ಬೆಂಗಳೂರು: ಒಂದು ಕಡೆ ಬಿಬಿಎಂಪಿ ಅಧಿಕಾರಿಗಳಿಗೆ ದಸರಾ ಹಬ್ಬದ ಸಂಭ್ರಮವಾದರೆ ಮತ್ತೊಂದು ಕಡೆ ಭಾರಿ ಮಳೆಗೆ ಬೆಂಗಳೂರಿನ ಜನತೆ ಪರದಾಡುವಂತಾಗಿದೆ. ದಸರಾ ಹಬ್ಬಕ್ಕೆ ವಾಹನಗಳ ಪೂಜೆಗೆ ಸಿದ್ಧತೆ ಮಾಡಿಕೊಂಡವರಿಗೆ ಶಾಕ್ ಆಗಿದ್ದು ಮಳೆ ನೀರಿನಲ್ಲಿ ವಾಹನಗಳು ಜಲಾವೃತಗೊಂಡಿವೆ.
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಭಾರಿ ಸಮಸ್ಯೆಗಳು ಎದುರಾಗುತ್ತಿವೆ. ನಿನ್ನೆ ಸುರಿದ ಭಾರಿ ಮಳೆಗೆ ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಬೈಕ್, ಕಾರುಗಳು ಜಲಾವೃತಗೊಂಡಿವೆ. ನಗರದ ಕೋಡಿಚಿಕ್ಕನಹಳ್ಳಿಯ ಅಬ್ಬಯ್ಯ ಲೇಔಟ್‌ನ ಮನೆಯೊಳಗೆ 3 ಅಡಿಯಷ್ಟು ಮಳೆ ನೀರು ನಿಂತಿದ್ದು ಪೂಜೆಗೂ ಜಾಗವಿಲ್ಲದೆ ದಸರಾ ಹಬ್ಬ ಮಾಡಲಾಗದೆ ಜನ ಪರದಾಡುತ್ತಿದ್ದಾರೆ. ಆಯುಧ ಪೂಜೆಗೆಂದು ನಿನ್ನೆ ಫ್ಯಾಕ್ಟರಿ ಸ್ವಚ್ಛ ಮಾಡಿ, ಯಂತ್ರೋಪಕರಣಗಳಿಗೆ ಅಲಂಕಾರ ಮಾಡಿ ಮನೆಗೆ ಹೋಗಿದ್ದ ಮಾಲೀಕ ಇಂದು ಬಂದು ನೋಡಿದರೆ ಇಡೀ ಫ್ಯಾಕ್ಟರಿ ಮಳೆ ನೀರಿನಲ್ಲಿ ಮುಳುಗಿ ಹೋಗಿದೆ. ನಿನ್ನೆ ಮಧ್ಯ ರಾತ್ರಿಯಿಂದಲೇ ಮನವಿ ಮಾಡಿದ್ರು ಬಿಬಿಎಂಪಿ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ. ಮಳೆ ದಸರಾ ಸಂಭ್ರಮವನ್ನೇ ಕಿತ್ತುಕೊಂಡಿದೆ.
ಮಡಿವಾಳ ಮತ್ತು ಬಿಟಿಎಂ ಲೇಔಟ್ ಜಲಾವೃತ
ಇನ್ನು, ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಮಡಿವಾಳ ಮತ್ತು ಬಿಟಿಎಂ ಲೇಔಟ್ ಜಲಾವೃತಗೊಂಡಿದ್ದು, ಲೇಔಟ್ ನಿವಾಸಿಗಳ ಪರದಾಟ ಹೇಳತೀರದಾಗಿದೆ. ರಸ್ತೆಯಲ್ಲಿ ನಿಲ್ಲಿಸಿದ್ದ ಕಾರುಗಳು, ಬೈಕ್‌ಗಳು ಜಲಾವೃತಗೊಂಡಿವೆ. ಐಷಾರಾಮಿ ಕಾರುಗಳು ಮಳೆ ನೀರಿನಲ್ಲಿ ಮುಳುಗಿವೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದುವರಿದ ಮಳೆ ಅಬ್ಬರ: ಮೆಜೆಸ್ಟಿಕ್ ಬಳಿ ಕೆಎಸ್ಆರ್ಟಿಸಿ ಬಸ್ ಮೇಲೆ ಬಿದ್ದ ಮರ