ಹಿಂದೂಗಳಿಗೆ ಮಾತ್ರ ಮನೆ ಕೊಡ್ತೀವಿ, ಮುಸ್ಲಿಂ ಆದ್ರೆ ಬೇಡ: ಸ್ಕ್ರೀನ್​ಶಾಟ್​ ಜೊತೆಗೆ ದುಃಖ ತೋಡಿಕೊಂಡ ಮಹಿಳೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 23, 2022 | 7:40 AM

‘ಎಲ್ಲರೂ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ನನ್ನ ಆಗಸ್ಟ್​ 15 ಹೀಗೆ ಕಳೆಯಿತು’ ಎಂದು ಹೈಫಾ ಒಕ್ಕಣೆ ಬರೆದುಕೊಂಡಿದ್ದಾರೆ.

ಹಿಂದೂಗಳಿಗೆ ಮಾತ್ರ ಮನೆ ಕೊಡ್ತೀವಿ, ಮುಸ್ಲಿಂ ಆದ್ರೆ ಬೇಡ: ಸ್ಕ್ರೀನ್​ಶಾಟ್​ ಜೊತೆಗೆ ದುಃಖ ತೋಡಿಕೊಂಡ ಮಹಿಳೆ
ಮುಸ್ಲಿಂ ಮಹಿಳೆ ಹಂಚಿಕೊಂಡಿರುವ ಸ್ಕ್ರೀನ್​ಶಾಟ್ (ಎಡಚಿತ್ರ). ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿದ್ದ ಫೋಟೊ
Follow us on

ಬೆಂಗಳೂರು: ನಗರದಲ್ಲಿ ಬಾಡಿಗೆಗೆ ಮನೆ (Rent House) ಹುಡುಕುವುದು ಹುಡುಗಾಟದ ಮಾತಲ್ಲ. ಮೊದಲು ಮನೆ ಹಿಡಿಸಬೇಕು, ಮಾಲೀಕರಿಗೆ ಬಾಡಿಗೆದಾರರು, ಬಾಡಿಗೆದಾರರಿಗೆ ಮಾಲೀಕರು ಇಷ್ಟವಾಗಬೇಕು, ಅಕ್ಕಪಕ್ಕದವರು ಹೊಂದಿಕೊಳ್ಳುವಂಥವರಾಗಿರಬೇಕು ಇಷ್ಟೆಲ್ಲಾ ಆದ ಮೇಲೆ ಅಡ್ವಾನ್ಸ್​, ಬಾಡಿಗೆ, ಮನೆ ಬಿಡುವಾಗ ಪೇಂಟಿಂಗ್ ಇತ್ಯಾದಿ ಖರ್ಚುವೆಚ್ಚದ ನಿಷ್ಕರ್ಶೆಯಾಗಬೇಕು. ಇಷ್ಟೆಲ್ಲ ಆದ ಮೇಲೆ ಬಾಡಿಗೆ ಮನೆಗೆ ಗೃಹಪ್ರವೇಶ. ಪ್ರತಿ ಏರಿಯಾಗಳಲ್ಲಿಯೂ ಮನೆ ಹುಡುಕಿಕೊಡುವ ದಲ್ಲಾಳಿಗಳು ಮೊದಲಿನಿಂದಲೂ ಇದ್ದಾರೆ. ಈಗ ‘ನೊ ಬ್ರೋಕರ್ ಡಾ ಕಾಂ’ ಸೇರಿದಂತೆ ಹಲವು ಆನ್​ಲೈನ್ ಸೇವೆಗಳೂ ಲಭ್ಯವಿದೆ. ಇಷ್ಟೆಲ್ಲದರ ನಡುವೆ ಮನೆಗಾಗಿ ಹುಡುಕಾಡುವವರು ಆಹಾರ ಪದ್ಧತಿಯ ಬಗ್ಗೆಯೂ ಮಾಲೀಕರಿಂದ ಹಲವು ಪ್ರಶ್ನೆಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ.

‘ನೀವು ವೆಜ್ಜಾ? ನಾನ್​ವೆಜ್ಜಾ? (Vegetarian or Non Vegetarian) ಮನೇಲೀ ಮಟನ್ ಮಾಡ್ತೀರಾ? ಹೊರಗೇ ತಿಂದು ಬರ್ತೀರಾ?’ ಇತ್ಯಾದಿ ಪ್ರಶ್ನೆಗಳಿಗೂ ಬಾಡಿಗೆದಾರರು ಉತ್ತರ ಕೊಡಬೇಕಾದ ಪರಿಸ್ಥಿತಿ ಬೆಂಗಳೂರಿನಲ್ಲಿದೆ. ಮುಸ್ಲಿಮರು ಮನೆಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಂದಾಗ ‘ಹಿಂದೂಗಳಿಗೆ ಮಾತ್ರ’ ಎಂದು ಕೆಲ ಮನೆಗಳ ಮಾಲೀಕರು ಮುಖಕ್ಕೆ ಹೊಡೆದಂತೆ ಹೇಳುವುದು ಸಾಮಾನ್ಯ ಸಂಗತಿ. ಮನೆ ಬಾಡಿಗೆಗೆ ಕೇಳಿದವರು ಮತ್ತು ಮಾಲೀಕರ ನಡುವೆ ನಡೆದ ಇಂಥದ್ದೇ ಒಂದು ವಾಟ್ಸ್ಯಾಪ್ ಸಂವಾದದ ಸ್ಕ್ರೀನ್​ಶಾಟ್ (Screenshot of WhatsApp Chat) ಇದೀಗ ವೈರಲ್ ಆಗಿದೆ.

