ಬೆಂಗಳೂರು, ಫೆ.27: ರಾಜ್ಯಸಭಾ ಚುನಾವಣೆ(Rajyasabha Election)ಫಲಿತಾಂಶ ಬಂದಿದ್ದು, ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಸಂಭ್ರಮಾಚರಣೆ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದರು. ಈ ವೇಳೆ ನಾಸಿರ್ ಹುಸೇನ್ ಹುಸೇನ್ ಪಕ್ಕದಲ್ಲಿ ಇದ್ದ ಯುವಕ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾನೆ. ಈ ಕುರಿತು ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಜೊತೆಗೆ ನಾಳೆ(ಫೆ.28) ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮತ್ತು ಕಾಂಗ್ರೆಸ್ ಕಚೇರಿಗಳಿಗೆ ಮುತ್ತಿಗೆಗೆ ವಿಪಕ್ಷ ಬಿಜೆಪಿ ಕರೆ ಕೊಟ್ಟಿದ್ದಾರೆ.
ಘಟನೆ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಆರ್ ಅಶೋಕ, ‘ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆ ನಾಚಿಕೆ ಇಲ್ಲ.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯಪಾಲರು ಕಾಂಗ್ರೆಸ್ ಸರ್ಕಾರವನ್ನು ಕೂಡಲೇ ವಜಾ ಮಾಡಲಿ, ಈ ಪಾಕ್ ಪರ ಘೋಷಣೆ ಕೂಗಿರುವ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ ನಡೆಸಿದರು.
ಈ ಕುರಿತು ಎಕ್ಸ್ನಲ್ಲಿ ‘ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸೌಧದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಈ ಘಟನೆ ಕಾಂಗ್ರೆಸ್ ಪಕ್ಷದ ವಿಕೃತ, ದೇಶದ್ರೋಹಿ ಮನಸ್ಥಿತಿಯನ್ನು ಪ್ರದರ್ಶನ ಮಾಡಿದೆ. ಚುನಾವಣೆಯಲ್ಲಿ ಗೆದ್ದಿದ್ದರೆ ನಿಮ್ಮ ಅಭ್ಯರ್ಥಿಗಳಿಗೆ ಜೈಕಾರ ಹಾಕಿ, ನಿಮ್ಮ ಪಕ್ಷಕ್ಕೆ ಜೈಕಾರ ಹಾಕಿ, ನಿಮ್ಮ ನಾಯಕರಿಗೆ ಜೈಕಾರ ಹಾಕಿ, ಅದು ಬಿಟ್ಟು ಪಾಕಿಸ್ತಾನ ಜಿಂದಾಬಾದ್ ಎಂದು ನಿಮ್ಮ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗುತ್ತಾರಲ್ಲ ಸಿಎಂ ಸಿದ್ದರಾಮಯ್ಯ ಅವರೇ, ಮೂರು ರಾಜ್ಯಸಭೆ ಸ್ಥಾನ ಗೆದ್ದ ಮಾತ್ರಕ್ಕೆ ಮತೊಮ್ಮೆ ದೇಶ ವಿಭಜನೆ ಮಾಡಬಹುದು ಎಂದು ಕೊಂಡಿದ್ದೀರಾ?, ಪಾಕಿಸ್ತಾನ ಜಿಂದಾಬಾದ್ ಎಂಬುದೇ ಕಾಂಗ್ರೆಸ್ ಪಕ್ಷದ ಆತ್ಮಸಾಕ್ಷಿನಾ ಡಿಕೆ ಶಿವಕುಮಾರ್ ಅವರೇ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ವಿಧಾನಸೌಧದಲ್ಲಿ ರಾಜ್ಯಸಭಾ ಗೆಲುವಿನ ಸಂಭ್ರಮದ ವೇಳೆ ಮೊಳಗಿದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ!
ರಾಷ್ಟ್ರದ ವಿಭಜನೆ ಮಾಡುವ ದಿಕ್ಕಿನಲ್ಲಿ ಡಿ.ಕೆ.ಸುರೇಶ್ ಹೇಳಿಕೆ ಕೊಟ್ಟಿದ್ದರು, ಖರ್ಗೆ ಅವರು ಅವರ ಹೇಳಿಕೆ ಖಂಡಿಸಿದ್ದರು. ಆದರೆ, ಡಿಕೆಶಿ ತಮ್ಮನ ಪರವಾಗಿ ನಿಂತರು. ರಾಜ್ಯಸಭೆ ಚುನಾವಣೆ ಗೆದ್ದ ಜೋಶ್ ಭಾರತದ ಪರವಾಗಿ ಇರಬೇಕಿತ್ತು ‘ಭಾರತ ಮಾತಾಕೀ ಜೈ ಎಂದು ಘೋಷಣೆ ಕೂಗಬೇಕಿತ್ತು. ಆದರೆ, ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ಈ ಘಟನೆ ನೋಡುತ್ತಿದ್ದರೆ ರಾಜ್ಯ ಸರಕಾರ ಪಾಕಿಸ್ತಾನದ ಪರವಾಗಿ ಇದೆಯಾ ಅಥವಾ ಭಾರತ ದೇಶದ ಪರವಾಗಿ ಇದೆಯಾ ಸ್ಪಷ್ಟಪಡಿಸಬೇಕು ಎಂದರು.
