ಅಕ್ಟೋಬರ್ 5ರಂದು ಕನ್ನಂಬಾಡಿ ಅಣೆಕಟ್ಟಿಗೆ ಮುತ್ತಿಗೆ ಹಾಕುತ್ತೇವೆ; ವಾಟಾಳ್ ನಾಗರಾಜ್
ನಾನು ಕಪ್ಪು ಬಟ್ಟೆ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದು, ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಹಾಗೂ ಮಹಿಳೆಯರ ಗೌರವದ ಸಂಕೇತ ಸಾರುವ ಬುರ್ಖಾ ಧರಿಸಿದ್ದೇನೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಬೆಂಗಳೂರು, ಸೆ.29: ರಾಜ್ಯದಲ್ಲಿ ಕಾವೇರಿ ಕಿಚ್ಚು ಹೊತ್ತಿ ಉರಿಯುತ್ತಿದೆ. ಅದರಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿ ಇಂದು(ಸೆ.29) ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ (Vatal Nagaraj) ನೇತೃತ್ವದಲ್ಲಿ ಕರ್ನಾಟಕ ಬಂದ್ಗೆ ಕರೆ ನೀಡಲಾಗಿತ್ತು. ಈ ಹಿನ್ನಲೆ ಬುರ್ಖಾ ಧರಿಸಿ ಖಾಲಿ ಬಿಂದಿಗೆ ಹಿಡಿದು ವಿಭಿನ್ನವಾಗಿ ಬಂದ ವಾಟಾಳ್, ಬೆಂಗಳೂರಿನ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದ ಬಳಿ ವಿನೂತನ ಪ್ರತಿಭಟನೆ ನಡೆಸಿದರು. ಈ ಕುರಿತು ಮಾತನಾಡಿದ ಅವರು ‘ ರಾಜ್ಯ ಸರ್ಕಾರ ಕರ್ನಾಟಕದಲ್ಲಿ ಪೊಲೀಸ್ ಭದ್ರತೆ ನಿಯೋಜಿಸಿ, ಬಂದ್ ಹತ್ತಿಕ್ಕುವ ಯತ್ನ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ
‘ಕಾವೇರಿ ನೀರಿಗಾಗಿ ನಾವು ಕರೆ ನೀಡಿರುವ ಬಂದ್ಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಬಂದ್ಗೆ ಸಹಕಾರ ನೀಡಿದ ರಾಜ್ಯದ ಜನತೆಗೆ ಧನ್ಯವಾದ ತಿಳಿಸುತ್ತೇನೆ. ಆದರೆ, ಸರ್ಕಾರ ನಮ್ಮ ಕಾರ್ಯಕರ್ತರನ್ನು ತಡೆದು ಬಂಧಿಸಲಾಗುತ್ತಿದೆ. ಪೊಲೀಸ್ ಗೂಂಡಾಗಿರಿ, ದೌರ್ಜನ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಶಾಂತಿಯುತವಾಗಿ ಪ್ರತಿಭಟನೆ, ಮೆರವಣಿಗೆ ಮಾಡಿದ್ರೆ ತಪ್ಪಾ?. ಟೌನ್ಹಾಲ್ ಮುಂದೆ ಪ್ರತಿಭಟನೆಗೆ ಅವಕಾಶ ನೀಡದೆ ದೌರ್ಜನ್ಯ ಮಾಡುತ್ತಿದೆ. ರಾಜ್ಯ ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ರಾಜ್ಯ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಿಎಂ, ಡಿಸಿಎಂ, ಗೃಹ ಸಚಿವರ ವಿರುದ್ಧ ವಾಟಾಳ್ ನಾಗರಾಜ್ ಕಿಡಿಕಾರಿದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಕಾವೇರಿ ಕಿಚ್ಚು: ಫ್ರೀಡಂ ಪಾರ್ಕ್ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತ
ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ
ಇನ್ನು ಇದೇ ವೇಳೆ ‘ನಾನು ಕಪ್ಪು ಬಟ್ಟೆ ಧರಿಸಿ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದು, ನ್ಯಾಯದೇವತೆ ಧರಿಸುವ ಬಟ್ಟೆ ಅಥವಾ ಬುರ್ಖಾ ಎಂದಾದರೂ ಕರೆಯಲಿ. ನ್ಯಾಯದೇವತೆಯ ಸಂದೇಶ ಹಾಗೂ ಮಹಿಳೆಯರ ಗೌರವದ ಸಂಕೇತ ಸಾರುವ ಬುರ್ಖಾ ಧರಿಸಿದ್ದೇನೆ. ಕಾವೇರಿ ನದಿ ನೀರು ವಿಚಾರವಾಗಿ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ ಎಂದರು.