ಹೈಫಾ ಹೆಸರಿನ ಮಹಿಳೆಯು ಬೆಂಗಳೂರಿನ ವಿವಿಧೆಡೆ ಬಾಡಿಗೆ ಮನೆಗಾಗಿ ಹುಡುಕಾಡಿದ್ದಾರೆ. ಈ ವೇಳೆ ಮನೆ ಮಾಲೀಕರು ಮತ್ತು ಆಕೆಯ ನಡುವೆ ನಡೆದ ಸಂವಾದವನ್ನು ಹೈಫಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಸಾಕಷ್ಟು ಜನರು ಈ ಟ್ವೀಟ್​ಗೆ ತಮ್ಮ ಅನುಭವಗಳನ್ನು, ಸಲಹೆಗಳನ್ನು ಉಲ್ಲೇಖಿಸಿ ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಹಿಂದೂಗಳಿಗೆ ಮಾತ್ರ: ಮುಸ್ಲಿಮರಿಗೆ ಮನೆ ಬಾಡಿಗೆಗೆ ಕೊಡುವುದಿಲ್ಲ ಫಲಕ ಹಾಕಿದ ಮಾಲೀಕ

ಇಬ್ಬರು ಪ್ರತ್ಯೇಕ ಮನೆ ಮಾಲೀಕರೊಂದಿಗಿನ ಸಂವಾದವನ್ನು ಹೈಫಾ ಹಂಚಿಕೊಂಡಿದ್ದಾರೆ. ಒಂದು ಮಾತುಕತೆಯಲ್ಲಿ ಸಂಬಂಧಿಸಿದ ವ್ಯಕ್ತಿಯು, ‘ಮನೆ ಏನೋ ಲಭ್ಯವಿದೆ. ಆದರೆ ಮಾಲೀಕರು ಕೇವಲ ಹಿಂದೂಗಳಿಗೆ ಮಾತ್ರ ಕೊಡುವುದಾಗಿ ಹೇಳುತ್ತಿದ್ದಾರೆ’ ಎಂದು ಹೇಳಲಾಗಿದೆ. ‘ಎಲ್ಲರೂ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದರೆ, ನನ್ನ ಆಗಸ್ಟ್​ 15 ಹೀಗೆ ಕಳೆಯಿತು’ ಎಂದು ಹೈಫಾ ಒಕ್ಕಣೆ ಬರೆದುಕೊಂಡಿದ್ದಾರೆ.

11,000 ಲೈಕ್ ಮತ್ತು ಸಾವಿರಾರು ಮಂದಿಯ ಪ್ರತಿಕ್ರಿಯೆಯೊಂದಿಗೆ ಹೈಫಾ ಅವರ ಪೋಸ್ಟ್ ವೈರಲ್ ಆಗಿದೆ. ಸಮಾಜದ ಒಂದು ವರ್ಗವು ಅವರ ಪರಿಸ್ಥಿತಿಗೆ ವಿಷಾದ ವ್ಯಕ್ತಪಡಿಸಿದ್ದರೆ, ಒಂದಿಷ್ಟು ಜನರು ಮನೆ ಮಾಲೀಕರ ನಿರ್ಧಾರವನ್ನು ಬೆಂಬಲಿಸಿದ್ದಾರೆ. ಹಲವರು ತಾವು ಅನುಭವಿಸಿದ ಸಂಕಷ್ಟವನ್ನೂ ವಿವರಿಸಿದ್ದಾರೆ.

ಇದಂತೂ ತೀರಾ ಖೇದಕರವಾದುದು ನಿಮಗೆ ಇಂಥ ಪರಿಸ್ಥಿತಿ ಬರಬಾರದಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ‘ಅದು ಅವರ ಮನೆ. ಅವರಿಗೆ ಒಂದಿಷ್ಟು ನಂಬಿಕೆಗಳು ಇರುತ್ತವೆ. ಅವರಿಗೆ ಇಷ್ಟ ಬಂದವರಿಗೆ ಮನೆ ಕೊಡುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ’ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

‘ನನಗೂ ಬೆಂಗಳೂರಿನಲ್ಲಿದ್ದಾಗ ಇಂಥದ್ದೇ ಅನುಭವವಾಗಿತ್ತು. ನಾವು ನಾಲ್ವರು ಗೆಳೆಯರು ಒಂದೆ ಮನೆ ಮಾಡಿಕೊಂಡಿದ್ದೆವು. ಈ ಪೈಕಿ ಇಬ್ಬರು ಹಿಂದೂಗಳು ಮತ್ತು ಇಬ್ಬರು ಮುಸ್ಲಿಮರು. ಮನೆ ಮಾಲೀಕರು ಕೇವಲ ಹಿಂದೂಗಳು ಮಾತ್ರ ಇರಬಹುದು ಎಂದು ತಾಕೀತು ಮಾಡಿದಾಗ ನಾವು ನಾಲ್ವರೂ ಆ ಮನೆಯಿಂದ ಹೊರಗೆ ಬಂದೆವು. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 7:40 am, Tue, 23 August 22