ಬೆಂಗಳೂರು, (ಜನವರಿ 08): ಎರಡು ದಿನದ ಅಂತರದಲ್ಲಿ ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ( Bmtc) ಬಲಿಯಾಗಿದೆ. ಬಿಎಂಟಿಸಿ ಬಸ್‌ನಡಿ ಸಿಲುಕಿ ಯುವಕನೊರ್ವ ಮೃತಪಟ್ಟಿದ್ದಾನೆ. ತೇಜಸ್ (22) ಮೃತ ದುರ್ದೈವಿ. ಬೆಂಗಳೂರಿನ ಉತ್ತರಹಳ್ಳಿ ರಸ್ತೆಯ ಮಂತ್ರಿ ಆಲ್ಪೈನ್ ಅಪಾರ್ಟ್ಮೆಂಟ್ ಮುಂಭಾಗ ಈ ದುರ್ಘಟನೆ ನಡೆದಿದೆ. ಮೈಸೂರು ರಸ್ತೆಯಿಂದ ಉತ್ತರಹಳ್ಳಿ ಕಡೆಗೆ ತೇಜಸ್ ಬೈಕ್‌ನಲ್ಲಿ ಹೋಗುತ್ತಿದ್ದ. ಆ ವೇಳೆ ಎದುರಿಗೆ ಇದ್ದ ಬಸ್ ಅನ್ನು ಓವರ್ ಟೇಕ್ ಮಾಡಲು ಹೋಗಿದ್ದಾನೆ. ಆದರೆ ನಿಯಂತ್ರಣ ತಪ್ಪಿ ಬೈಕ್‌ನಿಂದ ಕೆಳ ಬಿದ್ದ ತೇಜಸ್ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಇದರಿಂದ ತೇಜಸ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೆ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಬಿಎಂಟಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ವೋಲ್ವೋ ಬಸ್ಗೆ ಬೈಕ್ ಸವಾರ ಬಲಿ
ಮೊನ್ನೇ ಜ.6ರಂದು ಮಾರತ್ತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್. ಬೈಕ್‌ಗೆ ಡಿಕ್ಕಿಯಾಗಿ ಹೊಡೆದಿತ್ತು. ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರಿಗೆ ಬೈಕ್ ಸವಾರ ಎಳಂಗೋವನ್ ಸೆಂಕತ್ತವಲ್ (43) ತೆರಳುತಿದ್ದ, ಅದೇ ಮಾರ್ಗದಲ್ಲಿ ಬಿಎಂಟಿಸಿ ವೋಲ್ವೋ ಬಸ್ ಬರುತ್ತಿತ್ತು. ಈ ವೇಳೆ ವೋಲ್ವೋ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಸವಾರ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಿಂದ ತಲೆ ಹಾಗೂ ಮುಖದ ಭಾಗಕ್ಕೆ ಬಲವಾದ ಗಾಯವಾಗಿದ್ದು, ಕೂಡಲೇ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಸೇರುವ ಮೊದಲೇ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 5:19 pm, Mon, 8 January 24