ಬೆಂಗಳೂರು, ಡಿ.10: ಇತಿಹಾಸ ಪ್ರಸಿದ್ಧ ಬಸವನಗುಡಿಯ ಕಡಲೆಕಾಯಿ ಪರಿಷೆಗೆ (Basavanagudi Kadalekai Parishe 2023) ಕೌಂಟ್ ಡೌನ್ ಆರಂಭವಾಗಿದೆ. ಈಗಾಗಲೇ ಕಡಲೆಕಾಯಿ ಪರಿಷೆ ರಂಗೇರಿದ್ದು ದೊಡ್ಡ ಗಣೇಶ ದೇವಸ್ಥಾನದ ಸುತ್ತ-ಮುತ್ತ ಜಾತ್ರೆಯ ವಾತಾವರಣ ನಿರ್ಮಾಣವಾಗಿದೆ. ಬೀದಿ ಬದಿಗಳಲ್ಲಿ ಕಡಲೆಕಾಯಿ ಮಾರಾಟ ಮಾಡಲಾಗುತ್ತಿದೆ. ಆದರೆ ಕಡಲೆಕಾಯಿ ಪರಿಷೆಗೆ ನಾಳೆ ಅಧಿಕೃತ ಚಾಲನೆ ಸಿಗಲಿದ್ದು ನಾಳೆಯಿಂದ ಮೂರು ದಿನಗಳ ಕಾಲ ಪರಿಷೆ ನಡೆಯಲಿದೆ.
ನಾಳೆಯಿಂದ ಬಸವನಗುಡಿ ಕಡಲೆಕಾಯಿ ಪರಿಷೆಗೆ ಚಾಲನೆ ಸಿಗುವ ಹಿನ್ನೆಲೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಯವರು ದೊಡ್ಡ ಗಣೇಶನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ, ಕಡಲೆಕಾಯಿ ಪರಿಷೆಯ ಸಿದ್ದತೆಗಳನ್ನ ಪರಿಶೀಲಿಸಿದರು. ಸಚಿವರ ಜೊತೆಗೆ ಸ್ಥಳೀಯ ಶಾಸಕ ರವಿ ಸುಬ್ರಮಣ್ಯ, ಮುಜರಾಯಿ ಇಲಾಖೆಯ ಆಯುಕ್ತರು ಭಾಗಿಯಾಗಿದ್ರು.
ಇನ್ನು ಈ ಬಗ್ಗೆ ಮಾತನಾಡಿದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ನಾಳೆಯಿಂದ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಆರಂಭವಾಗಲಿದೆ. ಕಡಲೆಕಾಯಿ ಪರಿಷೆಗೆ ಬೇಕಾದ ಎಲ್ಲಾ ಸಿದ್ಧತೆ ಮಾಡಲಾಗಿದೆ. 600ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಕಡಲೆಕಾಯಿ ಪರಿಷೆಗೆ 7-8 ಲಕ್ಷ ಜನರು ಬರುವ ಸಾಧ್ಯತೆ ಇದೆ. ದೇವಸ್ಥಾನದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಕಡಲೆಕಾಯಿ ಪರಿಷೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಮಂಗಳವಾರ ತೆಪ್ಪೋತ್ಸವ ಇರಲಿದೆ. ಬರುವ ಜನರಿಗೆ ಪ್ರಸಾದದ ವ್ಯವಸ್ಥೆ ಇರಲಿದೆ ಎಂದರು.
ಇದನ್ನೂ ಓದಿ: ಈ ಬಾರಿ ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಸ್ವಚ್ಛತೆಗೆ ಆದ್ಯತೆ, ಬಟ್ಟೆ ಕೈಚೀಲದೊಂದಿಗೆ ಬರುವಂತೆ ಕರೆ
ಇಂದು ಭಾನುವಾರ ಆದ ಹಿನ್ನೆಲೆ ದೊಡ್ಡ ಗಣೇಶನ ದರ್ಶನ ಮಾಡಲು ಸರದಿ ಸಾಲಿನಲ್ಲಿ ನೂರಾರು ಜನ ಕಾಯುತ್ತಿರುವ ದೃಶ್ಯಗಳು ಕಂಡುಬಂದಿವೆ. ಬಸವನಗುಡಿ ಸುತ್ತಮುತ್ತ ಜಾತ್ರೆಯ ವಾತಾವರಣ ನಿರ್ಮಾಣವಾಗಿದ್ದು ದೊಡ್ಡ ಗಣೇಶ ದೇವಸ್ಥಾನದ ಸುತ್ತಮುತ್ತ ಜನವೋ ಜನ ಸೇರಿದ್ದಾರೆ. ಎಲ್ಲಿ ನೋಡಿದರೂ ಜಾತ್ರೆಯ ವಾತಾವರಣವಿದೆ. ಹೀಗಾಗಿ ದೇವಸ್ಥಾನಕ್ಕ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳು ಕ್ಲೋಸ್ ಆಗಿವೆ.
ಈ ವರ್ಷದ ಕಡಲೆಕಾಯಿ ಪರಿಷೆಗೆ ವಿವಿಧ ಜಿಲ್ಲೆಗಳಿಂದ 200 ಜನ ರೈತರು ಹಾಗೂ ತಮಿಳುನಾಡು, ಆಂಧ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ವ್ಯಾಪಾರಸ್ಥರು ಬರಲಿದ್ದು, 15 ಕ್ಕೂ ಹೆಚ್ಚು ಬಗೆಯ ಕಡಲೆಕಾಯಿಗಳ ಸ್ಟಾಲ್ ಗಳನ್ನ ಹಾಕಾಲಾಗಿದೆ. ದೇವಸ್ಥಾನದ ಸುತ್ತಲೂ ಸಿಸಿಟಿವಿ ಕ್ಯಾಮರಾಗಳನ್ನ ಹಾಕಲಾಗಿದೆ. ಯಾವುದೇ ಅವಘಡಗಳು ಸಂಭವಿಸದಂತೆ ಮಾರ್ಷಲ್ಸ್ ಹಾಗೂ ಪೊಲೀಸರ ನಿಯೋಜನೆ ಮಾಡಲಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