‘ಕಾಂಗ್ರೆಸ್ ಶಾಸಕರು ಜಿನ್ನಾ ಸಂಸ್ಕೃತಿ ಮುಂದುವರಿಸುತ್ತಿದ್ದು, ಈ ಘಟನೆಯಿಂದ ಕಾಂಗ್ರೆಸ್ ಶಾಸಕರು ತಲೆ ತಗ್ಗಿಸುವಂತಾಯ್ತು. ಇದನ್ನು ಕಾಂಗ್ರೆಸ್ ಶಾಸಕರು ಖಂಡಿಸಬೇಕು. ಜೊತೆಗೆ ನಾಸೀರ್ ಹುಸೇನ್ ರಾಜ್ಯದ ಜನರ ಕ್ಷಮೆ ಕೇಳಬೇಕು. ಪಾಕಿಸ್ತಾನದ ಪರವಾಗಿ ನಾವಿದ್ದರೆ ಹೆಚ್ಚಿನ ಬಲ ಸಿಗುತ್ತದೆ ಎಂಬ ಭ್ರಮೆ ಕಾಂಗ್ರೆಸ್ ನಾಯಕರದ್ದಾಗಿದೆ. ಕಾಂಗ್ರೆಸ್ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಮುಸ್ಲಿಂರ ಸಂತೃಪ್ತಿಪಡಿಸೋದು ನಮ್ಮ ಹಕ್ಕು ಎಂಬುದು ಕಾಂಗ್ರೆಸ್ ನದ್ದಾಗಿದೆ. ಕಾಶ್ಮೀರದಲ್ಲಿ ಈ ರೀತಿ ನಡೆಯುತಿತ್ತು. ಅದರ ಛಾಯೆ ಕರ್ನಾಟಕದ ಮೇಲೆ ಬೀಳುತ್ತಿದೆ. ಅಂತಹ ವ್ಯಕ್ತಿಯನ್ನ ರಾಜ್ಯ ಸಭೆಗೆ ಆಯ್ಕೆ ಮಾಡಿರುವುದು ತುಂಬಾ ನೋವಾಗಿದೆ ಎಂದರು.
ಇದನ್ನೂ ಓದಿ:ವಿಧಾನಸೌಧದಲ್ಲಿ ರಾಜ್ಯಸಭಾ ಗೆಲುವಿನ ಸಂಭ್ರಮದ ವೇಳೆ ಮೊಳಗಿದ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ!
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ, ‘ಕಾಂಗ್ರೆಸ್‌ನ 3 ಅಭ್ಯರ್ಥಿಗಳು ಗೆದ್ದ ಬಳಿಕ ಪಾಕ್ ಪರ ಘೋಷಣೆ ಕೂಗಿದ್ದಾರೆ. ಇದು ಮಹಾ ಅಪರಾಧ. ಪಾಕಿಸ್ತಾನ ಹುಟ್ಟಿದ್ದೇ ಭಾರತದ ಮೇಲೆ ದ್ವೇಷ ಮತ್ತು ಹಿಂದೂಗಳ ಮಾರಣ ಹೋಮದಿಂದ. ಕಾಲು ಕೆರೆದು ಪಾಕ್ 1948, 1965, 1973ರಲ್ಲಿ ದಾಳಿ ಮಾಡಿತ್ತು. ಇಂತಹ ಪಾಕಿಸ್ತಾನ ಪರ ಘೋಷಣೆ ಕೂಗಿದ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಕಿಡಿಕಾರಿದರು.
ವಿಧಾನಸೌಧದ ಲಾಂಜ್ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹಿನ್ನಲೆ ವಿಧಾನಸೌಧ ಪೊಲೀಸ್ ಠಾಣೆಗೆ ಪ್ರತಿಪಕ್ಷ ಬಿಜೆಪಿ ದೂರು ಸಲ್ಲಿಸಿದ್ದು, ಠಾಣೆ ಎದುರೆ ಬಿಜೆಪಿ ಶಾಸಕರ ಪ್ರತಿಭಟನೆ ನಡೆಸಿದ್ದಾರೆ. ವಿಧಾನಸಭೆ ವಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಶಾಸಕರಾದ ಡಾ. ಭರತ್ ಶೆಟ್ಟಿ, ಹರೀಶ್ ಪೂಂಜ, ಜ್ಯೋತಿ ಗಣೇಶ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಪಾಕ್ ಪರವಾಗಿ ಘೋಷಣೆ ಕೂಗಿದ ವಿಚಾರ, ‘ಕೋಲಾರದಲ್ಲಿ ಶ್ರೀರಾಮ ಸೇನೆ ಪ್ರತಿಭಟನೆ ನಡೆಸಿದೆ. ನಗರದ ಹೊಸ ಬಸ್ ನಿಲ್ದಾಣ ವೃತ್ತದಲ್ಲಿ ನಾಸೀರ್ ಹುಸೇನ್ ಬಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಸರ್ಕಾರದ ವಿರುದ್ದ ಹಾಗೂ ನಾಸೀರ್ ಹುಸೇನ್ ವಿರುದ್ದ ಪ್ರತಿಭಟನಾಕಾರರು ಘೋಷಣೆ ಕೂಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 pm, Tue, 27 February 24