನುಮೋದನೆಯನ್ನು ಸ್ವೀಕರಿಸಿದ್ದಾರೆ. ಕೆಂಗೇರಿ-ಚಲ್ಲಘಟ್ಟ ಮಾರ್ಗಕ್ಕೆ ನಾಳೆ(ಅ.06) ಸಿಎಂಆರ್‌ಎಸ್ ಅನುಮೋದನೆ ದೊರೆಯುವ ನಿರೀಕ್ಷೆಯಿದ್ದು, ಶುಕ್ರವಾರ ಉದ್ಘಾಟನೆಗೆ ಬಿಎಂಆರ್‌ಸಿಎಲ್ ಪ್ಲ್ಯಾನ್ ಮಾಡಿದೆ.
ಈ ಕುರಿತು ಮಾತನಾಡಿದ ಹಿರಿಯ ಅಧಿಕಾರಿಯೊಬ್ಬರು, “ಕೆಂಗೇರಿ-ಚಲ್ಲಘಟ್ಟ ಮಾರ್ಗಕ್ಕೆ ಸಿಎಂಆರ್‌ಎಸ್‌ನಿಂದ ಇನ್ನೂ ಸುರಕ್ಷತೆಯ ಅನುಮೋದನೆ ಸಿಕ್ಕಿಲ್ಲ. ನಾಳೆ ಸಿಗುವ ನಿರೀಕ್ಷೆಯಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಅಕ್ಟೋಬರ್ 6 ರಿಂದ ನೇರಳೆ ಮಾರ್ಗವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಇನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಕೆಆರ್ಪುರಂ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗವನ್ನು ಪ್ರಾರಂಭಿಸಲು ನಿರಂತರ ವಿಳಂಬ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ‘ಪ್ರತಿದಿನ ಸುಮಾರು 5 ರಿಂದ 6 ಲಕ್ಷ ಜನರು ಬೆಂಗಳೂರು ಮೆಟ್ರೋವನ್ನು ಬಳಸುತ್ತಾರೆ. ಬೈಯಪ್ಪನಹಳ್ಳಿ-ಕೆಆರ್ ಪುರಂ ಮೆಟ್ರೋ ವಿಭಾಗವು ತೆರೆದರೆ, ಸುಮಾರು 50-60 ಪ್ರತಿಶತದಷ್ಟು ಜನರಿಗೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರವು ಎಲ್ಲಾ ಅನುಮೋದನೆಗಳು ಮತ್ತು ಹಸಿರು ನಿಶಾನೆಗಳನ್ನು ಪಡೆದಿದ್ದರೂ ಸಹ. ಸಿಎಂಆರ್‌ಎಸ್ ಪರಿಶೀಲನೆಯ ನಂತರವೂ ಈ ಮಾರ್ಗವನ್ನು ತೆರೆಯಲು ವಿಳಂಬ ಮಾಡುತ್ತಿದೆ ಎಂದು ಸೂರ್ಯ ವಾಗ್ದಾಳಿ ನಡೆಸಿದ್ದರು.
ಜುಲೈ ಮಧ್ಯದಲ್ಲಿ ಕೆಆರ್ ಪುರಂ-ಬೈಯಪ್ಪನಹಳ್ಳಿ ಮಾರ್ಗವನ್ನು ಉದ್ಘಾಟಿಸುವ ಗುರಿ ಇದೆ ಎಂದು ಬಿಎಂಆರ್‌ಸಿಎಲ್ ಈ ಹಿಂದೆ ಘೋಷಿಸಿತ್ತು. ಒಮ್ಮೆ ಉದ್ಘಾಟನೆಗೊಂಡರೆ, ನೇರಳೆ ಮಾರ್ಗವು ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಏಕೆಂದರೆ ವೈಟ್‌ಫೀಲ್ಡ್ ಹಲವಾರು ಟೆಕ್ ಪಾರ್ಕ್‌ಗಳನ್ನು ಹೊಂದಿದೆ ಮತ್ತು ನಗರದ ವಿವಿಧ ಭಾಗಗಳ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುತ್ತಾರೆ. ನೇರಳೆ ಮಾರ್ಗದಲ್ಲಿರುವ ಈ 2 ಕಿಮೀ ವಿಸ್ತರಣೆಯು ಬೆಂಗಳೂರು ಪೂರ್ವ , ದಕ್ಷಿಣ ಮತ್ತು ಮಧ್ಯ ಬೆಂಗಳೂರಿನ ಹಲವು ಪ್ರದೇಶಗಳಿಗೆ ಸಂಪರ್ಕಿಸುತ್ತದೆ. ಹೀಗಾಗಿ ಜನರು ಮೆಟ್ರೋವನ್ನು ಬಳಸಲಿದ್ದಾರೆ. ಜೊತೆಗೆ ಇದರಿಂದ ವೈಟ್‌ಫೀಲ್ಡ್ ಪ್ರದೇಶದಲ್ಲಿ ಟ್ರಾಫಿಕ್ ದಟ್ಟಣೆಯು ಕಡಿಮೆಯಾಗುವ ಸಾಧ್ಯತೆಯಿದೆ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:35 pm, Thu, 5 October 23