ನೀವು ಪರಮೇಶ್ವರ್ ಅಲ್ಲ ಪರಮೇಶ್ವರ ಎಂದು ಲೇವಡಿ
‘ಫ್ರೀಡಂಪಾರ್ಕ್ನಲ್ಲಿ ಮಾತ್ರ ಪ್ರತಿಭಟನೆ ಮಾಡಬೇಕಾ? ಟೌನ್ಹಾಲ್ನಿಂದ ಪ್ರತಿಭಟನೆ ಮಾಡಿದರೆ ಅವಕಾಶ ನೀಡಲ್ವಾ?. ವಿಶ್ವಸಂಸ್ಥೆ ನಿಮಗೆ ಪರವಾನಗಿ ನೀಡಿದೆಯಾ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಟೌನ್ಹಾಲ್ ಮುಂದೆ ಮೆರವಣಿಗೆ ಮಾಡಿದ್ರೆ ಕಾನೂನು ಮಾಡುತ್ತೀರಾ, ಫ್ರೀಡಂಪಾರ್ಕ್ನಲ್ಲಿ ಏನು ಬೇಕಾದರೂ ಮಾಡಬಹುದಾ ಎನ್ನುವ ಮೂಲಕ ಗೃಹಮಂತ್ರಿಗಳೇ ನೀವು ಎಂದಾದರೂ ಹೋರಾಟ ಮಾಡಿದ್ದೀರಾ? ಎಂದು ಪ್ರಶ್ನಿಸಿ, ಒಂದು ಕಡೆ ಪರಮೇಶ್ವರ, ಮತ್ತೊಂದು ಕಡೆ ಅವರ ಮಗ ಶಿವಕುಮಾರ ಇವರ ನಡುವೆ ಸಿದ್ದರಾಮೇಶ್ವರ ಇದ್ದಾರೆ ಎಂದು ವಾಟಾಳ್ ನಾಗರಾಜ್ ಲೇವಡಿ ಮಾಡಿದ್ದಾರೆ. ಇದೇ ವೇಳೆ ಅಕ್ಟೋಬರ್ 5ರಂದು ಕನ್ನಂಬಾಡಿ ಅಣೆಕಟ್ಟಿಗೆ ಮುತ್ತಿಗೆ ಹಾಕುತ್ತೇವೆ ಎನ್ನುವ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನೂ ಓದಿ:ತಮಿಳುನಾಡು ಗಡಿಯಲ್ಲಿ ಭುಗಿಲೆದ್ದ ಕಾವೇರಿ ಕಿಚ್ಚು: ಸೋಲೂರು ಬಳಿ ಕರವೇ ಕಾರ್ಯಕರ್ತರು ಪೊಲೀಸ್ ವಶಕ್ಕೆ
ಟೌನ್ಹಾಲ್ ಬಳಿಗೆ ಆಗಮಿಸಿದ ವಾಟಾಳ್ ನಾಗರಾಜ್ ವಶಕ್ಕೆ
ಬೆಂಗಳೂರಿನ ಟೌನ್ಹಾಲ್ ಬಳಿಗೆ ಪ್ರತಿಭಟನೆ ನಡೆಸಲು ಆಗಮಿಸಿದ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಎಂಟಿಸಿ ಬಸ್ನಲ್ಲಿ ಫ್ರೀಡಂಪಾರ್ಕ್ಗೆ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ಕರೆದೊಯ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